ಜ. 25ರ ಕರ್ನಾಟಕ ಬಂದ್‌ಗೆ ಬೆಂಬಲಿಸಲು ಮನವಿ

Update: 2018-01-17 12:37 GMT

ಬೆಂಗಳೂರು, ಜ. 17: ಮಹಾದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಹಾಗೂ ಗೋವಾ ರಾಜ್ಯದ ನೀರಾವರಿ ಸಚಿವ ವಿನೋದ್ ಪಾಲೇಕರ್ ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ಇದೇ 25ರಂದು ಹಮ್ಮಿಕೊಂಡಿರುವ ‘ಕರ್ನಾಟಕ ಬಂದ್’ಗೆ ರಾಜಕೀಯ ಪಕ್ಷಗಳು ಸೇರಿದಂತೆ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಬೇಕೆಂದು ಕನ್ನಡಪರ ಸಂಘಟನೆಗಳ ಒಕ್ಕೂಟ ಮನವಿ ಮಾಡಿದೆ.

ಬುಧವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಜ.25ರಂದು ಹಮ್ಮಿಕೊಂಡಿರುವ ಕರ್ನಾಟಕ ಬಂದ್‌ಗೆ ನಾಡಿನ ವಿವಿಧ ಸಂಘಟನೆಗಳ ಜೊತೆಗೆ ಪೆಟ್ರೋಲ್ ಬಂಕ್, ಚಿತ್ರಮಂದಿರ, ಹೊಟೇಲ್, ವಿದ್ಯಾ ಸಂಸ್ಥೆಗಳು, ವಾಣಿಜ್ಯ ವ್ಯವಹಾರಗಳ ಮಾಲಕರು ಸೇರಿದಂತೆ ಪ್ರತಿಯೊಬ್ಬ ನಾಗರಿಕರು ಬೆಂಬಲ ಸೂಚಿಸುವ ಮೂಲಕ ಗೋವಾ ಸರಕಾರಕ್ಕೆ ಕನ್ನಡಿಗರ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಹೋರಾಟ ಸಾರ್ವಕಾಲಿಕ ಇತಿಹಾಸದಲ್ಲಿ ಉಳಿದು ಕನ್ನಡಿಗರಿಗೆ ನ್ಯಾಯ ಸಿಗುವಂತಾಗಬೇಕು ಎಂದು ಹೇಳಿದರು.

ಭೌಗೋಳಿಕವಾಗಿ ಗೋವಾ ಕರ್ನಾಟಕಕ್ಕೆ ಸೇರಬೇಕು. ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟು ಮಾಡಿದೆ. ಗಡಿಭಾಗದ ಕಣಕಂಬಿ ಪ್ರದೇಶಕ್ಕೆ ಬಂದು ಕಾಮಗಾರಿ ಪರಿಶೀಲನೆ ನಡೆಸಿರುವುದರ ಹಿಂದಿನ ಉದ್ದೇಶವೇನು. ಅವರನ್ನು ಬರಲು ಬಿಟ್ಟವರು ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ನ್ಯಾಯಾಲಯ ಅವಕಾಶ ನೀಡಿದೆಯೇ, ಪರಿಶೀಲನೆ ಸಂದರ್ಭದಲ್ಲಿ ಎರಡು ರಾಜ್ಯಗಳ ಸಂಪನ್ಮೂಲ ಸಚಿವರು, ಅಧಿಕಾರಿಗಳು ಇರಬೇಕಿತ್ತು. ಆದರೆ ಅವರೊಬ್ಬರೇ ಬಂದು ಕಾಮಗಾರಿ ನೋಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ತನಿಖೆ ನಡೆಸಬೇಕೆಂದು ವಾಟಾಳ್ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಹೋರಾಟಗಾರರಾದ ಸಾ.ರಾ.ಗೋವಿಂದು, ಮಂಜುನಾಥ್ ದೇವ್, ಗಿರೀಶ್, ಮಾಯಣ್ಣ, ತಿಮ್ಮಯ್ಯ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News