ನ್ಯಾ.ಸದಾಶಿವ ಆಯೋಗದ ವರದಿ ತಿರಸ್ಕರಿಸಲು ಆಗ್ರಹಿಸಿ ಜ.18 ರಂದು ಧರಣಿ

Update: 2018-01-17 12:39 GMT

ಬೆಂಗಳೂರು, ಜ.17: ನ್ಯಾ.ಎ.ಜೆ.ಸದಾಶಿವ ಆಯೋಗದ ಅವೈಜ್ಞಾನಿಕ ಹಾಗೂ ಅಸಂವಿಧಾನಿಕ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಜ. 18 ರಂದು ಕೊರಮ, ಕೊರಚ ಹಿತರಕ್ಷಣ ಒಕ್ಕೂಟದ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಗುತ್ತದೆ.

ಬುಧವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಮಾದೇಶ್, ರಾಜ್ಯದಲ್ಲಿ ಕೊರಮ, ಕೊರಚ, ಕೊರವ ಹಾಗೂ ಇನ್ನಿತರ ಹೆಸರಿನಿಂದ ಗುರುತಿಸಲ್ಪಡುವ 20 ಲಕ್ಷಕ್ಕೂ ಹೆಚ್ಚು ಜನ ಸಮುದಾಯವಿದೆ. ಸಮಾಜದಲ್ಲಿ ಎತ್ತ ನೋಡಿದರೂ ನಮ್ಮ ಸಮುದಾಯಗಳು ಹಿಂದುಳಿದಿವೆ. ಆದರೆ, ಕೆಲ ಪಟ್ಟಭದ್ರ ರಾಜಕೀಯ ಶಕ್ತಿಗಳಿಗೆ ಮಣಿದು 101 ಜಾತಿಗಳ ಪೈಕಿ ಕೇವಲ 2 ಜಾತಿಯ ನಾಯಕರೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ಇದರಿಂದ ಅಶಕ್ತ ಜಾತಿ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.

ಸದಾಶಿವ ಆಯೋಗ ವರದಿಯನ್ನು ಬಹಿರಂಗಗೊಳಿಸಿ, ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ಒಳಮೀಸಲಾತಿ ನೆಪದಲ್ಲಿ ಕೊರಮ, ಕೊರಚ, ಬೋವಿ ಹಾಗೂ ಲಂಬಾಣಿ ಸಮುದಾಯಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ತೆಗೆಯುವಂತೆ ಪ್ರಸ್ತಾಪಿಸಿರುವ ಅಸಂವಿಧಾನಿಕ ಅಂಶ ರದ್ದುಪಡಿಸಬೇಕು. ಜಾತಿವಾರು ಜನಸಂಖ್ಯೆ ಆಧಾರದ ಮೇಲೆ ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಪುನರ್ ವರ್ಗೀಕರಣಕ್ಕೆ ನಮ್ಮ ಸಮುದಾಯದ ಮುಖಂಡರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ, ಆಕ್ಷೇಪಣೆ ಸ್ವೀಕಾರಕ್ಕೆ ಅವಕಾಶ ಕಲ್ಪಿಸಬೇಕು. ಮುಖ್ಯಮಂತ್ರಿಗಳು ವರದಿ ಸಂಬಂಧ ಚರ್ಚೆ ನಡೆಸಲು ಎಡ ಮತ್ತು ಬಲ ಸಮುದಾಯಗಳನ್ನು ಹೊರತುಪಡಿಸಿ ಉಳಿದ ಪರಿಶಿಷ್ಟ ಜಾತಿ ಮುಖಂಡರುಗಳ ತುರ್ತು ಸಭೆಗೆ ಕ್ರಮ ಕೈಗೊಳ್ಳಬೇಕು, ಮೀಸಲಾತಿ ಪ್ರಮಾಣವನ್ನು ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ತಿರುಮಲಪುರ ಕೆ.ಗೋಪಾಲ್, ಆರ್.ರಾಮಚಂದ್ರ, ಡಾ.ಮಲ್ಲಿಕಾರ್ಜುನ ಮಾನ್ಪಡೆ, ಸುರೇಶ್ ನಾಗರೇಶಿ, ರಮಣಪ್ಪ ಬಜೇಂತ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News