ಪತಿ ಕೊಲೆ ಪ್ರಕರಣ: ಪತ್ನಿ ಸೇರಿ ಇಬ್ಬರ ಬಂಧನ
ಬೆಂಗಳೂರು, ಜ.17: ಪತಿಯ ಕೊಲೆ ಪ್ರಕರಣ ಸಂಬಂಧ ಪತ್ನಿ ಸೇರಿ ಇಬ್ಬರನ್ನು ಇಲ್ಲಿನ ಹುಳಿಮಾವು ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರದ ಬೇಗೂರು ಅಂಚೆ ಅಕ್ಷಯ ನಗರದ ರಾಜಕುಮಾರ(25) ಮತ್ತು ಹುಳಿಮಾವು ಕೆಂಪಮ್ಮ ಲೇಔಟ್ ನಿವಾಸಿ ದೀಪಾಲಿ(31) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ಪ್ರಕರಣದ ವಿವರ: ಹುಳಿಮಾವು ಗ್ರಾಮದ ಕೆಂಪಮ್ಮ ಬಡಾವಣೆಯ 28ನೆ ಅಡ್ಡರಸ್ತೆಯ ಮನೆಯೊಂದರಲ್ಲಿ ಮಹೇಶ್ ಧರ್ಮರಾಜ್ ಸಿಂಧೆ ಅವರು ಪತ್ನಿ ದೀಪಾಲಿ ಸಿಂಧೆ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ.
ದೀಪಾಲಿಯವರು ಕೆಲಸ ಮಾಡುತ್ತಿದ್ದ ಕೆ.ಮೋಹನ್ ಗಾರ್ಮೆಂಟ್ಸ್‌ನ ಸಹೋದ್ಯೋಗಿ ರಾಜಕುಮಾರ ಎಂಬಾತನೊಂದಿಗೆ ಸ್ನೇಹ ಬೆಳೆಸಿಕೊಂಡು ಅಕ್ರಮ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.
ಜ.8ರಂದು ಸಂಜೆ 7 ಗಂಟೆ ದೀಪಾಲಿ ಹಾಗೂ ಸಹೋದ್ಯೋಗಿ ರಾಜಕುಮಾರ ಇಬ್ಬರು ಇವರ ಮನೆಯಲ್ಲಿ ಒಟ್ಟಿಗೆ ಇದ್ದಾಗ ಪತಿ ಮಹೇಶ್ ಮನೆಗೆ ಬಂದಿದ್ದಾರೆ. ಎಲ್ಲಿ ತಮ್ಮಿಬ್ಬರ ಸಂಬಂಧ ಬಯಲಾಗುತ್ತದೋ ಎಂದು ಅರಿತ ದೀಪಾಲಿ ಪ್ರಿಯಕರನೊಂದಿಗೆ ಸೇರಿ ಅಂದೇ ಪತಿಯ ಕೊಲೆ ಮಾಡಿರುವುದಾಗಿ ಹೇಳಲಾಗುತ್ತಿದೆ.
ಈ ಸಂಬಂಧ ಹುಳಿಮಾವು ಠಾಣೆ ಪೊಲೀಸರು ತನಿಖೆ ನಡೆಸಿ ಮಹೇಶ್ ಪತ್ನಿ ದೀಪಾಲಿ ಹಾಗೂ ಈಕೆಯ ಪ್ರಿಯಕರ ರಾಜಕುಮಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.