ವಕ್ಫ್ ಬೋರ್ಡ್ ಚುನಾವಣೆಗೆ ಪ್ರಾಮಾಣಿಕ ಪ್ರಯತ್ನ: ತನ್ವೀರ್ ಸೇಠ್
ಬೆಂಗಳೂರು, ಜ.17: ರಾಜ್ಯ ವಕ್ಫ್ ಬೋರ್ಡ್‌ಗೆ ಚುನಾವಣೆ ನಡೆಸಲು ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಾಮಾಣಿಕವಾದ ಪ್ರಯತ್ನವನ್ನು ನಡೆಸಿದ್ದೇನೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್‌ಸೇಠ್ ತಿಳಿಸಿದರು.
ಬುಧವಾರ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನು ಬಾಹಿರವಾಗಿ ವಕ್ಫ್ ಬೋರ್ಡ್ ನಡೆಯುತ್ತಿಲ್ಲ ಎಂದರು.
ಕಾಯ್ದೆ ಪ್ರಕಾರ ವಕ್ಫ್ ಬೋರ್ಡ್‌ನ ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಳ್ಳುವ ಆರು ತಿಂಗಳು ಮುಂಚಿತವಾಗಿ ಚುನಾವಣೆಯ ಪ್ರಕ್ರಿಯೆಗಳನ್ನು ಆರಂಭಿಸಬೇಕು. ಆದರೆ, ವಕ್ಫ್ ಬೋರ್ಡ್ ಅವಧಿ ಪೂರ್ಣಗೊಂಡಾಗ ನಾನು ಸಚಿವನಾಗಿರಲಿಲ್ಲ. ನಾನು ಬಂದ ನಂತರ ಚುನಾವಣೆ ನಡೆಸಲು ಪ್ರಾಮಾಣಿಕವಾಗಿ ಎಲ್ಲ ಪ್ರಕ್ರಿಯೆಗಳನ್ನು ನಡೆಸಿದ್ದೇನೆ ಎಂದು ತನ್ವೀರ್‌ಸೇಠ್ ಹೇಳಿದರು.
ಕಾನೂನು ಇಲಾಖೆ ಜತೆ ಚರ್ಚೆ ಮಾಡಿ ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ನಿಯಮಗಳನ್ನು ರಚಿಸಿದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಸಲಹೆಯನ್ನು ಪಡೆದು ನಾವು ರಚಿಸಿದ ನಿಯಮಗಳನ್ನು ಕೇಂದ್ರ ಸರಕಾರವು ಮೆಚ್ಚಿ, ಬೇರೆ ರಾಜ್ಯಗಳಲ್ಲೂ ಅನುಷ್ಠಾನಗೊಳಿಸುವ ಸಲಹೆಯನ್ನು ನೀಡಿದೆ ಎಂದು ಅವರು ಹೇಳಿದರು.
ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾಗಿದ್ದ ಡಾ.ಕೆ.ರಹ್ಮಾನ್‌ಖಾನ್, 1995ರಲ್ಲಿ ರಚನೆಯಾಗಿದ್ದ ವಕ್ಫ್ ಕಾಯ್ದೆಗೆ 2013ರ ನವೆಂಬರ್‌ನಲ್ಲಿ ತಮ್ಮ ದೂರದೃಷ್ಟಿಯಿಂದ ತಿದ್ದುಪಡಿ ತಂದದ್ದು ಸ್ವಾಗತಾರ್ಹ ಎಂದು ತನ್ವೀರ್ ಸೇಠ್ ತಿಳಿಸಿದರು.
ಒಂದು ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವಕ್ಫ್ ಸಂಸ್ಥೆಗಳ ಪ್ರತಿನಿಧಿಗಳ ಹೆಸರನ್ನು ವಕ್ಫ್ ಬೋರ್ಡ್‌ನ ಮತದಾರರ ಪಟ್ಟಿಗೆ ಸೇರಿಸಲು ಕೇವಲ 8 ದಿನಗಳ ಕಾಲಾವಕಾಶವನ್ನು ಕಾಯ್ದೆಯಲ್ಲಿ ನೀಡಲಾಗಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಈ ಪ್ರಕ್ರಿಯೆ ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನಿಸಿ, ನಿಯಮಗಳನ್ನು ರಚಿಸುವಾಗ ಅವಧಿಯನ್ನು ಹೆಚ್ಚಿಸಲಾಯಿತು ಎಂದು ಅವರು ಹೇಳಿದರು.
2017ನೆ ಸಾಲಿನ ಜು.17ರಂದು ಅಧಿಸೂಚನೆ ಹೊರಡಿಸಿ ರಾಜ್ಯ ವಕ್ಫ್ ಮಂಡಳಿ ಮತದಾರರ ನೋಂದಣಾಧಿಕಾರಿಗಳನ್ನಾಗಿ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ಆಯುಕ್ತರನ್ನು ನೇಮಿಸಲಾಯಿತು. ಸರಕಾರದಿಂದ ನೇಮಕಗೊಂಡ ನಂತರ ಮತದಾರರ ನೋಂದಣಾಧಿಕಾರಿ ಜು.20ರಂದು ಮತದಾರರ ನೋಂದಣಿಗಾಗಿ ಅಧಿಸೂಚನೆ ಹೊರಡಿಸಿದ್ದಾರೆ ಎಂದು ತನ್ವೀರ್‌ಸೇಠ್ ತಿಳಿಸಿದರು.
ಆದರೆ, ಅ.22ರಂದು ರಾಜ್ಯ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಅದಕ್ಕೆ ತಡೆಯಾಜ್ಞೆ ತಂದರು. ನ್ಯಾಯಾಲಯದ ತಡೆಯಾಜ್ಞೆ ತೆರವಾದ ಬಳಿಕ ಶಾಸಕರು, ಸಂಸದರು, ಮುತವಲ್ಲಿ, ವಕೀಲರ ವಿಭಾಗದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಯಿತು ಎಂದು ಅವರು ಹೇಳಿದರು.
ಕಳೆದ ಎರಡು ಮೂರು ಅವಧಿಯಲ್ಲಿ ಒಬ್ಬ ಮುಸ್ಲಿಮ್ ವ್ಯಕ್ತಿಯೂ ಲೋಕಸಭೆಗೆ ಆಯ್ಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಸಂಸದರು, ಮಾಜಿ ಶಾಸಕರ ವಿಭಾಗವನ್ನು ತೆರೆಯಲು ನಿಯಮದಲ್ಲಿ ಅವಕಾಶ ಮಾಡಿಕೊಡಲಾಯಿತು ಎಂದು ತನ್ವೀರ್ ಸೇಠ್ ವಿವರಣೆ ನೀಡಿದರು.
ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಜ.16ರಂದು ಅಧಿಸೂಚನೆ ಮೂಲಕ ಹೊರಡಿಸಲಾಗಿದ್ದು, ಜ.31ರವರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತರಿಗೆ ಎಲ್ಲ ಸೌಲಭ್ಯಗಳನ್ನು ಸರಕಾರ ಒದಗಿಸಿದೆ ಎಂದು ತನ್ವೀರ್‌ಸೇಠ್ ಹೇಳಿದರು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೌಲಾನ ಆಝಾದ್ ಭವನ ನಿರ್ಮಿಸುವ ಪ್ರಸ್ತಾವನೆ ಬಂದಿದೆ. ಈಗ 17 ಜಿಲ್ಲೆಗಳಲ್ಲಿ ಭವನಗಳು ನಿರ್ಮಾಣಗೊಂಡು ಕಾರ್ಯಾರಂಭ ಮಾಡಿವೆ. ಬೆಂಗಳೂರಿನಲ್ಲಿ ಇದರ ಕೇಂದ್ರ ಕಚೇರಿ ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತರ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಚೇರಿಗಳು ಪ್ರಸ್ತುತ ವಿಶ್ವೇಶ್ವರಯ್ಯ ಗೋಪುರದಲ್ಲಿ ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನೆಲ್ಲ ಸ್ವಂತ ಕಟ್ಟಡದೊಳಗೆ ಒಂದೇ ಸೂರಿನಡಿ ತರಲು ಮಿಲ್ಲರ್ಸ್ ಟ್ಯಾಂಕ್ ಬಳಿ 10 ಚ.ಅಡಿ ಜಾಗ ಗುರುತಿಸಲಾಗಿದೆ ಎಂದು ತನ್ವೀರ್ ಸೇಠ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರಕಾರದ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.