×
Ad

ಶತಮಾನೋತ್ಸವ ಭವನ ಜ.22 ರಂದು ಉದ್ಘಾಟನೆ

Update: 2018-01-17 20:05 IST

ಬೆಂಗಳೂರು, ಜ.17: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ರಕ್ಷಣೆ ಮತ್ತು ಅಭಿವೃದ್ಧಿಯ ಮಹದಾಸೆಯೊಂದಿಗೆ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷಗಳನ್ನು ಪೂರೈಸುತ್ತಿದೆ. ಇದರ ಸವಿನೆನಪಿಗಾಗಿ 4.5 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶತಮಾನೋತ್ಸವ ಭವನ ಜ.22 ರಂದು ಲೋಕಾರ್ಪಣೆಯಾಗಲಿದೆ.

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಅವರ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2014 ರಲ್ಲಿ ಈ ಭವನದ ಶಂಕುಸ್ಥಾಪನೆ ಮಾಡಿದ್ದರು. ಇದೀಗ, ಸಿಎಂ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದು, ಈ ಶತಮಾನೋತ್ಸವ ಭವನವನ್ನು ಅವರೇ ಉದ್ಘಾಟಿಸುತ್ತಿದ್ದಾರೆ.

ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿಯೇ ಈ ಭವನ ನಿರ್ಮಾಣಗೊಂಡಿದೆ. ನೆಲ ಮಹಡಿಯಲ್ಲಿ ಗ್ರಂಥಾಲಯ, ಕಚೇರಿ, ಮೊದಲ ಮಹಡಿಯಲ್ಲಿ ಅತಿಥಿ ಗೃಹಗಳು, ಕ್ಯಾಂಟೀನ್, ಎರಡನೇ ಮಹಡಿಯಲ್ಲಿ ಅಕ್ಕಮಹಾದೇವಿ ಸಭಾಂಗಣ ಮತ್ತು ಗ್ರೀನ್ ರೂಂ ನಿರ್ಮಿಸಿದ್ದು, ಎಲ್ಲ ಮಹಡಿಗಳಲ್ಲೂ ಪ್ರತ್ಯೇಕವಾದ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.

ಶತಮಾನೋತ್ಸವದ ಭವನದಲ್ಲಿ ವಚನಗಾರ್ತಿ ಅಕ್ಕಮಹಾದೇವಿ ಅವರನ್ನು ನೆನಪಿಸಿಕೊಂಡು ಅವರ ಹೆಸರಿನಲ್ಲಿ 180 ಆಸನಗಳ ವ್ಯವಸ್ಥೆಯುಳ್ಳ ಸಭಾಂಗಣ ಮಾಡಲಾಗಿದೆ. ಅಲ್ಲದೆ, 2 ಮಹಡಿಗಳಿಗೂ ಮೆಟ್ಟಿಲುಗಳ ಜೊತೆಗೆ ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದೆ.

ಕಸಾಪದಲ್ಲಿ ಪಂಪ ಸಭಾಂಗಣ, ಕುವೆಂಪು ಸಭಾಂಗಣ, ಬಿಎಂಶ್ರೀ ಅಚ್ಚುಕೂಟ, ಕೃಷ್ಣರಾಜ ಪರಿಷನ್ಮಂದಿರ ಹೀಗೆ ಎಲ್ಲದಕ್ಕೂ ಪುರುಷ ಸಾಧಕರ ಹೆಸರಿಡಲಾಗಿದೆ. ಹೀಗಾಗಿ ಪರಿಷತ್ತಿನ 100 ವರ್ಷಗಳ ಸಂಭ್ರಮಾಚರಣೆ ಸಂದರ್ಭದಲ್ಲಿ ನಿರ್ಮಾಣ ಮಾಡುತ್ತಿರುವ ಭವನದಲ್ಲಿ ಒಂದು ಸಭಾಂಗಣಕ್ಕೆ ಅಕ್ಕಮಹಾದೇವಿ ಹೆಸರಿಡಲು ನಿರ್ಧರಿಸಲಾಗಿದೆ.
-ಡಾ.ಮನುಬಳಿಗಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News