×
Ad

ಪಾಲಿಕೆ ಸದಸ್ಯ ನಟರಾಜ್ ಕೊಲೆ ಪ್ರಕರಣ: ಮರು ತನಿಖೆಗೆ ಆಗ್ರಹ

Update: 2018-01-17 20:09 IST

ಬೆಂಗಳೂರು, ಜ.17: ಬಿಬಿಎಂಪಿ ಸದಸ್ಯರಾಗಿದ್ದ ಎಸ್.ನಟರಾಜ್ ಕೊಲೆ ಸಂಬಂಧ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ. ಈ ಕೊಲೆ ಪ್ರಕರಣದ ಮರು ತನಿಖೆ ಮಾಡಬೇಕು ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಒತ್ತಾಯಿಸಿದರು.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2011ರ ಅಕ್ಟೋಬರ್ 1 ರಂದು ಬೆಳಗ್ಗೆ ಮಲ್ಲೇಶ್ವರ ಸಂಪಿಗೆ ರಸ್ತೆಯಲ್ಲಿ ಭಾಗ್ಯಲಕ್ಷ್ಮಿ ಬೆಣ್ಣೆ ಗುಲ್ಕನ್ ಅಂಗಡಿ ಬಳಿ ಪಾಲಿಕೆ ಸದಸ್ಯರಾಗಿದ್ದ ಎಸ್.ನಟರಾಜ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು ಎಂದರು.

ಹತ್ಯೆಗೆ ಸುಪಾರಿ ನೀಡಲಾಗಿದ್ದ ಆರೋಪದಡಿಯಲ್ಲಿ ಮುರುಗನ್ ಮತ್ತು ಮಣಿ ಎಂಬುವವರು ಸೇರಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ವಿಚಾರಣೆಯಲ್ಲಿ ಮಾಜಿ ಪಾಲಿಕೆ ಸದಸ್ಯ ಅಶೋಕ್ ಬಿ.ದಾನಿ ಎಂಬುವವರ ಹೆಸರನ್ನು ಬಂಧಿತರು ಬಾಯಿಬಿಟ್ಟಿದ್ದರು. ಆದರೆ, ಅಶೋಕ್ ಬಿ.ದಾನಿ ಗುಜರಾತ್‌ಗೆ ಹೋಗಿ ತಲೆಮರೆಸಿಕೊಂಡಿದ್ದರಿಂದ ಬಂಧಿಸಿಲ್ಲ. ಆದರೆ, ಹತ್ಯೆಗೆ ಸಂಬಂಧಿಸಿದ ಸೂತ್ರದಾರರೇ ಬೇರೆಯಾಗಿದ್ದಾರೆ ಎಂದು ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದರು.

ಎಸ್.ನಟರಾಜ್ ಪಾಲಿಕೆ ಸದಸ್ಯರಾದ ವೇಳೆಯಲ್ಲಿ ಕೆಂಪೇಗೌಡ ರಸ್ತೆಯಲ್ಲಿರುವ ಗುಪ್ತ ಮಾರುಕಟ್ಟೆ ಬಿಬಿಎಂಪಿಗೆ ಸೇರಿದ ಆಸ್ತಿಯಾಗಿದೆ. ಈ ಆಸ್ತಿಯನ್ನು ಕಬಳಿಸುವುದಕ್ಕೆ ನೋಡುತ್ತಿದ್ದಾರೆ ಎಂದು ಎರಡು ಮೂರು ಬಾರಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜಿಸಭೆ ಮಾಡಿದರೂ ಫಲಕಾರಿಯಾಗಿರಲಿಲ್ಲ.

ಗುಪ್ತ ಮಾರುಕಟ್ಟೆಯ ಕಬಳಿಸಲು ಸಂಚು ಮಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವ್ಯವಹಾರದ ಪಾಲುದಾರರಾದ ಆರ್.ಚಂದ್ರಪ್ಪ, ಗುಪ್ತಾ ಮಾರುಕಟ್ಟೆಯ ಮಾಲಕರಾಗಿದ್ದು ಎಸ್.ನಟರಾಜ್ ಹತ್ಯೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಅವರು ಆರೋಪಿಸಿದರು.

ನಟರಾಜ್ ಹತ್ಯೆ ಪ್ರಕರಣದಲ್ಲಿ ಅಮಾಯಕರ ಬಂಧನವಾಗಿದ್ದು, ನಿಜವಾದ ಆರೋಪಿಗಳು ಈಗಲೂ ಹೊರಗಡೆ ಇದ್ದಾರೆ. ಈ ಸಂಬಂಧ ಲೋಕಾಯುಕ್ತ, ಮುಖ್ಯಮಂತ್ರಿ, ಗೃಹ ಸಚಿವರಿಗೆ ಲಿಖಿತ ದೂರು ನೀಡಿ ಹತ್ಯೆ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಕೋರಿರುವುದಾಗಿ ಎನ್.ಆರ್.ರಮೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News