ನೂತನ ಪ್ರಜಾ ರೈತ ರಾಜ್ಯ ಪಕ್ಷ ಅಸ್ತಿತ್ವಕ್ಕೆ: ಕುರುಡಿ ಬಣಕಾರ
ಬೆಂಗಳೂರು, ಜ.17: ಕರ್ನಾಟಕ ರಾಜ್ಯದ ರೈತರ ಹಿತ ಕಾಪಾಡುವ ಧ್ಯೇಯ ಘೋಷದೊಂದಿಗೆ ‘ಪ್ರಜಾ ರೈತ ರಾಜ್ಯ ಪಕ್ಷ’ ಎಂಬ ನೂತನ ಪಕ್ಷ ಸ್ಥಾಪಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಕುರುಡಿ ಬಣಕಾರ ತಿಳಿಸಿದರು.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ರೈತರು ಹೋರಾಟ ನಡೆಸುತ್ತಿದ್ದರೂ ಸಹ ಇದುವರೆಗೆ ಪರಿಹಾರ ದೊರಕಿಲ್ಲ. ರಾಜಕೀಯ ಅಧಿಕಾರಿಗಳು ರೈತರ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಹೊಸ ಪಕ್ಷ ಸ್ಥಾಪಿಸಲಾಗಿದೆ ಎಂದರು.
ಆಡಳಿತ ನಡೆಸುವ ಸರಕಾರಗಳು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಿಲ್ಲ. ಬ್ರಿಟೀಷರು ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸಂಪತ್ತನ್ನು ದೋಚಿದ ಹಾಗೆ ಇಂದಿನ ರಾಜಕಾರಣಿಗಳು, ಅಧಿಕಾರಿಗಳು ದೋಚುತ್ತಿದ್ದಾರೆ. ಹೀಗಾಗಿ ರೈತ ಪರ ಪಕ್ಷ ಕಟ್ಟಿದ್ದೇವೆ. ಅಗತ್ಯ ಬಿದ್ದರೆ ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಪಕ್ಷದ ಉದ್ದೇಶ: ರೈತರ ಹಿತ ರಕ್ಷಣೆ ಕಾಪಾಡುವುದು. ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು. ರೈತರ ಒಣ ಕೃಷಿ ಭೂಮಿಗೆ ನೀರಾವರಿ ಕಲ್ಪಿಸುವುದು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯಕ್ಕೆ ಆದ್ಯತೆ. ಜಾತಿ ಮೀಸಲಾತಿ ಬದಲಾಗಿ ಆರ್ಥಿಕ ಮೀಸಲಾತಿ ಜಾರಿಗೊಳಿಸುವುದು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಧ್ಯೇಯವನ್ನು ಹೊಂದಿದೆ ಎಂದು ಕುರುಡಿ ಬಣಕಾರ ತಿಳಿಸಿದರು.