×
Ad

ಸಿಬ್ಬಂದಿಗೆ ಅನಾನುಕೂಲ ಆಗದಂತೆ ಪುನರ್ ಪರಿಶೀಲನೆ: ಸಚಿವ ರೇವಣ್ಣ

Update: 2018-01-17 20:51 IST

ಬೆಂಗಳೂರು, ಜ. 17: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರ ಅಂತರ ನಿಗಮ ವರ್ಗಾವಣೆಯಿಂದ ಸಿಬ್ಬಂದಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರೇವಣ್ಣ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಂತರ ನಿಗಮ ವರ್ಗಾವಣೆಗೆ 10 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದು, ಆ ಪೈಕಿ 3,952 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಇದು ಸಿಬ್ಬಂದಿಗೆ ಹೆಚ್ಚಿನ ಅನುಕೂಲ ಆಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ.

ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತಿದ್ದು, ಉ.ಕ ಮತ್ತು ಹೈ.ಕ ಭಾಗದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ಕೇಳಿದ ಸ್ಥಳಕ್ಕೆ ನಿಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಬ್ಬಂದಿ ಹಿತವನ್ನು ಗಮನದಲ್ಲಿಟ್ಟುಕೊಂಡು ಅಂತರ ನಿಗಮ ವರ್ಗಾವಣೆ ಪುನರ್ ಪರಿಶೀಲನೆ ಮಾಡಲಾಗುವುದು ಎಂದರು.

ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನವನ್ನು 2016ರ ಜನವರಿ 1ರಿಂದ ಪೂರ್ವನ್ವಯವಾಗುವಂತೆ ಶೇ.12.5 ರಷ್ಟು ಪರಿಷ್ಕರಿಸಲಾಗಿದ್ದು, ಇದರಿಂದ ನಾಲ್ಕು ನಿಗಮಗಳಿಗೆ ನಾಲ್ಕು ವರ್ಷದ ಅವಧಿಗೆ 1767 ಕೋಟಿ ರೂ. ಹೊರೆಯಾಗಲಿದೆ ಎಂದರು.

ವೇತನ ಪರಿಷ್ಕರಣೆ 2016ರ ಸೆಪ್ಟಂಬರ್ 1ರಿಂದ ಜಾರಿಗೆ ತಂದಿದ್ದು, ಈಗಾಗಲೇ ಹಿಂಬಾಕಿ ಬಿಡುಗಡೆ ಮಾಡಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಇನ್ನೂ ನಾಲ್ಕು ತಿಂಗಳ ವೇತನ ಹಿಂಬಾಕಿ ಬಿಡುಗಡೆ 31 ಕೋಟಿ ಬಾಕಿ ಇದ್ದು, ಶೀಘ್ರದಲ್ಲೆ ಆ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದರು.

ಪ್ರಸ್ತುತ ನಾಲ್ಕು ನಿಗಮಗಳು ನಷ್ಟದಲ್ಲಿವೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದು, ರಾಜ್ಯ ಸರಕಾರದಿಂದ ಆ ಪೈಕಿ 201 ಕೋಟಿ ರೂ.ಬಾಕಿ ಬರಬೇಕಿದೆ ಎಂದ ಅವರು, ಬಿಎಂಟಿಸಿ ಸಿಬ್ಬಂದಿಗೆ ನೀಡಬೇಕಿರುವ ಎರಡು ವರ್ಷದ ಬೋನಸ್ ಬಿಡುಗಡೆಗೆ ಕಾಲಾವಕಾಶ ಕೋರಲಾಗಿದೆ ಎಂದು ಹೇಳಿದರು.

ವಿರಳ ಸಂಚಾರ ಅಭಿಯಾನ: ಸ್ವಂತ ವಾಹನ ನಿಲ್ಲಿಸಿ ಸಾರ್ವಜನಿಕ ವಾಹನ ಬಳಸಿ ಎಂಬ ವಿರಳ ಸಂಚಾರ ಅಭಿಯಾನಕ್ಕೆ ಜನರಿಂದ ಸ್ಪಂದನೆ ವ್ಯಕ್ತವಾಗಿದ್ದು, ನಟ ಪುನಿತ್ ರಾಜ್‌ಕುಮಾರ್ ರಾಯಭಾರಿಯಾಗಲು ಸಮ್ಮತಿಸಿದ್ದಾರೆ. ಅಲ್ಲದೆ, ನಿರ್ದೇಶಕ ಯೋಗರಾಜ್ ಭಟ್ ಈ ಬಗ್ಗೆ ಕವಿತೆ ರಚಿಸಿಕೊಡಲು ಒಪ್ಪಿದ್ದಾರೆ ಎಂದು ಅವರು ತಿಳಿಸಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳ, ಮಹಾಲಕ್ಷ್ಮಿಲೇಔಟ್, ಮಾಗಡಿ ಸೇರಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಒಂದು ವೇಳೆ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ಸೂಚಿಸಿದರೆ, ಆಲೋಚಿಸುವೆ. ತಾನು ಮೇಲ್ಮನೆ ಸದಸ್ಯನಾಗಿದ್ದು ನನ್ನ ಅವಧಿ ಇನ್ನೂ ಎರಡೂವರೆ ವರ್ಷಗಳಿವೆ’
-ಎಚ್.ಎಂ.ರೇವಣ್ಣ ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News