×
Ad

ಭಿಕ್ಷೆ ಬೇಡಿ ಬದುಕುವ ಸ್ಥಿತಿಯಿಂದ ಮುಕ್ತರಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-01-17 20:54 IST

ಬೆಂಗಳೂರು, ಜ.17: ರಾಜ್ಯದ ಎಲ್ಲ ಅಲೆಮಾರಿ, ಅಸಹಾಯಕ ಸಮುದಾಯಗಳವರು ಭಿಕ್ಷೆ ಬೇಡುವ ಸ್ಥಿತಿಯಿಂದ ಮುಕ್ತರಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಸರಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ವಿಧಾನಸೌಧದ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಕ್ಕಲಿಗ ಸಮುದಾಯದ ಫಲಾನುಭವಿಗಳಿಗೆ ಸಾಲ ಸೌಲಭ್ಯ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.

ದಕ್ಕಲಿಗರೂ ಸೇರಿದಂತೆ ಪರಿಶಿಷ್ಟ ಜಾತಿಗೆ ಸೇರಿದ ಎಲ್ಲ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಜನಾಂಗಗಳ ಸಮಗ್ರ ಅಭಿವೃದ್ದಿಗೆ ಪ್ರತ್ಯೇಕ ಕೋಶ ರಚನೆ ಮಾಡಿ 130 ಕೋಟಿ ರೂ.ಮೀಸಲಿಡಲಾಗಿದೆ ಎಂದು ಅವರು ಹೇಳಿದರು.

ನಮ್ಮ ಸರಕಾರ ಬಂದ ಮೇಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದವರಿಗೆ ಜನಸಂಖ್ಯೆಗನುಗುಣವಾಗಿ ಯೋಜನಾ ವೆಚ್ಚ ನಿಗದಿಪಡಿಸುವ ಪರಿಶಿಷ್ಟ ಜಾತಿ-ಪಂಗಡದ ವಿಶೇಷ ಉಪಯೋಜನೆ ವಿಧೆಯಕ ತಂದಿದ್ದೇವೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯವರು ಸೇರಿ ಜನಸಂಖ್ಯೆಯಲ್ಲಿ ಶೇ.24.1ರಷ್ಟು ಇದ್ದಾರೆ. ಆ ಪ್ರಮಾಣದಲ್ಲಿ ಹಣ ನಿಗದಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಹಿಂದಿನ ಸರಕಾರ ಐದು ವರ್ಷಗಳಲ್ಲಿ 22 ಸಾವಿರ ಕೋಟಿ ರೂ.ವೆಚ್ಚ ಮಾಡಿದ್ದರೆ, ನಮ್ಮ ಸರಕಾರ 88 ಸಾವಿರ ಕೋಟಿ ರೂ.ವೆಚ್ಚ ಮಾಡಿದೆ. ಪ್ರಸಕ್ತ ವರ್ಷ 27 ಸಾವಿರ ಕೋಟಿ ರೂ. ನಿಗದಿಪಡಿಸಿ ಎಂದು ಮುಖ್ಯಮಂತ್ರಿ ಹೇಳಿದರು.

ದಕ್ಕಲಿಗರೂ ಸೇರಿದಂತೆ ಗುಡಿಸಲುಗಳಲ್ಲಿ ವಾಸಿಸುವ ಎಲ್ಲ ಬಡವರಿಗೂ ಮನೆ, ಭೂಮಿ, ಇನ್ನಿತರ ಸವಲತ್ತು ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ತಮ್ಮ ಸ್ವಂತ ಬದುಕು ಕಟ್ಟಿಕೊಳ್ಳಲು ಸರಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಕಿವಿ ಮಾತು ಹೇಳಿದರು.

ದಕ್ಕಲಿಗ ಸಮುದಾಯದ ಫಲಾನುಭವಿಗಳಿಗೆ ಐದು ಲಕ್ಷ ರೂ. ಸಬ್ಸಿಡಿ ಹಾಗೂ ಎರಡು ಲಕ್ಷ ರೂ. ಸಾಲ ಸೌಲಭ್ಯದ ಕಾರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News