×
Ad

ಬಿಐಎಎಪಿಎ-ಬಿಡಿಎ ಅಧ್ಯಕ್ಷರ ನೇಮಕ ವಿಚಾರ: ಪಿಐಎಲ್ ಆಗಿ ಪರಿಗಣಿಸಿದ ಹೈಕೋರ್ಟ್

Update: 2018-01-17 21:07 IST

ಬೆಂಗಳೂರು, ಜ.17: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ (ಬಿಐಎಎಪಿಎ) ಅಧ್ಯಕ್ಷರನ್ನಾಗಿ ಶಾಸಕ ಎಂ.ಟಿ.ಬಿ. ನಾಗರಾಜ್ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರನ್ನಾಗಿ ಶಾಸಕ ಕೆ.ವೆಂಕಟೇಶ್ ಅವರನ್ನು ನೇಮಿಸಿರುವ ಸರಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಿದೆ.

ಸರಕಾರದ ಆದೇಶ ಪ್ರಶ್ನಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ. ಶಶಿಧರ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ ಪೀಠ, ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆ. ಆದ್ದರಿಂದ ಈ ತಕರಾರು ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುವ ಹಂಗಾಮಿ ಮುಖ್ಯ ನಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲು ರಿಜಿಸ್ಟ್ರಾರ್‌ಗೆ ನಿರ್ದೇಶಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸು ಮೇರೆಗೆ ಶಾಸಕ ಎಂ.ಟಿ.ಬಿ. ನಾಗರಾಜ್ ಅವರನ್ನು ಬೆಂಗಳೂರು ಬಿಐಎಎಪಿಎ ಅಧ್ಯಕ್ಷ ಹಾಗೂ ಶಾಸಕ ಕೆ.ವೆಂಕಟೇಶ್ ಅವರನ್ನು ಬಿಡಿಎ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಆದರೆ, ಶಾಸಕರಿಬ್ಬರೂ ಈ ಹುದ್ದೆಗಳಿಗೆ ಆಯ್ಕೆಯಾಗಲು ನಿಗದಿತ ಅರ್ಹತೆಯನ್ನು ಹೊಂದಿಲ್ಲ. ಹೀಗಿದ್ದರೂ ಅವರನ್ನು ನೇಮಕ ಮಾಡಿರುವುದು ಕರ್ನಾಟಕ ನಗರ ಹಾಗೂ ಪಟ್ಟಣ ಯೋಜನಾ ಕಾಯ್ದೆಯ ಅಧಿನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೆ, ಅಧಿಕಾರ ದುರ್ಬಳಕೆ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಪೂರ್ವಾನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಮುಖ್ಯಮಂತ್ರಿಗಳ ವಿರುದ್ಧದ ಆರೋಪಗಳಿಗೆ ಪೂರಕವಾದ ಆಧಾರಗಳು ಇಲ್ಲ ಎಂದು ತಿಳಿಸಿ, ಅರ್ಜಿದಾರರ ಮನವಿ ತಿರಸ್ಕರಿಸಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ರಾಜ್ಯಪಾಲರ ಪತ್ರ ರದ್ದುಪಡಿಸಬೇಕು. ಎಂಟಿಬಿ ನಾಗರಾಜ್ ಅವರನ್ನು ಬಿಐಎಎಪಿಎ ಅಧ್ಯಕ್ಷ ಸ್ಥಾನದಿಂದ ಹಾಗೂ ವೆಂಕಟೇಶ ಅವರನ್ನು ಬಿಡಿಎ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲು ಆದೇಶಿಸಬೇಕು. ಮುಖ್ಯಮಂತ್ರಿ ಹಾಗೂ ಈ ಶಾಸಕದ್ವಯರ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News