×
Ad

ಗಣಿ ಭೂ ವಿಜ್ಞಾನ ಇಲಾಖೆ ಕೆಲಸಕ್ಕೆ ಬಾರದ್ದಾಗಿದೆ: ಹೈಕೋರ್ಟ್

Update: 2018-01-17 21:13 IST

ಬೆಂಗಳೂರು, ಜ.17: ಅತಿ ಹೆಚ್ಚು ಬಿಡ್ ದಾಖಲಿಸಿದ್ದರೂ ಟೆಂಡರ್ ನೀಡದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಗಣಿ ಭೂ ವಿಜ್ಞಾನ ಇಲಾಖೆ ಕೆಲಸಕ್ಕೆ ಬಾರದ ಇಲಾಖೆಯಾಗಿದೆ ಎಂದು ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿತು.

ಹಾವೇರಿ ಜಿಲ್ಲೆಯಲ್ಲಿ ಸರಕಾರದ ವತಿಯಿಂದಲೇ ನಡೆಸಿದ್ದ ಮರಳು ಹರಾಜು ಪ್ರಕ್ರಿಯೆಯಲ್ಲಿ ಕಲ್ಲಿಹಾಳ್‌ನ ವನಜಾಕ್ಷಿ ಎಂಬುವರು ಭಾಗವಹಿಸಿ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ್ದರು. ಆದರೆ, ನಿಗದಿಗಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಲಾಗಿದೆ ಎಂದು ತಿಳಿಸಿದ್ದ ಸರಕಾರ ಟೆಂಡರ್ ವಾಪಸ್ ಪಡೆದಿತ್ತು. ಈ ಕ್ರಮ ಪ್ರಶ್ನಿಸಿ ವನಜಾಕ್ಷಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಹೆಚ್ಚಿನ ಮೊತ್ತಕ್ಕೆ ಮರಳು ಗುತ್ತಿಗೆ ಪಡೆದ ಕಾರಣಕ್ಕೆ ಗುತ್ತಿಗೆ ಹಿಂಪಡೆದಿದ್ದ ಸರಕಾರದ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಅರ್ಜಿದಾರರಾದ ಕಲ್ಲಿಹಾಳ್ ವನಜಾಕ್ಷಿ ಅವರು ಬಿಡ್ ದಾಖಲಿಸಿದ್ದರೂ ಅವರ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದೀರಿ ಇದು ಯಾವ ನ್ಯಾಯ ಹೇಳಿ ಎಂದು ಪ್ರಶ್ನಿಸಿದ ನ್ಯಾಯಪೀಠವು ರಾಜ್ಯ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ನಂತರ ಕಟಾರಿಯಾ ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಪೀಠ, ಜಗತ್ತಿನ ಯಾವುದೇ ದೇಶದಲ್ಲಾದರೂ ಇಂತಹ ಮರಳು ನೀತಿ ಕಂಡಿದ್ದೀರಾ? ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಮರಳು ಕೂಗಿದರೂ, ಅದನ್ನು ಸ್ವೀಕರಿಸಲು ಸರ್ಕಾರಕ್ಕೆ ಏನು ಅಡ್ಡಿಯಿದೆ? ಹೆಚ್ಚು ಹಣ ನೀಡುತ್ತೇವೆಂದರೂ ಟೆಂಡರ್ ಏಕೆ ನಿರಾಕರಿಸಲಾಗುತ್ತಿದೆ? ಈ ನೀತಿ ಅವೈಜ್ಞಾನಿಕ, ಅವಾಸ್ತವಿಕ ಹಾಗೂ ಏಕಪಕ್ಷೀಯವಾಗಿದೆ. ರಾಜ್ಯದಲ್ಲಿನ ಈ ನೀತಿ ದೇಶದಲ್ಲಿ ಎಲ್ಲಿಯೂ ಇಲ್ಲ. ನಿಮ್ಮ ಹರಾಜು ನೀತಿಯನ್ನು ಮೊದಲು ಸರಿಪಡಿಸಬೇಕು ಎಂದು ಕೆಂಡ ಕಾರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News