ಇ-ವೇ ಬಿಲ್ ಫೆ.1ರಿಂದ ಜಾರಿ: ಸುಶೀಲ್‌ಕುಮಾರ್ ಮೋದಿ

Update: 2018-01-17 15:54 GMT

ಬೆಂಗಳೂರು, ಜ.17: ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದದಿಂದ ರಾಜ್ಯಕ್ಕೆ ಸಾಗಿಸುವುದರ ಮೇಲೆ ನಿಗಾ ಇರಿಸುವ ಇ-ವೇ ಬಿಲ್ ಫೆ.1 ರಿಂದ ಕಡ್ಡಾಯವಾಗಿ ಜಾರಿಯಾಗಲಿದೆ ಎಂದು ಬಿಹಾರದ ಉಪಮುಖ್ಯಮಂತ್ರಿಗಳು ಹಾಗೂ ಜಿಎಸ್‌ಟಿ ಮಂಡಳಿ ಅಧ್ಯಕ್ಷ ಸುಶೀಲ್‌ಕುಮಾರ್ ಮೋದಿ ತಿಳಿಸಿದರು.

ಬುಧವಾರ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎನ್‌ಐಸಿಯವರು ಇ-ವೇ ಬಿಲ್‌ನ ತಂತ್ರಾಂಶವನ್ನು ಸಿದ್ಧಪಡಿಸಿದ್ದು, ಇದನ್ನು ಜನವರಿ 15 ರಿಂದಲೇ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಅಂತರರಾಜ್ಯ ಸರಕು ಸಾಗಣಿಕೆಗೆ ಇ-ವೇ ಬಿಲ್ ಕಡ್ಡಾಯವಾಗಿದೆ. ಕರ್ನಾಟಕವನ್ನು ಮಾದರಿಯನ್ನಾಗಿ ಇಟ್ಟುಕೊಂಡು ಇತರೆ ಎಲ್ಲಾ ರಾಜ್ಯಗಳಲ್ಲೂ ಇ-ವೇ ಬಿಲ್‌ನ್ನು ಜಾರಿಗೊಳಿಸಲಾಗುವುದು ಎಂದರು.

ಇ-ವೇ ಬಿಲ್ ಉಸ್ತುವಾರಿಗೆ ಹೆಲ್ಪ್‌ಡೆಸ್ಕ್ ಸಹ ಸ್ಥಾಪಿಸಲಾಗಿದ್ದು, ಇದರ ಎಲ್ಲಾ ಸಾಧಕ ಬಾಧಕವನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾಗಿದೆ. ಜಿಎಸ್‌ಟಿಯಿಂದ ಎಲ್ಲ ರಾಜ್ಯಗಳು ಸೇರಿದಂತೆ ಆದಾಯವು ಕಳೆದ ಆಗಸ್ಟ್‌ನಲ್ಲಿ ಶೇ.28.3 ರಷ್ಟು ಕಡಿಮೆಯಾಗಿದ್ದು, ಅಕ್ಟೋಬರ್‌ನಲ್ಲಿ ಶೇ. 17.3 ಹಾಗೂ ಡಿಸೆಂಬರ್‌ನಲ್ಲಿ ಶೇ. 20.7 ರಷ್ಟು ಕಡಿಮೆಯಾಗಿದೆ ಎಂದು ಅವರು ತಿಳಿಸಿದರು.

ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಜಿಎಸ್‌ಟಿಯಿಂದ 7,619 ಕೋಟಿ ರೂ. ಪರಿಹಾರ ಮೊತ್ತ ಸ್ವೀಕೃತವಾಗಿದೆ. ಕೇಂದ್ರ ಸರಕಾರದಲ್ಲಿ 1,35,000 ಕೋಟಿ ಮೊತ್ತದ ಜಿಎಸ್‌ಟಿ ಬಿಲ್‌ಗಳು ಇನ್ನೂ ಇತ್ಯರ್ಥಗೊಳ್ಳದ ಕಾರಣ, ಆಯಾ ರಾಜ್ಯಗಳ ಜೊತೆಗೂಡಿ ಇತ್ಯರ್ಥಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ಜಿಎಸ್‌ಟಿ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್‌ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News