ಕಿದ್ವಾಯಿ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

Update: 2018-01-17 16:39 GMT

ಬೆಂಗಳೂರು, ಜ.17: ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಿದ್ವಾಯಿ ಆಸ್ಪತ್ರೆಯ ನರ್ಸ್‌ಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಆಸ್ಪತ್ರೆಯ ಸಿಬ್ಬಂದಿ ಪ್ರತಿಭಟನೆ ನಡೆಸಿದ ಪರಿಣಾಮ ಕೆಲಕಾಲ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಜ.10 ರಿಂದ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದರೂ ಆಡಳಿತ ಮಂಡಳಿ ನಮ್ಮ ಸಮಸ್ಯೆಗಳನ್ನು ಆಲಿಸಲು ಮುಂದಾಗಿಲ್ಲ. ಹೀಗಾಗಿ, ನಮ್ಮ ಪ್ರತಿಭಟನೆ ತೀವ್ರಗೊಳಿಸಲು ಮುಂದಾಗಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ವೇತನ ಹೆಚ್ಚಳ ಮಾಡಬೇಕು, ಎಲ್ಲ ಸಿಬ್ಬಂದಿಗೂ ಗುರುತಿನ ಚೀಟಿ, ಗೌರವಧನ ನೀಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನರ್ಸ್ ಮತ್ತು ಸಿಬ್ಬಂದಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಶಾಂತಿಯುತವಾಗಿ ಪ್ರತಿಭಟನೆ ಆರಂಭ ಮಾಡಿದ್ದರು. ಕೂಡಲೇ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ನಿಂಗೇಗೌಡ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಆದುದರಿಂದ ಪ್ರತಿಭಟನೆ ಹಿಂಪಡೆದ ನರ್ಸ್,ಪ್ರಯೋಗಾಲಯದ ತಂತ್ರಜ್ಞರು ಮತ್ತು ಇನ್ನಿತರೆ ಸಿಬ್ಬಂದಿಗಳು ತಮ್ಮ ತಮ್ಮ ಕರ್ತವ್ಯಕ್ಕೆ ಹಾಜರಾದರು. ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಸೇವೆ ವ್ಯತ್ಯಯವಾಯಿತು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News