ಸರಕಾರಿ ವೈದ್ಯಕೀಯ ಆರೈಕೆ ಏಕೆ ನಿರಾಕರಿಸಲಾಗುತ್ತದೆ?

Update: 2018-01-17 18:35 GMT

2017ರಲ್ಲಿ ಖಾಸಗಿ ಮತ್ತು ಸರಕಾರಿ - ಎರಡೂ ರಂಗದ ಆಸ್ಪತ್ರೆಗಳು ಕೆಳಮಟ್ಟದ ಆರೋಗ್ಯ ಸೇವೆ ಮತ್ತು ಭಾರೀ ದರಗಳ ಕಾರಣಕ್ಕಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದವು. ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹಲವಾರು ಮಕ್ಕಳು ಮೃತಪಟ್ಟಿದ್ದು ಸಾರ್ವಜನಿಕ ರಂಗದ ವೈದ್ಯಕೀಯ ಸೇವೆಯ ಸೋಲಿಗೆ ಒಂದು ಉದಾಹರಣೆ. ಖಾಸಗಿ ರಂಗದಲ್ಲಿ ಇಂತಹುದೇ ಸೋಲಿನ ಪ್ರಕರಣವೆಂದರೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಏಳು ವರ್ಷದ ಒಂದು ಮಗುವಿನ ಚಿಕಿತ್ಸೆಗಾಗಿ 15 ಲಕ್ಷ ರೂ. ಬಿಲ್ ನೀಡಿದ್ದು, ಈ ಪ್ರಕರಣದಿಂದಾಗಿ ಭಾರೀ ದುಬಾರಿಯಾದ ದರಗಳಿಗೆ ಖಾಸಗಿ ವೈದ್ಯಕೀಯ ಸೇವಾ ರಂಗ ಸಾರ್ವಜನಿಕ ಟೀಕೆಗೆ ಗುರಿಯಾಯಿತು.

 ಖಾಸಗಿ ರಂಗ ಹಾಗೂ ಸಾರ್ವಜನಿಕ ರಂಗದ ಸೋಲುಗಳ ನಡುವೆ ಭಾರತದ ರೋಗಿಗಳು ತಮ್ಮ ಆಯ್ಕೆಗಾಗಿ ಒದ್ದಾಡುತ್ತಿದ್ದಾರೆ ಅವರ ಸ್ಥಿತಿ ಅತ್ತ ಹುಲಿ ಇತ್ತ ದರಿ ಎಂಬಂತಾಗಿದೆ. ಅದೇನಿದ್ದರೂ, ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ ನಾಲ್ಕನೆಯ ಸಮೀಕ್ಷೆಯ ಪ್ರಕಾರ, ಭಾರತದ ಅರ್ಧಕ್ಕಿಂತಲೂ ಕಡಿಮೆ ಜನ (ನಗರ ಪ್ರದೇಶದ ಶೇ. 42 ಮತ್ತು ಗ್ರಾಮೀಣ ಪ್ರದೇಶದ ಶೇ. 46) ಸರಕಾರಿ ಆರೋಗ್ಯ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನಗರದ ಭಾರತದ ಶೇ. 56 ಮಂದಿ ಖಾಸಗಿ ಆರೋಗ್ಯ ಸೇವೆಯನ್ನು ಆಯ್ದುಕೊಂಡರೆ ಗ್ರಾಮೀಣ ಭಾರತದ ಶೇ.59 ಮಂದಿ ಇದೇ ಸೇವೆಯನ್ನು ಆಯ್ದುಕೊಳ್ಳುತ್ತಿದ್ದಾರೆ. 2005-06ರಲ್ಲಿ ನಡೆಸಿದ ಸಮೀಕ್ಷೆ ಮತ್ತು ಹತ್ತು ವರ್ಷಗಳ ಬಳಿಕ ನಡೆಸಿದ ಸಮೀಕ್ಷೆಯ ನಡುವಿನ ಅವಧಿಯಲ್ಲಿ ಸಾರ್ವಜನಿಕ ರಂಗದ ಆರೋಗ್ಯ ಸೇವೆಯನ್ನು ಬಳಸುವ ಕುಟುಂಬಗಳ ಮನೆಗಳ ಪ್ರತಿಶತ ಅನುಕ್ರಮವಾಗಿ ಶೇ. 34ರಿಂದ ಶೇ. 45ಕ್ಕೆ ಏರಿತು.

ಸರಕಾರಿ ಮತ್ತು ನಗರಸಭೆಗಳ ಆಸ್ಪತ್ರೆಗಳಿಗಿಂತ ಕೆಳಗಿನ ಮಟ್ಟದಲ್ಲಿ ನಗರ ಭಾರತವು ಸರಕಾರಿ ಆರೋಗ್ಯ ಸೇವೆಯನ್ನು ನಿರಾಕರಿಸುತ್ತದೆ. ಆದರೆ ಗ್ರಾಮೀಣ ಭಾರತವು ಇನ್ನೂ ಕೂಡ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಅನುಕ್ರಮವಾಗಿ ಶೇ. 14 ಮತ್ತು ಶೇ. 12ರಷ್ಟು) ಅವಲಂಬಿಸಿದೆ. ಗ್ರಾಮೀಣ ಭಾರತದ ಕೇವಲ ಶೇ. 1.5 ಮಾತ್ರ ಆರೋಗ್ಯ ಉಪ ಕೇಂದ್ರಗಳನ್ನು ಅವಲಂಬಿಸಿದ್ದು ಕಳೆದ ಬಜೆಟ್‌ನಲ್ಲಿ ಸರಕಾರವೂ ಈ ಉಪ ಕೇಂದ್ರಗಳನ್ನು ಆರೋಗ್ಯ ಕೇಂದ್ರ (ವೆಲ್‌ನೆಸ್ ಸೆಂಟರ್)ಗಳಾಗಿ ಪರಿವರ್ತಿಸುವುದಾಗಿ ಪ್ರಕಟಿಸಿತು.

ಆಯುಷ್ ವೈದ್ಯರಲ್ಲಿಗೆ ಹೋಗುವವರಿಗಿಂತ ಹೆಚ್ಚು ಜನರು ‘ಅಂಗಡಿ’ಗೆ ಹೋಗುತ್ತಾರೆ. ಗ್ರಾಮೀಣ ಭಾರತದ ಜನರಲ್ಲಿ ಗಣನೀಯ ಸಂಖ್ಯೆಯ ಜನ ಬಡವರಲ್ಲಿ ಅತ್ಯಂತ ಬಡವರು (ಶೇ.4.5) ಆರೋಗ್ಯ ಸೇವೆಗಾಗಿ ‘ಅಂಗಡಿ’ಗೆ (ಔಷಧಿ ಅಂಗಡಿಗೆ) ಹೋಗುತ್ತಾರೆ. ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್) ಔಷಧಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ರಂಗ ಎರಡರಲ್ಲೂ ಅತ್ಯಂತ ಕಡಿಮೆ (ಕೇವಲ ಶೇ. 1) ಬಳಕೆಯಾಗುತ್ತಿದೆ ಭಾರತದಲ್ಲಿ ಫಾರ್ಮಾಸಿಸ್ಟ್‌ಗಳು, ದಾದಿಯರು ಮತ್ತು ಆಯುಷ್ ವೈದ್ಯರು ಅಲೋಪತಿ ಔಷಧಿಗಳನ್ನು ನೀಡುವುದಾಗಲಿ ಅಥವಾ ರೋಗ ಪರೀಕ್ಷೆ ನಡೆಸುವುದಾಗಲಿ ನಿಷೇಧಿಸಲ್ಪಟ್ಟಿದೆ. ಆದರೂ ಸೌಲಭ್ಯಗಳ ಕೊರತೆಯಿಂದಾಗಿ ಇವರು ಈ ಔಷಧಗಳನ್ನು ನೀಡುತ್ತಿರುವುದು ಒಂದು ವಾಸ್ತವವಾಗಿದೆ. ಇತ್ತೀಚೆಗೆ ಸರಕಾರವು ರಾಷ್ಟ್ರೀಯ ವೈದ್ಯಕೀಯ ಮಸೂದೆ (2017)ಯಲ್ಲಿ ಈ ವೈದ್ಯರು ಕೂಡ ಒಂದು ಸೀಮಿತ ಸಂಖ್ಯೆಯ ಅಲೋಪತಿ ಔಷಧಿಗಳನ್ನು ನೀಡಲು ಸಮರ್ಥ ರಾಗುವಂತೆ ಇವರಿಗೆ ಒಂದು ‘ಬ್ರಿಡ್ಜ್ ಕೋರ್ಸ್’ ನೀಡುವ ಪ್ರಸ್ತಾವವನ್ನು ಪ್ರಕಟಿಸಿತು. ಇದನ್ನು ಅಲೋಪತಿ ಮತ್ತು ಹೋಮಿಯೋಪತಿಯ ಎರಡೂ ಲಾಬಿಗಳು ತಿರಸ್ಕರಿಸಿವೆ.

 ಭಾರತ ಯಾಕೆ ಸರಕಾರಿ ಆರೋಗ್ಯ ಸೇವೆಯನ್ನು ನಿರಾಕರಿಸುತ್ತದೆ?

ಸಮೀಪದಲ್ಲೇ ಆರೋಗ್ಯ ಸೌಕರ್ಯ ಇಲ್ಲದಿರುವುದು, ಅನುಕೂಲಕರವಲ್ಲದ ಸಮಯಗಳು, ಆರೋಗ್ಯ ಸಿಬ್ಬಂದಿಯ ಗೈರು ಹಾಜರಿ, ತುಂಬಾ ದೀರ್ಘ ಕಾಲ ಕಾಯಬೇಕಾದ ಸ್ಥಿತಿ ಮತ್ತು ಕೆಳಮಟ್ಟದ ಆರೋಗ್ಯ ಸೇವೆಯಿಂದಾಗಿ ಜನರು ಸರಕಾರಿ ಆರೋಗ್ಯ ಸೇವಾ ಕೇಂದ್ರಗಳಿಂದ ದೂರವೇ ಉಳಿಯುತ್ತಾರೆ. ದೇಶದ ಒಟ್ಟು ಕುಟುಂಬಗಳ ಶೇ.55.1 ಕುಟುಂಬಗಳು ಸರಕಾರಿ ಸೇವೆಗಳನ್ನು ಬಳಸುವುದಿಲ್ಲ.

ಭಾರತದ ಅತ್ಯಂತ ಜನನಿಬಿಡ ರಾಜ್ಯವಾದ ಉತ್ತರ ಪ್ರದೇಶ ಸರಕಾರಿ ಆರೋಗ್ಯ ಸೇವೆಗಳನ್ನು ಅತ್ಯಂತ ಹೆಚ್ಚು ನಿರಾಕರಿಸುವ ಒಂದು ರಾಜ್ಯ. ಅಲ್ಲಿ ರಾಜ್ಯದ ಒಟ್ಟು ಕುಟುಂಬ-ಗೃಹಗಳಲ್ಲಿ ಶೇ. 80 ಕುಟುಂಬಗಳು ಸರಕಾರಿ ಆರೋಗ್ಯ ಸೌಕರ್ಯಗಳನ್ನು ನಿರಾಕರಿಸುತ್ತವೆ. ಹೀಗೆ ನಿರಾಕರಿಸುವ (ಶೇ. 70ರಿಂದ 80ರವರೆಗಿನ) ಕುಟುಂಬಗಳ ಯಾದಿಯಲ್ಲಿ ಬಿಹಾರ (ಶೇ. 77.6), ಪಂಜಾಬ್ ಶೇ. (70.9), ಜಾರ್ಖಂಡ್ (ಶೇ. 71.7) ಮತ್ತು ತೆಲಂಗಾಣ (ಶೇ.70.7) ಪ್ರಮುಖ ರಾಜ್ಯಗಳಾಗಿವೆ.

ಕೃಪೆ:  thewire.in

ಖಾಸಗಿ ರಂಗ ಹಾಗೂ ಸಾರ್ವಜನಿಕ ರಂಗದ ಸೋಲುಗಳ ನಡುವೆ ಭಾರತದ ರೋಗಿಗಳು ತಮ್ಮ ಆಯ್ಕೆಗಾಗಿ ಒದ್ದಾಡುತ್ತಿದ್ದಾರೆ ಅವರ ಸ್ಥಿತಿ ಅತ್ತ ಹುಲಿ ಇತ್ತ ದರಿ ಎಂಬಂತಾಗಿದೆ. ಅದೇನಿದ್ದರೂ, ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ ನಾಲ್ಕನೆಯ ಸಮೀಕ್ಷೆಯ ಪ್ರಕಾರ, ಭಾರತದ ಅರ್ಧಕ್ಕಿಂತಲೂ ಕಡಿಮೆ ಜನ ಸರಕಾರಿ ಆರೋಗ್ಯ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

Writer - ಅನು: ಭೂಯನ್

contributor

Editor - ಅನು: ಭೂಯನ್

contributor

Similar News