ಪರಿಶಿಷ್ಟ ವರ್ಗಕ್ಕೆ ಸೇರಿದ 99 ಜಾತಿಗಳ ಮುಖಂಡರ ಸಭೆ ಕರೆಯಲಿ: ರವಿ ಮಾಕಳಿ

Update: 2018-01-18 17:36 GMT

ಬೆಂಗಳೂರು, ಜ.18: ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಸಂಬಂಧದ ನ್ಯಾ.ಎ.ಜೆ.ಸದಾಶೀವ ಆಯೋಗದ ವರದಿ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ವರ್ಗಕ್ಕೆ ಸೇರಿದ 99 ಜಾತಿಯ ಮುಖಂಡರ ಸಭೆ ಕರೆಯಬೇಕೆಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಒತ್ತಾಯಿಸಿದೆ.

ಗುರುವಾರ ನಗರದ ಜಸ್ಮಾದೇವಿ ಭವನದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ 99 ಜಾತಿಯ ಮುಖಂಡರು ಸಭೆ ಸೇರಿ, ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆ ಇಲ್ಲದೆ ಕೇಂದ್ರ ಸರಕಾರಕ್ಕೆ ಶಿಪಾರಸು ಮಾಡುತ್ತಿರವ ರಾಜ್ಯ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಈ ವೇಳೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ರವಿ ಮಾಕಳಿ ಮಾತನಾಡಿ, ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕ ಹಾಗೂ ಅಸಂವಿಧಾನಕವಾಗಿದೆ. ಆದರೂ ಕೇವಲ ರಾಜಕೀಯ ಸ್ವಾರ್ಥದಿಂದಾಗಿ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುತ್ತಿರುವುದು ಸರಿಯಲ್ಲ. ಈ ವರದಿಯನ್ನು ಪರಿಶಿಷ್ಟ ವರ್ಗಕ್ಕೆ ಸೇರಿದಂತೆ 99 ಜಾತಿಗಳು ಪ್ರಬಲವಾಗಿ ಖಂಡಿಸಲಿವೆ ಎಂದು ತಿಳಿಸಿದರು.

ರಾಜ್ಯ ಸರಕಾರವೇ ತಾರತಮ್ಯ ನೀತಿ ಅನುಸರಿಸಿದರೆ ಅವಕಾಶವಂಚಿತ 99 ಜಾತಿಗಳು ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು. ನಮ್ಮೊಂದಿಗೆ ಚರ್ಚಿಸದೆ ಕೇವಲ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವಂತಹ ಚಿಂತನೆ ನಡೆಸಿರುವುದು ಅಸಂವಿಧಾನಿಕ ಕ್ರಮವಾಗಿದೆ. ಹೀಗಾಗಿ ರಾಜ್ಯ ಸರಕಾರ ಕೂಡಲೆ ನಮ್ಮೊಂದಿಗೆ ಚರ್ಚೆ ನಡೆಸಬೇಕು. ಆ ಮೂಲಕ ನಮ್ಮ ಅಳಲನ್ನು ತೋಡಿಕೊಳ್ಳಲು ಒಂದು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಈ ಸಭೆಯಲ್ಲಿ ಮಾಜಿ ಸಚಿವೆ ಲಲಿತಾ ನಾಯಕ್, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಾಧ್ಯಕ್ಷ ಅನಂತ್‌ನಾಯಕ್, ಕೊರಮ ಸಮುದಾಯದ ಮುಖಂಡ ರಾಮಚಂದ್ರ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News