ನೊರೆವಾಲಿಗೆ ಅಂಟಿಕೊಂಡ ಉಣ್ಣೆಗಳು

Update: 2018-01-18 18:42 GMT

ಮಾನ್ಯರೇ,

ಲಿಂಗಾಯತ ಧರ್ಮದ ಪ್ರಜ್ಞೆ ಜನ ಸಾಮಾನ್ಯರಲ್ಲಿ ಮೊಳೆಯುತ್ತಿರುವಂತೆ ಹಲವು ಸ್ಥಾಪಿತ ಶಕ್ತಿಗಳಿಗೆ ಆಗಲೇ ನಡುಕ ಶುರುವಾಗಿದೆ. ಕಾಲದಿಂದ ಕಾಲಕ್ಕೆ ತಮ್ಮದೇ ಬಡಿವಾರದಿಂದ ಜನ ಸಾಮಾನ್ಯರನ್ನು ಸೆಳೆಯುತ್ತ ಕುಯುಕ್ತಿಯಲ್ಲಿ ತೊಡಗಿದ್ದ ಜನಗಳಿಗೆ ಮೋಸ ಮಾಡುತ್ತಿದ್ದ ಪಟಾಲಂ ಈಗ ಕಕ್ಕಿಬಿಕ್ಕಿಯಾಗಿದೆ. ಕಂಡ ಕಂಡವರ ಮನೆ ಬಾಗಿಲನ್ನು ತುಳಿದು ತಮ್ಮ ಅಸ್ತಿತ್ವಕ್ಕಾಗಿ ಒದ್ದಾಡತೊಡಗಿದ್ದಾರೆ.

1904 ರಲ್ಲಿ ಲಿಂಗಾಯತ ಧರ್ಮದವರ ಸಹಾಯದಿಂದಲೇ ಸ್ಥಾಪಿಸಿದ ಶಿವಯೋಗ ಮಂದಿರ ವಚನ ಸಾಹಿತ್ಯದ ಮಂದಿರ ಆಗಲೇ ಇಲ್ಲ. ಅಲ್ಲಿ ತಯಾರಾದ ವಿಭೂತಿಯಷ್ಟು ಸಹ ಅಲ್ಲಿನ ಮಠಾಧೀಶರು ಬೆಲೆಯುಳ್ಳವರಾಗಲಿಲ್ಲ, ಪರಿಶುದ್ಧರಾಗಲಿಲ್ಲ ಎಂದು ಹೇಳಿದರೆ ಕಟುವಾದ ಮಾತಾಗಬಹುದು. ಆದರೆ ಇದು ಸತ್ಯ. ಏಕೆಂದರೆ ಶಿವಯೋಗ ಮಂದಿರದಲ್ಲಿ ಕಲಿತು ಬಂದ ಬಹುತೇಕ ಜನ ಮಠಾಧೀಶರು ಕರ್ಮಠ ಆಚರಣೆಗಳ ಗೋಡೌನ್ ಆದರು. ಲಿಂಗಾಯತ ಧರ್ಮೀಯರಿಗೆ ಗುರು ಲಿಂಗ ಜಂಗಮ ಪದಗಳ ಅರಿವನ್ನು ತಂದು ಕೊಡಬೇಕಾಗಿತ್ತು. ಅಷ್ಟಾವರಣ, ಷಟ್‌ಸ್ಥಲ, ಪಂಚಾಚಾರಗಳನ್ನು ತಿಳಿಸಿ ಹೇಳಬೇಕಾಗಿತ್ತು. ಆದರೆ ಅವರೇ ಬಟ್ಟೆಗೆಟ್ಟ ಮೇಲೆ ಇನ್ನಾರಿಗೆ ಹೇಳಲು ಸಾಧ್ಯ. ತಾಯಿಯ ಮೊಲೆ ನಂಜಾಗಿ ಕೊಲ್ಲುವಡೆ ಇನ್ನಾರಿಗೆ ದೂರುವೆನಯ್ಯಾ ಕೂಡಲ ಸಂಗಮದೇವಾ ಎಂಬಂತೆ. ಅವೇ ಕೊಳೆತು ಗಟಾರ ಸೇರುವ ವಸ್ತುವಾದ ಮೇಲೆ ಅವನ್ನು ಮನೆಯಲ್ಲಿ ತಂದಿಟ್ಟುಕೊಂಡ ಲಿಂಗಾಯತರ ಪರಿಸ್ಥಿತಿ ಹೇಗಾಗಬೇಡ ?

ನೀತಿ ಜಂಗಮತ್ವ ಮರೆತು ಜಾತಿ ಜಂಗಮತ್ವ ಶ್ರೇಷ್ಠ ಎಂದು ತೊಡಗಿದ್ದರಿಂದ ಸಹಜವಾಗಿ ಹಲವಾರು ಜನ ಉದರ ಪೋಷಣೆಗೆ ಶಿವಯೋಗ ಮಂದಿರ ಸೇರಿದ್ದು ಸುಳ್ಳಲ್ಲ. ಹೀಗಾಗಿ ಮಠಗಳು ಬಸವ ತತ್ವದ ಹೃದಯ ಸ್ಥಾನವಾಗಲೇ ಇಲ್ಲ. ಬದಲಾಗಿ ಅಲ್ಲಿ ಯಜ್ಞ ? ಯಾಗಗಳು ನಡೆದವು. ವಾರ, ತಿಥಿ ಮಿತಿಗಳ ಭರಾಟೆ ನಡೆಯಿತು. ತೇರು ಜಾತ್ರೆ ಉತ್ಸವಗಳು ಯಥೇಚ್ಛವಾಗಿ ನಡೆದು ಹೋದವು. ಈ ನಡುವೆ ಸಾಕಷ್ಟು ನೀರು ಹಲವಾರು ನದಿಗಳಲ್ಲಿ ಹರಿದು ಹೋಯಿತು. ಈ ಮಹಾಪುರುಷರೇ ತಮ್ಮ ಗುರುಗಳು ಎಂದು ನಂಬಿಕೊಂಡ ಲಿಂಗಾಯತರು ಕರ್ಮಠ ಲಿಂಗಾಯತರಾದರು. ವಚನಕಾರರನ್ನು ಮರೆತು ಸಂಬಂಧವಿಲ್ಲದ ಈ ಪಟ್ಟಭದ್ರರನ್ನು ಅಪ್ಪಿಕೊಂಡರು. ಇದರ ಪರಿಣಾಮ ಅತ್ಯಂತ ಭೀಕರವಾಗಿದ್ದದನ್ನು ನಾವಿಂದು ಕಾಣಬಹುದಾಗಿದೆ. ಲಿಂಗಾಯತರೆಂದು ಕರೆಯಿಸಿಕೊಳ್ಳುವವರು ವೈದಿಕರೂ ನಾಚುವಂತೆ ನಡೆದುಕೊಳ್ಳುವುದು ನೋಡಿದರೆ ಹೇಸಿಗೆ ಉಂಟಾಗುತ್ತದೆ. ಇವು ಬಸವಣ್ಣನವರ ನೊರೆವಾಲಿಗೆ ಅಂಟಿಕೊಂಡ ಉಣ್ಣೆಗಳು.

Writer - ವಿಶ್ವಾರಾಧ್ಯ, ಸತ್ಯಂಪೇಟೆ

contributor

Editor - ವಿಶ್ವಾರಾಧ್ಯ, ಸತ್ಯಂಪೇಟೆ

contributor

Similar News