ಮುಂಚೂಣಿ ಸಾಮ್ರಾಜ್ಯಶಾಹಿ ಲೂಟಿಕೋರ ‘ಚೀನಾ’

Update: 2018-01-20 06:51 GMT

ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಮೂಲಕ ಕೂಡ ತನ್ನ ಆರ್ಥಿಕ ಬೆಳವಣಿಗೆಯನ್ನು ಚೀನಾ ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಗಳು ಇವೆ. ಏಶ್ಯಾದಲ್ಲಿ ತನ್ನ ಹಿಡಿತವನ್ನು ಬಲಗೊಳಿಸುತ್ತಲೇ ಹೋಗುತ್ತಿದೆ. ಇದಕ್ಕೆ ಭಾರತ ಕೂಡ ಈಡಾಗುತ್ತಿದೆ. ಇದುವರೆಗೆ ಅಮೆರಿಕ ಹಾಗೂ ಯೂರೋಪಿನ ರಾಷ್ಟ್ರಗಳು ನಮ್ಮಂತಹ ದೇಶಗಳನ್ನು ಲೂಟಿ ಹೊಡೆಯುತ್ತಿದ್ದು, ಈಗ ಚೀನಾ ಮುಂಚೂಣಿ ಸಾಮ್ರಾಜ್ಯಶಾಹಿ ಶಕ್ತಿಯಾಗಿ ನಮ್ಮ ದೇಶವನ್ನು ಲೂಟಿ ಹೊಡೆಯ ತೊಡಗಿದೆ. ಭಾರತೀಯರಾದ ನಾವು ಚೀನಾದ ಈ ಅಪಾಯವನ್ನು ಗ್ರಹಿಸಿ ನಮ್ಮ ದೇಶದ ಜನರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾದ ಅಗತ್ಯವಿದೆ.

ಚೀನಾ ದೇಶವೆಂದಾಕ್ಷಣ 1949ರ ಕ್ರಾಂತಿ, ನಂತರದ ಸಾಂಸ್ಕೃತಿಕ ಕ್ರಾಂತಿಯ ನೆನಪಾಗಬಹುದು. ಸಾಂಸ್ಕೃತಿಕ ಕ್ರಾಂತಿಯ ಸಂದರ್ಭದಲ್ಲಿ ನಡೆದ ಕೆಲವು ಅತಿರೇಕಗಳು ನೆನಪಾಗಬಹುದು. ಇಲ್ಲಿ ಹೇಳಹೊರಟಿರುವುದು ಇವುಗಳ ಬಗ್ಗೆಯಲ್ಲ. ಚೀನಾದ ಇಂದಿನ ಬದಲಾವಣೆಗಳೇನು, ಜಾಗತಿಕವಾಗಿ ಅದರ ಪರಿಣಾಮಗಳೇನು ಎಂಬ ಬಗ್ಗೆ.

1949ರಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಕ್ರಾಂತಿಯಾಯಿತು. ಅದನ್ನು ನವಪ್ರಜಾಸತ್ತಾತ್ಮಕ ಕ್ರಾಂತಿ ಎಂದು ಕ್ರಾಂತಿಕಾರಿ ನಾಯಕ ಮಾವೋತ್ಸೆ ತುಂಗ್ ಕರೆದರು. ಅಂದರೆ ಕಮ್ಯುನಿಸ್ಟ್ ಕ್ರಾಂತಿಕಾರಿಗಳು ನೇತೃತ್ವ ವಹಿಸಿ ಊಳಿಗಮಾನ್ಯ ಭೂಸಂಬಂಧಗಳನ್ನು ಕಿತ್ತೊಗೆದು, ಭೂಮಿ ಹಂಚಿಕೆ ಮಾಡಿ, ಬಂಡವಾಳಶಾಹಿ ಬೆಳವಣಿಗೆಯ ಹಂತಕ್ಕೆ ಕೊಂಡೊಯ್ದು, ನಂತರ ಅದನ್ನು ಸಮಾಜವಾದಿ ವ್ಯವಸ್ಥೆಯತ್ತ ಕೊಂಡೊಯ್ಯುವುದು. ಚೀನಾದಂತಹ ಅರೆ ಊಳಿಗಮಾನ್ಯ ಅರೆವಸಾಹತುಶಾಹಿ ವ್ಯವಸ್ಥೆಯನ್ನು ಬದಲಾಯಿಸಲು ಕಮ್ಯುನಿಸ್ಟ್ ಕ್ರಾಂತಿಕಾರಿಗಳು ಈ ಪದ್ಧತಿಯನ್ನು ಅನುಸರಿಸಬೇಕು ಎಂದು ಮಾವೊ ಸಿದ್ಧಾಂತೀಕರಿಸಿ ಹೇಳಿದರು. ಬಂಡವಾಳಶಾಹಿ ದೇಶಗಳ ಗಡಿ ದಾಟಿ ಸಾಮ್ರಾಜ್ಯಶಾಹಿಯಾಗಿ ಬದಲಾದ ಕಾಲಘಟ್ಟ ಇದಾಗಿದ್ದರಿಂದ ಕಮ್ಯುನಿಸ್ಟ್ ಕ್ರಾಂತಿಕಾರಿಗಳೇ ಬಂಡವಾಳಶಾಹಿ ಪ್ರಜಾತಾಂತ್ರಿಕ ಕ್ರಾಂತಿಯ ಜವಾಬ್ದಾರಿ ತೆಗೆದುಕೊಳ್ಳಬೇಕಾದ ಅಗತ್ಯವನ್ನು ಮಾವೋತ್ಸೆ ತುಂಗ್ ಸೈದ್ಧಾಂತೀಕರಿಸಿದರು. ಹಾಗಾಗಿ ಫ್ರೆಂಚ್ ಕ್ರಾಂತಿ ಬಂಡವಾಳಶಾಹಿ ಬೆಳವಣಿಗೆಗೆ ಇದ್ದ ಅವಕಾಶ ಈ ಕಾಲಘಟ್ಟದಲ್ಲಿ ಇಲ್ಲ ಎಂದು ಪ್ರತಿಪಾದಿಸಿದರು. ಊಳಿಗಮಾನ್ಯ ವ್ಯವಸ್ಥೆಯನ್ನು ಕಿತ್ತೊಗೆಯುವಲ್ಲಿ ಕಮ್ಯುನಿಸ್ಟ್ ಕ್ರಾಂತಿಕಾರಿಗಳೇ ನಾಯಕತ್ವ ವಹಿಸಬೇಕಾದ ಅಗತ್ಯವನ್ನು ಒತ್ತಿಹೇಳಿದರು. 1949ರ ಕಾಲಘಟ್ಟದಲ್ಲಿ ಜಗತ್ತಿನ ಮಹತ್ತರ ಬೆಳವಣಿಗೆಗಳಲ್ಲಿ ಚೀನಾ ಕ್ರಾಂತಿ ಕೂಡ ಒಂದು ಪ್ರಮುಖವಾದ ಬೆಳವಣಿಗೆಯಾಗಿ ಗುರುತಿಸಲ್ಪಟ್ಟಿತು.

ಮಾವೋತ್ಸೆ ತುಂಗ್‌ರ ಕೊನೆಯ ದಿನಗಳಲ್ಲಿ ಸಮಾಜವಾದಿ ಸಮಾಜ ನಿರ್ಮಾಣದ ಪ್ರಕ್ರಿಯೆಗಳಲ್ಲಿ ಪಕ್ಷದ ಸಮಿತಿಗಳಲ್ಲಿ ಬಂಡವಾಳಶಾಹಿ ಮೌಲ್ಯಗಳು, ಆಚರಣೆಗಳು ಮೇಲುಗೈ ಸಾಧಿಸುತ್ತಿರುವುದು, ಹಾಗೆಯೇ ಖಾಸಗಿ ಹಿತಾಸಕ್ತಿಗಳ ಬೆಳವಣಿಗೆಯಾಗುತ್ತಿರುವುದನ್ನು ಗ್ರಹಿಸಿ ಸಾಂಸ್ಕೃತಿಕ ಕ್ರಾಂತಿಗೆ ಕರೆ ನೀಡಿದರು. ಕಮ್ಯುನಿಸ್ಟ್ ಚರಿತ್ರೆಯಲ್ಲಿ ಇದೊಂದು ಹೊಸದಾದ ಪ್ರಯೋಗವಾಗಿತ್ತು. ಈ ಪ್ರಯೋಗದ ಅವಧಿಯಲ್ಲೇ ಮಾವೋತ್ಸೆ ತುಂಗ್ ನಿಧನರಾದರು. ಇದರೊಂದಿಗೆ ಸಾಂಸ್ಕೃತಿಕ ಕ್ರಾಂತಿಯ ಪ್ರಕ್ರಿಯೆಗಳಿಗೆ ಧಕ್ಕೆಯಾಯಿತು. ನಂತರದ ನಾಯಕತ್ವ ಇದೆಲ್ಲವನ್ನು ಸರಿಯಾಗಿ ಗ್ರಹಿಸಲಾಗದೆ, ಹಾಗೆಯೇ ಖಾಸಗಿ ಹಿತಾಸಕ್ತಿಗೆ ಅಧೀನವಾಗಿ ಸಾಮಾಜಿಕ ಹಿತಾಸಕ್ತಿಯನ್ನು ನೋಡುವ ಪ್ರಕ್ರಿಯೆಗಳನ್ನು ಮುಂದುವರಿಸಿತು. ಅದರ ಪರಿಣಾಮ ಸಮಾಜವಾದಿ ನಿರ್ಮಾಣದಲ್ಲಿ ತಿರುವು ಬಂದು ಬಂಡವಾಳಶಾಹಿ ವ್ಯವಸ್ಥೆಯ ನಿರ್ಮಾಣದತ್ತ ಚೀನಾ ಹೊರಳಿತು. ಕಮ್ಯುನಿಸ್ಟ್ ಹೆಸರಿನಲ್ಲಿ ಬಂಡವಾಳಶಾಹಿ ರಾಷ್ಟ್ರವಾಗಿ ಚೀನಾ ಬೆಳೆಯಲಾರಂಭಿಸಿತೆನ್ನಬಹುದು.

ಅಲ್ಲಿಂದ ಇಲ್ಲಿಯವರೆಗೆ ಜಾಗತಿಕವಾಗಿ ಸಾಕಷ್ಟು ನೀರು ಹರಿದಿದೆ. ಹಲವು ವಿದ್ಯಮಾನಗಳು ಜರುಗಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆದು ಅದೊಂದು ಕ್ರಾಂತಿ ಎಂದೇ ಬಂಡವಾಳಶಾಹಿ (ಸಾಮ್ರಾಜ್ಯಶಾಹಿ) ಜಗತ್ತು ಬಣ್ಣಿಸಿತ್ತು. ಎರಡನೇ ಮಹಾಯುದ್ಧದ ನಂತರ ಇಲ್ಲಿಯವರೆಗೂ ಅಮೆರಿಕ ಸಾಮ್ರಾಜ್ಯಶಾಹಿ ತನ್ನ ಹಿಡಿತಕ್ಕಾಗಿ ಜಾಗತಿಕವಾಗಿ ಪೈಪೋಟಿ ನಡೆಸುತ್ತಾ ಬಂದಿತ್ತು. ಸೋವಿಯತ್ ರಶ್ಯಾದ ಪತನದ ನಂತರ ಶೀತಲ ಸಮರವೆಂಬ ಜಾಗತಿಕ ಹಿಡಿತಕ್ಕಾಗಿನ ಪೈಪೋಟಿ ಕೂಡ ನಿಂತು ಹೋಯಿತು. ಸೋವಿಯತ್ ರಶ್ಯಾದ ಹಿಡಿತ ಜಾಗತಿಕವಾಗಿ ಕಡಿಮೆಯಾಯಿತು. ನಂತರ ಯೂರೋಪಿನ ದೇಶಗಳಲ್ಲಿ ಜಾಗತಿಕ ಪೈಪೋಟಿಗಾಗಿ ಕೆಲವು ಬೆಳವಣಿಗೆಗಳಾದವು. ಎರಡು ಜರ್ಮನಿಗಳು ಒಂದಾದವು. ‘ಯೂರೋಪಿಯನ್ ಯೂನಿಯನ್’ ಎಂಬ ಯೂರೋಪಿನ ದೇಶಗಳ ಸಂಘಟನೆ ಅಸ್ತಿತ್ವಕ್ಕೆ ಬಂದಿತು. ಅಲ್ಲಿ ಏಕ ಹಣಕಾಸು ರೂಪವಾಗಿ ಯೂರೋ ಅಸ್ತಿತ್ವಕ್ಕೆ ಬಂದಿತು. ಅಮೆರಿಕದ ಡಾಲರ್ ಎದುರು ಯೂರೋ ಸೆಣಸಲಾರಂಭಿಸಿತು. ‘ಯೂರೋಪಿಯನ್ ಯೂನಿಯನ್’ನ ದೇಶಗಳು ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರಗಳಿಗೆ ಯೂರೋ ಕರೆನ್ಸಿಯನ್ನೇ ಬಳಸಲಾರಂಭಿಸಿದವು. ಸೋವಿಯತ್ ಒಕ್ಕೂಟ ಪತನಗೊಂಡು ಜಾಗತಿಕ ಮಾರುಕಟ್ಟೆಗೆ ಅಮೆರಿಕ ದಾಪುಗಾಲಿನಿಂದ ಮುನ್ನುಗ್ಗಲು ತೊಡಗಿದರೂ ಅಮೆರಿಕದ ಆಂತರಿಕ ಬಿಕ್ಕಟ್ಟು ಹಾಗೇನೆ ಜಾಗತಿಕವಾಗಿ ಉದಯಿಸಿ ಬಂದ ‘ಯೂರೋಪಿಯನ್ ಯೂನಿಯನ್’, (ಐರೋಪ್ಯ ಸಂಘಟನೆ) ನಂತರ ಚೀನಾ ದೇಶದ ಪೈಪೋಟಿಗಳಿಂದ ಅಡೆತಡೆಗಳು ನಿರ್ಮಾಣಗೊಂಡವು. ಜೊತೆಗೆ ಅಮೆರಿಕವು ಜಾಗತಿಕ ಹಿಡಿತಕ್ಕಾಗಿ ಇರಾಕ್, ಲಿಬಿಯಾ ಸೇರಿದಂತೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹಲವು ಪ್ರತ್ಯಕ್ಷ ಹಾಗೂ ಪರೋಕ್ಷ ಯುದ್ಧಗಳಲ್ಲಿ ತೊಡಗಿತು. ಆದರೆ ಅಮೆರಿಕದ ಲೆಕ್ಕಾಚಾರದಂತೆ ಆ ಯುದ್ಧಗಳು ಅಮೆರಿಕಕ್ಕೆ ಆರ್ಥಿಕ ಲಾಭವನ್ನಾಗಲಿ ಜಾಗತಿಕ ಹಿಡಿತವನ್ನಾಗಲಿ ತಂದುಕೊಡುವಲ್ಲಿ ದೊಡ್ಡ ಯಶಸ್ಸು ಸಾಧಿಸಲಿಲ್ಲ. ಏಶ್ಯಾದ ಅಫ್ಘಾನಿಸ್ತಾನ ಸೇರಿದಂತೆ ಅಮೆರಿಕ ತನ್ನ ಸೇನೆ ಕಳುಹಿಸಿ ಯುದ್ಧಗಳನ್ನು ನಡೆಸಿದರೂ ಅಮೆರಿಕಕ್ಕೆ ಮತ್ತಷ್ಟು ಆರ್ಥಿಕ ಹೊರೆಗಳನ್ನು ಜೊತೆಗೆ ಜಾಗತಿಕವಾಗಿ ಜನತೆಯ ವಿರೋಧವನ್ನು ಹೆಚ್ಚಿಸಿತೇ ಹೊರತು ಲಾಭ ತಂದುಕೊಡಲಿಲ್ಲ. ಬಹಳ ಬಿಂಬಿಸಲ್ಪಟ್ಟ ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಕೂಡ ಅಮೆರಿಕದ ಆರ್ಥಿಕ ಕುಸಿತವನ್ನು ತಡೆಯುವಲ್ಲಿ ವಿಫಲವಾಯಿತು. 2008ರ ಜಾಗತಿಕ ಕುಸಿತದಿಂದ ಯೂರೋಪಿನ ದೇಶಗಳಾಗಲೀ, ಅಮೆರಿಕವಾಗಲೀ ಇನ್ನೂ ಸುಧಾರಿಸಿಕೊಳ್ಳಲು ಕಷ್ಟ ಪಡುತ್ತಿವೆ. ಈ ಎಲ್ಲಾ ದೇಶಗಳಲ್ಲೂ ಆರ್ಥಿಕ ಬೆಳವಣಿಗೆ ಬಹಳ ಮಂದಗತಿಯಲ್ಲಿದೆ.

ಅಮೆರಿಕ, ಬ್ರಿಟನ್, ಜರ್ಮನಿಗಳ ವಾರ್ಷಿಕ ಜಿಡಿಪಿ ಬೆಳವಣಿಗೆಯ ದರ ತಲಾ ಶೇ. 1.4, 1.1, 1.0 ರಷ್ಟಿವೆ. ಕೆನಡಾದ್ದು ಶೇ. 1.5ರಷ್ಟಿದ್ದರೆ ರಶ್ಯಾದ್ದು ಶೇ. 0.9 ರಷ್ಟಿದೆ. ಇನ್ನು ಇಟಲಿ, ಗ್ರೀಸ್‌ಗಳು ಇಳಿಮುಖ ಬೆಳವಣಿಗೆಯಲ್ಲಿವೆ. ಅಂದರೆ ಇಟಲಿಯದು ಶೇ. 0.6, ಗ್ರೀಸ್‌ನದು ಶೇ. 2.6ರಷ್ಟಿದೆ. ಇದುವರೆಗೂ ಜಗತ್ತಿನ ಮೇಲೆ ಹಿಡಿತ ಸಾಧಿಸಿ ಪ್ರಭಾವಿಸುತ್ತಿದ್ದ ರಾಷ್ಟ್ರಗಳು ಇಂದು ಚೇತರಿಕೆ ಕಾಣದಂತಹ ತೀವ್ರ ಆರ್ಥಿಕ ಸಮಸ್ಯೆಗಳನ್ನೆದುರಿಸುತ್ತಿರುವುದನ್ನು ಈ ಅಂಕಿಅಂಶಗಳು ದೃಢಪಡಿಸುತ್ತವೆ. ಈ ಅಂಕಿಅಂಶಗಳನ್ನು ಜಾಗತಿಕ ಹಣಕಾಸು ಸಂಸ್ಥೆ ಐಎಂಎಫ್ ಇತ್ತೀಚಿಗೆ ಬಿಡುಗಡೆ ಮಾಡಿತ್ತು.

ಇದೇ ಸಮಯದಲ್ಲಿ ಚೀನಾದ ವಾರ್ಷಿಕ ಸರಾಸರಿ ಜಿಡಿಪಿ ಬೆಳವಣಿಗೆ ಶೇ. 8.2ರಷ್ಟಿದೆ. ಚೀನಾ ಕಳೆದ ಹತ್ತು ವರ್ಷಗಳಿಂದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ದಾಖಲಿಸುತ್ತಾ ಬಂದಿದೆ. ಈ ಅಂಶವನ್ನು ಐಎಂಎಫ್ ದೃಢಪಡಿಸಿದೆ. ಚೀನಾದ ಬೆಳವಣಿಗೆ ದರ ಈಗ ಕುಗ್ಗಿದ್ದರೂ ಜಾಗತಿಕವಾಗಿ ಲೆಕ್ಕ ಹಾಕಿದಾಗ ಚೀನಾದ ಆರ್ಥಿಕತೆ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಿದೆ. ಈಗ ಚೀನಾ ಜಾಗತಿಕವಾಗಿ ಎರಡನೇ ಆರ್ಥಿಕ ಶಕ್ತಿ ಎಂದು ಕರೆಸಿಕೊಂಡಿದೆ. ಚೀನಾ ಜಾಗತಿಕವಾಗಿ ಅತೀ ದೊಡ್ಡ ವ್ಯಾಪಾರಿ ರಾಷ್ಟ್ರವಾಗಿದೆ. 2013 ರಿಂದ 2015ರ ವರೆಗಿನ ಅಂಕಿಅಂಶಗಳ ಪ್ರಕಾರ ಚೀನಾ ಅತ್ಯಂತ ದೊಡ್ಡ ಜಾಗತಿಕ ರಫ್ತುದಾರ ರಾಷ್ಟ್ರವಾಗಿ ಕೂಡ ಇದೆ. ಅಮೆರಿಕ, ಐರೋಪ್ಯ ಸಂಘಟನೆಯ ದೇಶಗಳು ಸೇರಿದಂತೆ ಜಾಗತಿಕವಾಗಿ ಹಲವಾರು ದೇಶಗಳು ಚೀನಾವನ್ನು ತಮ್ಮ ಅಗತ್ಯಗಳಿಗಾಗಿ ಅವಲಂಬಿಸಿವೆ. ಅಮೆರಿಕದ ಟ್ರೆಜರಿ ಬಿಲ್ಲುಗಳು, ಬಾಂಡ್‌ಗಳು ಅತ್ಯಂತ ಹೆಚ್ಚಿರುವುದು ಚೀನಾದ ಬಳಿಯೇ ಆಗಿದೆ. ಚೀನಾ ಅಮೆರಿಕದ ಅತ್ಯಂತ ದೊಡ್ಡ ಬ್ಯಾಂಕರ್ ಆಗಿದೆ. ಅಮೆರಿಕಕ್ಕೆ ಅತ್ಯಂತ ಹೆಚ್ಚು ಸಾಲಗಳನ್ನು ಕೊಟ್ಟಿರುವುದು ಕೂಡ ಚೀನಾ ದೇಶ.

ವಿದ್ಯುನ್ಮಾನ ಕ್ಷೇತ್ರದಲ್ಲಿ ಚೀನಾದ್ದು ಇಂದು ದಾಪುಗಾಲು. ಕೊಳ್ಳುವ ಶಕ್ತಿಯ ಲೆಕ್ಕಾಚಾರದ ಪ್ರಕಾರ ಚೀನಾ ದೇಶವು ಇಂದು ಪ್ರಪಂಚದ ಅತೀ ದೊಡ್ಡ ಆರ್ಥಿಕತೆಯಾಗಿದೆ. ಐರೋಪ್ಯ ಸಂಘಟನೆ ಎರಡನೆಯ, ಅಮೆರಿಕ ಮೂರನೆಯ ಸ್ಥಾನಗಳಲ್ಲಿದೆ. ಚೀನಾ ಪ್ರಪಂಚದ ದೊಡ್ಡ ಆಮದುದಾರ ದೇಶವೂ ಕೂಡ ಹೌದು. ಚೀನಾ ಪ್ರಧಾನವಾಗಿ ಕಚ್ಚಾವಸ್ತುಗಳು, ಕಚ್ಚಾ ಅದಿರುಗಳನ್ನು ಹಾಗೆಯೇ ಕಚ್ಚಾ ತೈಲಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಚೀನಾ ಜಾಗತಿಕವಾಗಿ ಶೇ. 54ರಷ್ಟು ಅಲ್ಯೂಮಿನಿಯಮ್, ಶೇ. 50ರಷ್ಟು ನಿಕ್ಕಲ್, ಶೇ. 48ರಷ್ಟು ತಾಮ್ರ, ಶೇ. 45ರಷ್ಟು ಉಕ್ಕು, ಶೇ. 46ರಷ್ಟು ಜಿಂಕ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದಷ್ಟೇ ಅಲ್ಲದೆ ಕೃಷಿ ಉತ್ಪನ್ನಗಳನ್ನು ಕೂಡ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಜಾಗತಿಕವಾಗಿ ಹಲವಾರು ದೇಶಗಳ ಆರ್ಥಿಕತೆ ಗಳು ಚೀನಾ ಮಾಡಿಕೊಳ್ಳುತ್ತಿರುವ ಆಮದಿನ ಮೇಲೆ ಆಧರಿಸಿವೆ. ಅಮೆರಿಕದಂತಹ ದೇಶ ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸರಕುಗಳನ್ನು ಲಾಭದಾಯಕವಾಗಿ ಮಾರಾಟ ವ್ಯವಹಾರ ಮಾಡಬೇಕಾದರೆ ಚೀನಾವನ್ನು ಆಶ್ರಯಿಸಲೇಬೇಕಾದ ಪರಿಸ್ಥಿತಿ ಕೂಡ ಇದೆ. ಅಮೆರಿಕ ಲೇಬಲ್‌ನ ಬಹುತೇಕ ಉತ್ಪನ್ನಗಳು ತಯಾರಾಗುವುದು ಚೀನಾದಲ್ಲೇ. ವಿದ್ಯುನ್ಮಾನ ಉತ್ಪನ್ನಗಳು, ಮೊಬೈಲುಗಳು, ಲ್ಯಾಪ್‌ಟಾಪ್‌ಗಳು, ಗಣಕಯಂತ್ರಗಳು ಸೇರಿದಂತೆ ಸೇನಾ ಉತ್ಪನ್ನಗಳಾದ ರಾಡಾರ್, ಹೆಲಿಕಾಪ್ಟರ್, ಡ್ರೋಣ್‌ಗಳವರೆಗೆ ಚೀನಾ ಮುಂಚೂಣಿಯಾಗಿ ಉತ್ಪಾದಿಸತೊಡಗಿದೆ. ಭಾರತದ ಶೇ. 45ಕ್ಕೂ ಹೆಚ್ಚು ಇಲೆಕ್ಟ್ರಾನಿಕ್ ಉತ್ಪನ್ನಗಳು ಚೀನಾದಿಂದಲೇ ಸರಬರಾಜಾಗುತ್ತಿವೆ. ಅವುಗಳಲ್ಲಿ ಅತ್ಯುತ್ತಮ ಗುಣಮಟ್ಟದ ಹಾಗೆಯೇ ಕಳಪೆ ಗುಣಮಟ್ಟದ ಉತ್ಪನ್ನಗಳೂ ಇವೆ.

ವಿಶ್ವದ ಅತಿ ದೊಡ್ಡ ಸೇನೆಯನ್ನು ಚೀನಾ ಹೊಂದಿದೆ. ಇದೀಗ ಸೇನಾ ಉಪಕರಣಗಳು ಮತ್ತವುಗಳ ಬಿಡಿಭಾಗಗಳ ಉತ್ಪಾದನೆಯತ್ತ ಚೀನಾ ದಾಪುಗಾಲಿಡುತ್ತಿದೆ. ಆ ಮೂಲಕ ಈ ಕ್ಷೇತ್ರದಲ್ಲಿನ ಅಮೆರಿಕ, ರಶ್ಯಾ, ಪ್ರಾನ್ಸ್‌ಗಳ ಹಿಡಿತವನ್ನು ಸಡಿಲಿಸತೊಡಗಿದೆ. ಇದುವರೆಗೆ ಏಶ್ಯಾ ದೇಶಗಳ ಮೇಲೆ ತನ್ನ ವಿಸ್ತರಣಾವಾದಿ ಹಿಡಿತವನ್ನು ಸಾಧಿಸುತ್ತಿದ್ದ ಚೀನಾ ಇದೀಗ ಜಾಗತಿಕ ಮಟ್ಟದಲ್ಲಿ ತನ್ನ ಹಿಡಿತವನ್ನು ಸಾಧಿಸತೊಡಗಿದೆ. ಆ ಮೂಲಕ ತಾನೊಂದು ಸಾಮ್ರಾಜ್ಯಶಾಹಿಯಾಗಿ ಬೆಳೆದಿದೆ. ಜಾಗತಿಕ ಮಾರುಕಟ್ಟೆ, ಹಾಗೆಯೇ ಹಣಕಾಸುಗಳನ್ನು ನಿಯಂತ್ರಿಸತೊಡಗಿದೆ. ತನ್ನ ನೇತೃತ್ವದಲ್ಲಿ ಜಾಗತಿಕ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸತೊಡಗಿದೆ. ಅದರ ಭಾಗವಾಗಿ ‘ಏಶ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್’ ಸ್ಥಾಪನೆಯಾಗಿ ಇದುವರೆಗೂ ಜಾಗತಿಕವಾಗಿ ಮುಂಚೂಣಿಯುಲ್ಲಿದ್ದ ವಿಶ್ವಬ್ಯಾಂಕ್, ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗಳಿಗೆ ಪರ್ಯಾಯವೆಂಬಂತೆ ಕಾರ್ಯಾಚರಿಸತೊಡಗಿದೆ. ಇದರಲ್ಲಿ ಭಾರತವೂ ಸೇರಿದಂತೆ ಜಗತ್ತಿನ 57ಕ್ಕೂ ಹೆಚ್ಚು ರಾಷ್ಟ್ರಗಳು ಸದಸ್ಯರುಗಳಾಗಿವೆ. ಅಮೆರಿಕದ ಮಿತ್ರರಾಷ್ಟ್ರಗಳೆಂದು ಪರಿಗಣಿಸಲ್ಪಟ್ಟ ಆಸ್ಟ್ರೇಲಿಯಾ, ಬ್ರಿಟನ್, ಜರ್ಮನಿ, ಇಟಲಿ, ಪಿಲಿಪ್ಪೀನ್, ದಕ್ಷಿಣ ಕೊರಿಯಾಗಳು ಕೂಡ ಇದರ ಸದಸ್ಯ ರಾಷ್ಟ್ರಗಳಾಗಿವೆ. ಈ ಬ್ಯಾಂಕ್ 2016ರ ಜೂನ್‌ನಿಂದಲೇ ಕಾರ್ಯಾಚರಣೆ ಆರಂಭಿಸಿದೆ. ಭಾರತದ ಆಂಧ್ರಪ್ರದೇಶದ ವಿದ್ಯುತ್ ಯೋಜನೆಗೆ 160 ದಶಲಕ್ಷ ಅಮೆರಿಕನ್ ಡಾಲರುಗಳಷ್ಟು ಸಾಲವನ್ನು ಈ ಬ್ಯಾಂಕ್ ನೀಡಿದೆ.

ಇದೆಲ್ಲದರ ಜೊತೆಗೆ ಬೃಹತ್ ಅಂತಾರಾಷ್ಟ್ರೀಯ ರಸ್ತೆ ಸಂಪರ್ಕ ಜಾಲಗಳನ್ನು ಚೀನಾ ನಿರ್ಮಿಸುತ್ತಿದೆ. ಒನ್ ಬೆಲ್ಟ್ ಒನ್ ರೋಡ್ ಅದರಲ್ಲಿ ಪ್ರಮುಖವಾದುದು. ಈ ಜಾಲ ಏಶ್ಯಾ, ಮಧ್ಯಪ್ರಾಚ್ಯ, ಆಫ್ರಿಕಾ, ಯೂರೋಪ್‌ಗಳನ್ನು ಒಂದೇ ರಸ್ತೆಯ ಜಾಲದೊಳಗೆ ಜೋಡಿಸುವ ಯೋಜನೆಯಾಗಿದೆ. ಈ ರಸ್ತೆ 65 ರಾಷ್ಟ್ರಗಳನ್ನು ಜೋಡಿಸುತ್ತದೆ. ಇದರ ಜೊತೆಗೆ ಚೀನಾ ಪಾಕಿಸ್ತಾನ ಕಾರಿಡಾರ್, 3,000 ಕಿ.ಮೀ.ಗಳ ಹೈಸ್ಪೀಡ್ ರೇಲ್ವೆ ಜಾಲ, ಚೈನಾ ಹಾಗೂ ಸಿಂಗಾಪುರವನ್ನು ಜೋಡಿಸುವ ಯೋಜನೆ, ಮಧ್ಯಾ ಏಶ್ಯಾದ ಅನಿಲ ಜಾಲ ಇತ್ಯಾದಿಗಳೂ ಸೇರಿವೆ. ಈ ಎಲ್ಲಾ ಯೋಜನೆಗಳಲ್ಲಿ ಚೀನಾದ ಸರಕಾರಿ ಒಡೆತನದ 50ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿವೆ. ಜೊತೆಗೆ ಚೀನಾದ ಕರೆನ್ಸಿಯಾದ ‘ಯುವಾನ್’ ಅನ್ನು ಅಂತಾರಾಷ್ಟ್ರೀಯ ಕರೆನ್ಸಿಯನ್ನಾಗಿ ರೂಪಿಸಲಾಗಿದೆ. ಈಗಾಗಲೆ ವಿಶ್ವಬ್ಯಾಂಕ್ ಹಾಗೆಯೇ ಐರೋಪ್ಯ ಸಂಘಟನೆ ಯುವಾನ್ ಅನ್ನು ಅಂತಾ ರಾಷ್ಟ್ರೀಯ ಕರೆನ್ಸಿಯನ್ನಾಗಿ ಮಾನ್ಯತೆ ನೀಡಿದೆ. ರಶ್ಯಾ ದೇಶ ಕೂಡ ಯುವಾನ್‌ಕರೆನ್ಸಿಯನ್ನು ಅಂತಾರಾಷ್ಟ್ರೀಯ ಕರೆನ್ಸಿಯನ್ನಾಗಿ ಪರಿಗಣಿಸಿದೆ. ಇದು ಅಮೆರಿಕದ ಡಾಲರ್ ಹಿಡಿತವನ್ನು ಕುಗ್ಗಿಸಲಾರಂಭಿಸಿದೆ.

ಚೀನಾ ತನ್ನ ಸೇನಾ ವ್ಯೆಹರಚನೆಯನ್ನು ಜಾಗತಿಕವಾಗಿ ವಿಸ್ತರಿಸಲಾರಂಭಿಸಿದೆ. ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ್, ಭೂತಾನ್, ಪಾಕಿಸ್ತಾನ ಮೊದಲಾದ ದೇಶಗಳ ಮೇಲೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ತನ್ನ ಮಿಲಿಟರಿ ನೆಲೆಗಳನ್ನು ಸ್ಥಾಪಿಸಲು ಹೊರಟಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದಂತಹ ರಾಷ್ಟ್ರಗಳ ವಿರೋಧದ ನಡುವೆಯೂ ತನ್ನ ಸೇನಾನೆಲೆಯನ್ನು ನಿರ್ಮಿಸಿದೆ. ರಶ್ಯಾ, ಉತ್ತರ ಕೊರಿಯಾ, ಇರಾನ್‌ಗಳಂತಹ ದೇಶಗಳನ್ನು ತನ್ನ ಜೊತೆಗೆ ರ್ಯಾಲಿ ಮಾಡಿಕೊಂಡಿದೆ. ಯೂರೋಪಿನ ದೇಶಗಳ ಮೇಲೂ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಆಫ್ರಿಕಾದ ಹಲವಾರು ದೇಶಗಳನ್ನು ತನ್ನ ಪ್ರಭಾವ ವಲಯದೊಳಗೆ ಸೇರಿಸಿಕೊಂಡಿದೆ.

ಚೀನಾದ ಸಾಪೇಕ್ಷ ಆರ್ಥಿಕ ಸ್ಥಿರತೆ ಹಾಗೂ ರಾಜಕೀಯ ಸ್ಥಿರತೆಗಳು ಜಾಗತಿಕವಾಗಿ ಅದನ್ನು ಅನುಕೂಲಕರ ಸ್ಥಿತಿಯಲ್ಲಿ ಇಟ್ಟಿದೆ. ಆರ್ಥಿಕ ಬೆಳವಣಿಗೆಯ ಮಟ್ಟ ಇಳಿಕೆಯಲ್ಲಿದ್ದರೂ ಜಾಗತಿಕವಾಗಿ ಇನ್ನೂ ಮುಂಚೂಣಿಯಲ್ಲಿದೆ. ಅಮೆರಿಕದ ಪ್ರಭಾವ ಜಾಗತಿಕವಾಗಿ ಕ್ಷೀಣಿಸುತ್ತಿರುವುದು, ಯೂರೋಪಿನ ಸಾಮ್ರಾಜ್ಯಶಾಹಿ ದೇಶಗಳ ಪ್ರಭಾವ ಕೂಡ ಜಾಗತಿಕವಾಗಿ ಕ್ಷೀಣಿಸುತ್ತಿರುವುದು, ಚೀನಾ ಸಾಮ್ರಾಜ್ಯಶಾಹಿಯಾಗಿ ಜಾಗತಿಕ ಹಿಡಿತವನ್ನು ಸಾಧಿಸಲು ಅನುಕೂಲ ಮಾಡಿದೆ. ಅಮೆರಿಕ, ಯೂರೋಪಿನ ದೇಶಗಳಂತೆ ಚೀನಾ ತನ್ನ ದೇಶದ ಹೊರಗೆ ಸೇನೆಯನ್ನು ತೊಡಗಿಸಿಲ್ಲ. ಇರಾಕ್, ಸಿರಿಯಾ, ಲಿಬಿಯಾ, ಫೆಲೆಸ್ತೀನ್ ಮೊದಲಾದ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ತೊಡಗಿಸಿಕೊಂಡಿಲ್ಲದಿರುವುದು ಹಾಗೆಯೇ ಅಲ್ಲಿನ ಪುನರ್ನಿರ್ಮಾಣದಲ್ಲಿ ಚೀನಾ ಪಾಲ್ಗೊಂಡಿರುವುದು ಕೂಡ ಅನುಕೂಲಕರವಾದ ಅಂಶವಾಗಿದೆ. ಚೀನಾ ಸಾಮ್ರಾಜ್ಯಶಾಹಿ ಜಾಗತಿಕ ಹಿಡಿತದತ್ತ ಮುನ್ನುಗ್ಗುತ್ತಿರುವ ಹೊತ್ತಿನಲ್ಲೇ ಆಂತರಿಕವಾಗಿ ಹಲವು ಸಮಸ್ಯೆಗಳನ್ನೂ ಎದುರಿಸುತ್ತಿದೆೆ. ಶೇ. 12ರಷ್ಟಿದ್ದ ಆರ್ಥಿಕ ಜಿಡಿಪಿ ಬೆಳವಣಿಗೆ ದರ ಶೇ. 8ರ ಸನಿಹಕ್ಕೆ ಇಳಿದಿದೆ. ಆಂತರಿಕವಾಗಿ ಜನರ ಜೀವನ ಮಟ್ಟ ಸಾಪೇಕ್ಷವಾಗಿ ಕಡಿಮೆಯಿದೆ. ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳ ಬಳಿಯೇ ಚೀನಾದ ಸಂಪತ್ತಿನ ಕ್ರೋಡೀಕರಣವಾಗುತ್ತಿದೆ. ಗ್ರಾಮೀಣ ಜನತೆಯ ನಗರ ವಲಸೆ ಅಧಿಕವಾಗಿದೆ. 2016 ರಲ್ಲಿ ಅತ್ಯಂತ ಕಡಿಮೆ ಆರ್ಥಿಕ ಬೆಳವಣಿಗೆಯ ದರವನ್ನು ಅದು ದಾಖಲಿಸಿತ್ತು. ಅದರ ಮೂರನೇ ಒಂದು ಬಾಗದ ಕಬ್ಬಿಣದ ಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ. ಈ ಎಲ್ಲಾ ಅಂಶಗಳು ದೂರಗಾಮಿ ಪರಿಣಾಮವನ್ನು ಬೀರುವಂತಹ ನಕಾರಾತ್ಮಕ ಅಂಶಗಳು. ಈ ನಕರಾತ್ಮಕ ಅಂಶಗಳನ್ನು ಪರಿಗಣಿಸಿದಾಗಲೂ ಚೀನಾ ಜಾಗತಿಕವಾಗಿ ಅತ್ಯಂತ ಸಾಪೇಕ್ಷ ಸ್ಥಿರತೆಯೊಂದಿಗೆ ಸಾಮ್ರಾಜ್ಯಶಾಹಿಯಾಗಿ ಜಾಗತಿಕ ಹಿಡಿತವನ್ನು ಸಾಧಿಸುತ್ತಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಮೂಲಕ ಕೂಡ ತನ್ನ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಗಳು ಇವೆ. ಏಶ್ಯಾದಲ್ಲಿ ತನ್ನ ಹಿಡಿತವನ್ನು ಬಲಗೊಳಿಸುತ್ತಲೇ ಹೋಗುತ್ತಿದೆ. ಇದಕ್ಕೆ ಭಾರತ ಕೂಡ ಈಡಾಗುತ್ತಿದೆ. ಇದುವರೆಗೆ ಅಮೆರಿಕ ಹಾಗೂ ಯೂರೋಪಿನ ರಾಷ್ಟ್ರಗಳು ನಮ್ಮಂತಹ ದೇಶಗಳನ್ನು ಲೂಟಿ ಹೊಡೆಯುತ್ತಿದ್ದು, ಈಗ ಚೀನಾ ಮುಂಚೂಣಿ ಸಾಮ್ರಾಜ್ಯಶಾಹಿ ಶಕ್ತಿಯಾಗಿ ನಮ್ಮ ದೇಶವನ್ನು ಲೂಟಿ ಹೊಡೆಯ ತೊಡಗಿದೆ. ಭಾರತೀಯರಾದ ನಾವು ಚೀನಾದ ಈ ಅಪಾಯವನ್ನು ಗ್ರಹಿಸಿ ನಮ್ಮ ದೇಶದ ಜನರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾದ ಅಗತ್ಯವಿದೆ. ನಮ್ಮ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಹಲವಾರು ಕಂಪೆನಿಗಳು ಚೀನಾ ಕಂಪೆನಿಗಳ ಜೊತೆಗೆ ವಿಲೀನಗಳನ್ನು ಮತ್ತು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವುದನ್ನು ನಾವು ಈ ನಿಟ್ಟಿನಲ್ಲೇ ಗಮನಿಸಬೇಕು.

Writer - ನಂದಕುಮಾರ್, ಕೊಪ್ಪ

contributor

Editor - ನಂದಕುಮಾರ್, ಕೊಪ್ಪ

contributor

Similar News