ರೂಢಿಯಿಂದ ಪ್ರದರ್ಶನಕ್ಕೆ

Update: 2018-01-20 12:30 GMT

ಭಾಗ 2

ವಿಧ ವಿಧ ವರ್ತನೆಗಳು

ರೂಢಿಗತ ವರ್ತನೆಗಳು

ತಾವು ಕಾಣುತ್ತಿರುವ ಹಿರಿಯರಲ್ಲಿ ಪುನರಾವರ್ತನೆಯಾಗುವಂತಹ ಭಾವನೆಗಳು, ವಿಚಾರಗಳು ಮತ್ತು ವರ್ತನೆಗಳು ಮಕ್ಕಳಿಗೆ ರೂಢಿಯಲ್ಲಿ ಒಡಮೂಡುತ್ತವೆ. ಅವುಗಳಲ್ಲಿ ಕ್ರಿಯೆಗೆ ಪ್ರತಿಕ್ರಿಯೆಗಳು, ವಿಷಯಗಳಿಗೆ ಸ್ಪಂದಿಸುವುದು, ನಡವಳಿಕೆಗಳು, ಆಹಾರ ಸೇವಿಸುವ ಪದ್ಧತಿ, ಸ್ನಾನ ಮತ್ತು ಇತರ ಶೌಚಕ್ಕೆ ಸಂಬಂಧಿಸಿದಂತಹ ರೀತಿಗಳು, ನೈತಿಕವಾದಂತಹ ಆಲೋಚನೆಗಳು ಕೂಡಾ ರೂಢಿಗತವಾಗಿಯೇ ಬರುತ್ತವೆ. ಯಾರಿಗಾದರೂ ನಮ್ಮ ಕಾಲು ತಗಲಿದರೆ ತಕ್ಷಣವೇ ಒಂದು ಚಿಕ್ಕ ನಮಸ್ಕಾರ ಮಾಡುವಂತೆ ಕಣ್ಣಿಗೊತ್ತಿಕೊಳ್ಳುವುದು, ಸಾರಿ ಹೇಳುವುದು ಇಂತಹ ರೂಢಿಗೆ ಉದಾಹರಣೆಯಾಗಿದೆ. ಎಷ್ಟೋಬಾರಿ ಮಕ್ಕಳು ಮುಂದೆ ಬೆಳೆದು ದೊಡ್ಡವರಾದರೂ ತಮ್ಮ ವರ್ತನೆಗೆ ವೈಚಾರಿಕವಾಗಿ ಅಥವಾ ವೈಜ್ಞಾನಿಕವಾಗಿ ಕಾರಣವನ್ನು ಕಂಡುಕೊಂಡರೂ, ರೂಢಿಯ ವರ್ತನೆಯನ್ನು ಬಿಡುವುದು ಅಷ್ಟೇನೂ ರೂಢಿಯಲ್ಲಿಲ್ಲ. ಪುಸ್ತಕವೆಂದರೆ ಸರಸ್ವತಿ ಅಥವಾ ಹಣವೆಂದರೆ ಲಕ್ಷ್ಮೀ ಎಂದು ಬಾಲಪಾಠವಾಗಿರುವ ಮಗುವೂ ಕೂಡಾ ಪುಸ್ತಕಕ್ಕೆ ಕಾಲು ತಾಗಿದರೆ ನಮಸ್ಕರಿಸಿಕೊಳ್ಳುತ್ತದೆ. ಹಾಗೆಯೇ ಹಣವು ಕೆಳಗೆ ಬಿದ್ದಾಗ ಅದನ್ನೆತ್ತಿ ಕಣ್ಣಿಗೊತ್ತಿಕೊಳ್ಳುವಂತಹ ರೂಢಿಯಾಗಿರುತ್ತದೆ. ಮಗುವು ಮುಂದೆ ವೈಚಾರಿಕವಾಗಿ ದೇವರು, ಆಚಾರ, ಸಾಂಪ್ರದಾಯಿಕ ನಡವಳಿಕೆಗಳನ್ನು ಪ್ರಶ್ನಿಸಿದರೂ, ತಿರಸ್ಕರಿಸಿದರೂ ಅವರಿಗೇ ಅರಿವಿಲ್ಲದಂತೆ ಪುಸ್ತಕವನ್ನು ಕಾಲಿಂದ ತಳ್ಳುವುದನ್ನು, ತುಳಿಯುವುದನ್ನು, ಹಣವನ್ನು ಉಡಾಫೆೆಯಿಂದ ಎಸೆಯುವಂತೆ ಹಾಕುವುದನ್ನು ಮಾಡುವುದಿಲ್ಲ. ಈ ರೀತಿಯ ಅನೇಕಾನೇಕ ರೂಢಿಗತ ವರ್ತನೆಗಳು ಮಕ್ಕಳಲ್ಲಿ ಬೆಳೆದಿರುತ್ತವೆ. ಇನ್ನು ಮನೆಗೆ ಬಂದಾಗ ಅತಿಥಿಗಳನ್ನು ನೋಡಿಕೊಳ್ಳುವುದು, ಸತ್ಕರಿಸುವುದು, ಬೇರೆ ಬೇರೆ ಸಂದರ್ಭಗಳಲ್ಲಿ ಮನೆಗೆ ಬಂದವರೊಂದಿಗೆ ವರ್ತಿಸುವುದೂ ಕೂಡ ರೂಢಿಗತವಾಗಿರುತ್ತವೆ. ನಮ್ಮ ಮನೆಗೆ ಯಾರೇ ಬಂದರೂ ಊಟ ಮಾಡಿಸದೇ ಕಳುಹಿಸುವುದಿಲ್ಲ, ಎಂದು ಕೇಳುವ ಅನೇಕರ ಕುಟುಂಬದ ಹಿಂದೆ ಆಗಿ ಹೋಗಿರುವ ಸದಸ್ಯರ ಗುಣಸ್ವಭಾವಗಳನ್ನುಗಮನಿಸಿದರೆ ಅವರೂ ಹೀಗೇ ಮಾಡುತ್ತಿದ್ದದ್ದು ತಿಳಿಯುತ್ತದೆ.

ರೂಢಿಗತ ವರ್ತನೆಗಳು ರೂಢಿಯಾಗುವುದು ಹೇಗೆ?

1.ತಮ್ಮ ವರ್ತನೆ ಮತ್ತು ಕ್ರಿಯೆಗಳ ಬಗ್ಗೆ ಇರುವ ಹೆಮ್ಮೆ ಮತ್ತು ಅಭಿಮಾನ. 2.ತಮ್ಮ ವರ್ತನೆಗಳಿಗೆ ಸಿಗುವ ಪ್ರಶಂಸೆ ಮತ್ತು ಸಕಾರಾತ್ಮಕವಾದ ಪ್ರತಿಕ್ರಿಯೆ. 3.ನೀನು ಹೀಗೆ ಮಾಡಬೇಕು ಎಂಬುದನ್ನು ಹಿರಿಯರು ಸ್ಪಷ್ಟವಾಗಿ ನಿರ್ದೇಶಿಸಿದ್ದು, ಅದನ್ನು ತಪ್ಪದಂತೆ ನೋಡಿಕೊಂಡಿರುವುದು. 4.ಧಾರ್ಮಿಕ ಮತ್ತು ನೈತಿಕ ಕಾರಣಗಳು. 5.ಒಂದೇ ಬಗೆಯ ಕೌಟುಂಬಿಕ ಪರಿಸರ ಅಥವಾ ಸಾಮಾಜಿಕ ವಾತಾವರಣದಲ್ಲಿ ಮಕ್ಕಳು ತಮ್ಮ ರೂಪುಗೊಳ್ಳುವ ಸಮಯವನ್ನು (ಫಾರ್ಮೇಶನ್ ಪಿರಿಯಡ್) ಕಳೆಯುವುದು.

ಹಿತಕರವಾದ ಪರಿಚಯಗಳು

ಒಟ್ಟಾರೆ ರೂಢಿ ಎಂಬುದು ಮಕ್ಕಳ ವಿಷಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯಾವುದೇ ಸದ್ಗುಣ ಅಥವಾ ದುರ್ಗುಣ ಎಂಬುದು ಮಗುವಿನಲ್ಲಿ ಹುಟ್ಟಿದಾರಭ್ಯ ಖಂಡಿತ ಬಂದಿರುವುದಿಲ್ಲ. ಅದು ತನ್ನ ಸುತ್ತಮುತ್ತಲ ಪರಿಸರದಲ್ಲಿ ಪ್ರಭಾವಿಸುವ ವಿಷಯಗಳನ್ನು ತನ್ನ ಅರಿವಿಗೇ ಬರದಂತೆ ರೂಢಿ ಮಾಡಿಕೊಂಡಿರುವುದು. ಮಕ್ಕಳು ತಮ್ಮ ಬಾಲ್ಯಾವಸ್ಥೆಯಲ್ಲಿ ಆಗಿರುವಂತಹ ಧಾರ್ಮಿಕಾಚರಣೆಯ ರೂಢಿಗಳನ್ನು ಕೂಡಾ ತಾವು ಬೆಳೆದ ಮೇಲೆ ತಪ್ಪಿಸಿಕೊಳ್ಳುವ ಎಲ್ಲಾ ಅವಕಾಶಗಳಿದ್ದರೂ ಆಂತರ್ಯದಲ್ಲಿ ಅವುಗಳ ಮೇಲಿನ ಪ್ರೀತಿ ಹೋಗಿರುವುದಿಲ್ಲ. ಅದರಲ್ಲೂ ಅವುಗಳ ಅನುಭವ ಹಿತವಾಗಿದ್ದ ಪಕ್ಷದಲ್ಲಿ ತಮ್ಮ ವೈಚಾರಿಕ ಮತ್ತು ವೈಜ್ಞಾನಿಕ ಮನಸ್ಥಿತಿಯು ತಾರ್ಕಿಕವಾಗಿ ಪರಾಮರ್ಶೆ ಮಾಡಿದರೂ, ಅದು ಇದ್ದಲ್ಲಿ ತಪ್ಪೇನು? ಎಂಬ ಮನೋಭಾವದಲ್ಲಿ ಅವುಗಳ ಪೋಷಣೆಗೆ ಮುಂದಾಗುತ್ತಾರೆ. ಒಟ್ಟಾರೆ ಇಲ್ಲಿ ತಿಳಿಯಬೇಕಾದ ವಿಷಯವೆಂದರೆ, ಮಕ್ಕಳಿಗೆ ಹಿತವನ್ನು ಉಂಟುಮಾಡುವ, ಪ್ರಶಂಸೆ ಮತ್ತು ಸಕಾರಾತ್ಮಕವಾದ ಪ್ರತಿಕ್ರಿಯೆಗಳನ್ನು ದೊರಕಿಸಿಕೊಡುವಂತಹ ವರ್ತನೆಗಳನ್ನು ರೂಢಿ ಮಾಡಿಕೊಳ್ಳಲು ಸಮ್ಮತಿಸುತ್ತದೆ. ಆದ್ದರಿಂದಲೇ ಯಾವುದೇ ವಿಷಯವನ್ನು ಮಗುವಿಗೆ ರೂಢಿ ಮಾಡಿಸುವಾಗ ಅದು ಅದಕ್ಕೆ ಎಷ್ಟರಮಟ್ಟಿಗೆ ಹಿತವಾಗಿದೆ ಎಂಬುದನ್ನು ಗಮನಿಸಬೇಕು. ಅಹಿತಕರವಾಗಿದ್ದು ಅದನ್ನು ರೂಢಿಗೊಳಿಸಲು ಯತ್ನಿಸಿದ್ದೇ ಆದರೆ, ನಿರ್ದೇಶಕರ ಬೆರಳ ತುದಿಗೆ ಎದುರಾಗಿ ಮಾತ್ರವೇ ಅವುಗಳನ್ನು ಪಾಲಿಸುತ್ತಿದ್ದು, ನಂತರ ಅದನ್ನು ಬಿಟ್ಟ ಆನಂದವನ್ನು ಅನುಭವಿಸುತ್ತಾರೆ. ನಮ್ಮ ತಂದೆ ಅಥವಾ ಇನ್ನಾರೋ ನಾವು ಸಣ್ಣವರಿದ್ದಾಗ ಸಂಜೆ ಆಗುತ್ತಿದ್ದಂತೆ ಕೈ ಕಾಲು ತೊಳೆದು ದೇವರಿಗೆ ದೀಪ ಹಚ್ಚಿ, ಚಾಪೆ ಹಾಕಿ ಕುಳಿತುಕೊಳ್ಳಬೇಕು, ಇಲ್ಲಾಂದ್ರೆ ಹುಣಸೇ ಚಬ್ಬೆಯಲ್ಲಿ ಮೈ ಮೇಲೆ ಬಾಸುಂಡೆ ಬೀಳುವ ಹಾಗೆ ಹೊಡೆಯುತ್ತಿದ್ದರು ಎನ್ನುವ ವಯಸ್ಕರು ಆ ರೂಢಿಯನ್ನು ಮುಂದುವರಿಸಿರುವುದಿಲ್ಲ. ಅದೇ ಕೆಲಸವನ್ನು ಮಕ್ಕಳಿಗೆ ಹಿತವಾಗುವ ಹಾಗೆ ಬೈಯದೇ, ಹೊಡೆಯದೇ, ತಾವೂ ಅವರೊಂದಿಗೆ ಮಾಡುತ್ತಾ, ಅದರ ಜೊತೆಗೆ ಅವರಿಗೆ ಇಷ್ಟವಾದ ಪ್ರಸಾದವನ್ನು ತಿನ್ನುತ್ತಾ, ಬಂದವರೊಂದಿಗೆ ತಮ್ಮ ಮಕ್ಕಳು ಎಷ್ಟು ಚೆನ್ನಾಗಿ ಇವನ್ನು ಮಾಡುತ್ತಾರೆ ಎಂದು ಹೊಗಳುತ್ತಾ ರೂಢಿ ಮಾಡಿಸಿಕೊಂಡ ಮಕ್ಕಳು ದೊಡ್ಡವರಾದ ಮೇಲೂ ಅವುಗಳನ್ನು ಮುಂದುವರಿಸುವ ಒಲವನ್ನು ತೋರುತ್ತಾರೆ. ಒಂದು ವೇಳೆ ಕಾರ್ಯಕಾರಣಗಳಿಂದ ಮುಂದುವರಿಸಲಾಗದಿದ್ದರೂ ಅವುಗಳ ಮೇಲೆ ನಕಾರಾತ್ಮಕವಾದಂತಹ ಮನಸ್ಥಿತಿಯನ್ನು ಹೊಂದಿರುವುದಿಲ್ಲ. ಜೊತೆಗೆ ತಮ್ಮ ಕಿರಿಯರು ಅಥವಾ ಜೊತೆಯವರು ಅವುಗಳನ್ನು ಮಾಡಲು ಹೋದರೆ ಅಡ್ಡಿಪಡಿಸುವುದಿಲ್ಲ. ಬದಲಾಗಿ ಪ್ರೋತ್ಸಾಹಿಸುತ್ತಾರೆ.

ಪ್ರದರ್ಶಕ ವರ್ತನೆಗಳು ಪ್ರದರ್ಶಕ ವರ್ತನೆಗಳು

ಸಮಾಜದಲ್ಲಿ ಅತ್ಯಂತ ಹೆಚ್ಚು ಸಂಘರ್ಷಗಳನ್ನು ಹುಟ್ಟು ಹಾಕಿವೆ. ಇದು ವ್ಯಕ್ತಿಯ ಮತ್ತು ಸಮಾಜದ ಮನೋಭಾವದಲ್ಲಿಯೂ ಕೂಡ ಬಹಳಷ್ಟು ಕೆಲಸಗಳನ್ನು ಕೊಟ್ಟಿರುವಂತಹದ್ದು. ಪ್ರದರ್ಶಕ ವರ್ತನೆಗಳ ವ್ಯಾಪ್ತಿ ಬಹಳ ದೊಡ್ಡದು. ಏಕೆಂದರೆ ಇದರಲ್ಲಿ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಪಾರಂಪರಿಕ, ಆಧುನಿಕ; ಹೀಗೆ ಹಲವಾರು ಆಯಾಮಗಳನ್ನು ಒಳಗೊಂಡಿರುತ್ತದೆ. ಯಾವುದೇ ಒಬ್ಬ ವ್ಯಕ್ತಿಯು ತನ್ನ ಉಡುಗೆ ತೊಡುಗೆ, ಮಾತು, ತೊಡುವ ಆಭರಣವೇ ಮೊದಲಾದ ವಸ್ತುಗಳು, ತನ್ನವರೊಂದಿಗೆ ಅಥವಾ ಪರಕೀಯರೊಂದಿಗೆ ನಡೆದುಕೊಳ್ಳುವ ರೀತಿ; ಎಲ್ಲವೂ ಕೂಡ ಪ್ರದರ್ಶಕ ವರ್ತನೆಗಳ ಪರಿಧಿಯೊಳಗೆ ಸೇರಿಕೊಳ್ಳುತ್ತವೆ. ಪ್ರಭಾವ ಮತ್ತು ಪ್ರದರ್ಶನಗಳ ನಡುವಲ್ಲಿ ವ್ಯಕ್ತಿಯು ಅತ್ಯಂತ ದೊಡ್ಡ ತುಮುಲ ಮತ್ತು ಕ್ಲೀಷೆಗಳನ್ನು ಅನುಭವಿಸುತ್ತಾನೆ. ತನ್ನ ಒಲವು, ನಿಲುವು, ಧೋರಣೆ, ಕಾಮ, ಪ್ರೇಮ, ಒಪ್ಪಿಗೆ, ಅಸಮ್ಮತಿ, ಕೋಪ, ಆಸೆ; ಈ ಎಲ್ಲವನ್ನೂ ಅವನು ಏಕೆ ಮತ್ತು ಹೇಗೆ ತನ್ನ ವರ್ತನೆಗಳ ಮೂಲಕ ಪ್ರದರ್ಶಿಸುತ್ತಾನೆ ಎಂಬುದು ಬಹಳ ದೊಡ್ಡ ವಿಷಯವೇ ಆಗಿದೆ. ಆದ್ದರಿಂದ ಮಕ್ಕಳ ಬೆಳವಣಿಗೆಯ ಮನೋವೈಜ್ಞಾನಿಕ ಅಧ್ಯಯನದಲ್ಲಿ ಪ್ರದರ್ಶಕ ವರ್ತನೆಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ವ್ಯಕ್ತಿಗತವಾಗಿ ತನ್ನನ್ನು ತಾನು ಪ್ರದರ್ಶಿಸಿಕೊಳ್ಳುವ, ಯಾವುದೇ ಒಂದು ಸಾಮಾಜಿಕ ಸಂಸ್ಥೆಯನ್ನು ಪ್ರತಿನಿಧಿಸುತ್ತಾ ಪ್ರದರ್ಶಿಸುವ ವರ್ತನೆಗಳು ನಾನಾ ಪರಿಣಾಮಗಳನ್ನು ಬೀರುತ್ತವೆ. ಈ ಪ್ರದರ್ಶಕ ವರ್ತನೆಗಳಿಂದಾಗಿ ಸಮಾಜದಲ್ಲಿ ಮತ್ತು ವ್ಯಕ್ತಿಯ ಸಹಜೀವಿಗಳಲ್ಲಿ ಕ್ಷೋಭೆಯನ್ನುಂಟು ಮಾಡಬಹುದು, ಆತಂಕವನ್ನು ಉಂಟುಮಾಡಬಹುದು, ಕ್ರಾಂತಿಯನ್ನು ಉಂಟುಮಾಡಬಹುದು, ಹೊಸ ಚರ್ಚೆಗೆ, ಜಿಜ್ಞಾಸೆಗೆ ಅವಕಾಶವಾಗಬಹುದು. ಒಟ್ಟಾರೆ, ತಮ್ಮ ವರ್ತನೆಗಳನ್ನು ಪ್ರದರ್ಶಿಸಿದ ಕೂಡಲೇ ಚರ್ಚೆಗೆ ಗ್ರಾಸವಾಗುವುದರ ಜೊತೆಗೆ ಕಾನೂನು ದೃಷ್ಟಿಗೂ ಒಳಪಡಬಹುದು. ಆದ್ದರಿಂದಲೇ ಪ್ರದರ್ಶಕ ವರ್ತನೆಗಳನ್ನು ಬಹಳ ಜಾಗರೂಕತೆಯಿಂದ ಅವಲೋಕಿಸಬೇಕಾಗುತ್ತದೆ. ಆದರೆ ಅದರೊಟ್ಟಿಗೆ ಎಷ್ಟರ ಮಟ್ಟಿಗೆ ಅದು ಪ್ರಾಮಾಣಿಕವಾಗಿರಬೇಕು, ಎಷ್ಟರಮಟ್ಟಿಗೆ ವಿವೇಚನೆಗೆ ಒಳಗೊಂಡು ಪ್ರದರ್ಶಕವಾಗಬೇಕು, ಎಷ್ಟರ ಹಂತದವರೆಗೂ ಅದನ್ನು ಸಹಜೀವಿಗಳು ಮತ್ತು ಸಮಾಜವು ಮಾನ್ಯ ಮಾಡುವುದು; ಇತ್ಯಾದಿಗಳನ್ನೆಲ್ಲಾ ನೋಡುವಂತಹ ಅನಿವಾರ್ಯತೆ ಖಂಡಿತವಾಗಿಯೂ ಇರುತ್ತದೆ.

ಪ್ರದರ್ಶಕ ವರ್ತನೆಗಳಲ್ಲಿ ಸಾಮಾನ್ಯವಾಗಿ ತಮ್ಮನ್ನು ತಾವು ಅಭಿವ್ಯಕ್ತಗೊಳಿಸುವುದು ಒಂದು ಪ್ರಾಥಮಿಕವಾದ ಹಂತವಾದರೆ, ಇತರರನ್ನು ಆಕರ್ಷಿಸುವುದಕ್ಕೂ ಒಂದು ಸಾಧನ. ಉಡುಗೆ ತೊಡುಗೆ, ಮಾತು, ನಿಲ್ಲುವ, ಕೂರುವ ಭಂಗಿ, ಹಾಡುವುದು, ವಿವಿಧ ಅಲಂಕಾರಗಳಿಂದ ಸಿಂಗರಿಸಿಕೊಳ್ಳುವುದು ಎಲ್ಲವೂ ಇತರಿಗಾಗೇ. ಇನ್ನು ಈಗ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ತೋರುವ ಪ್ರದರ್ಶಕ ವರ್ತನೆಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಮಾಡಬಹುದು.

ವಿವಿಧ ಹಂತಗಳಲ್ಲಿ ಪ್ರದರ್ಶಕ ವರ್ತನೆಗಳು

ಮಕ್ಕಳಲ್ಲಿ ಬೌದ್ಧಿಕ, ಮಾನಸಿಕ ಬೆಳವಣಿಗೆಯ ವಿವಿಧ ಹಂತಗಳನ್ನು ಅವರ ಪ್ರದರ್ಶಕ ವರ್ತನೆಗಳಲ್ಲಿ ಗುರುತಿಸಬಹುದು.

ಮಗುವಿನಲ್ಲಿ ಆತ್ಮಸ್ಥೈರ್ಯವಿದೆಯೋ ಇಲ್ಲವೋ, ಮನೋ ಬಲವಿದೆಯೋ ಇಲ್ಲವೋ, ಹಟಮಾರಿಯೋ, ವಿಧೇಯನೋ, ಚುರುಕಾಗಿದೆಯೋ, ಮಂದಮತಿಯೋ; ಈ ಎಲ್ಲಾ ವಿಷಯಗಳನ್ನೂ ಅದರ ಪ್ರದರ್ಶಕ ವರ್ತನೆಗಳಲ್ಲಿ ಗುರುತಿಸಬಹುದು.

ಯಾವುದೇ ಮಗುವಿನ ಬೆಳವಣಿಗೆಯು ಅದರ ಪೋಷಣೆ ಮತ್ತು ಅದಕ್ಕೆ ಒದಗುತ್ತಿರುವ ತರಬೇತಿಯ ಮೇಲೆ ಆಧಾರವಾಗಿರುವುದು. ಇದರಿಂದ ಪೋಷಕರು ತಾವು ಮಾಡುತ್ತಿರುವ ಪೋಷಣೆ ಮತ್ತು ನೀಡುತ್ತಿರುವ ತರಬೇತಿ ಸರಿಯಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲೂ ಮಗುವಿನ ಪ್ರದರ್ಶಕ ವರ್ತನೆಗಳನ್ನು ಮಾನದಂಡವಾಗಿ ಪರಿಗಣಿಸಬಹುದು.

ಮಗುವಿಗೆ ಪ್ರೀತಿ, ಪ್ರಾಮುಖ್ಯತೆ, ಸಾಂತ್ವನದಂತಹ ಭಾವನಾತ್ಮಕವಾದಂತಹ ಆಸರೆಯು ಕೊರತೆಯಾದರಂತೂ ಅದು ಪ್ರದರ್ಶಕ ವರ್ತನೆಗಳಲ್ಲಿ ನೇರವಾಗಿ ಪರಿಣಾಮ ಬೀರುತ್ತವೆ. ಮನೆಗಳಲ್ಲಿ ಪ್ರೀತಿ ಮತ್ತು ಪ್ರಾಮುಖ್ಯತೆಯ ಕೊರತೆಯನ್ನು ಅನುಭವಿಸುವ ಮಕ್ಕಳು ತಮ್ಮ ವರ್ತನೆಗಳನ್ನು ಅನಿಯಂತ್ರಿತವಾಗಿ ಪ್ರದರ್ಶಿಸುತ್ತಾರೆ.

ಮಗುವೊಂದು ತನ್ನಕಡೆಗೆ ಆಕರ್ಷಿಸಲು, ತಾನಿದ್ದೇನೆಂದು ತೋರ್ಪಡಿಸಲು, ಅಥವಾ ತನ್ನ ಯಾವುದೋ ಕೋಪ, ಅಸಹನೆ, ನಿರಾಸೆಗಳನ್ನು ವ್ಯಕ್ತಪಡಿಸಲು ತನ್ನ ವರ್ತನೆಯನ್ನು ಯಾರ ಸಮ್ಮುಖದಲ್ಲಾದರೂ ಪ್ರದರ್ಶಿಸುತ್ತದೆ. ನಾವು ಯಾರಾದರ ಮನೆಗೆ ಹೋದಾಗ ಮಗುವಾಗಲಿ, ದೊಡ್ಡವರೇ ಆಗಲಿ, ನಮಗೆ ಕರೆದುಕೊಂಡು ಹೋದವರಿಗೆ ಮುಜುಗರ ಉಂಟುಮಾಡುವಂತೆ ವರ್ತಿಸುತ್ತಿದ್ದಾರೆಂದರೆ, ಅಲ್ಲಿ ಏನೋ ಕೊರತೆ, ಸಮಸ್ಯೆ ಮತ್ತು ಸಂಘರ್ಷ ಇದೆ ಎಂದೇ ಅರ್ಥ.

ದೊಡ್ಡವರು ಕೊಂಚ ನಿಯಂತ್ರಿತವಾಗಿ ಮತ್ತು ನಾಜೂಕಾಗಿ ಮಾಡಬಹುದು. ಮಕ್ಕಳು ಏಕಾಏಕಿ, ನೇರಾನೇರವಾಗಿ ಪ್ರದರ್ಶಿಸಬಹುದು. ಯಾವುದೇ ಮಗುವಾಗಲಿ ತನ್ನ ಐದನೆಯ ವಯಸ್ಸಿನ ಹೊತ್ತಿಗೇ ತನಗೆ ನೀಡಲಾಗುತ್ತಿರುವ ಪ್ರಾಮುಖ್ಯತೆ ಮತ್ತು ಆದ್ಯತೆಯನ್ನು ಗುರುತಿಸುತ್ತದೆ. ತಾನು ಅಪಮಾನಿತನಾಗುತ್ತಿದ್ದೇನೆ ಅಥವಾ ಗೌರವಕ್ಕೆ ಒಳಗಾಗುತ್ತಿದ್ದೇನೆ ಎಂಬ ಭಾವವನ್ನು ಸ್ಪಷ್ಟವಾಗಿ ಗ್ರಹಿಸಬಲ್ಲದು. ಇದರೊಂದಿಗೇ ಇತರರು ತನ್ನ ಬಗ್ಗೆ ಏನು ಪ್ರತಿಕ್ರಿಯೆ ಕೊಡುತ್ತಾರೆ ಅಥವಾ ಪ್ರಶಂಸೆಯೋ, ಖಂಡನೆಯೋ; ಯಾವುದು ದೊರಕುತ್ತದೆ ಎಂಬುದನ್ನೂ ಒಂದು ಸಾಧಾರಣ ಮನಸ್ಥಿತಿಯ ಮಗು ಆಲೋಚಿಸಬಲ್ಲದು. ಸ್ಪರ್ಧಾತ್ಮಕ ಮನೋಭಾವ, ತನ್ನನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಮನಸ್ಥಿತಿಯೂ ಕೂಡ ಮಗುವು ಹೊಂದಿರುತ್ತದೆ. ಅಲ್ಲದೇ ತನ್ನ ಕೆಲಸವನ್ನು ಮತ್ತು ಗುಣವನ್ನು ಗಮನಿಸಿಕೊಳ್ಳುವ ಹಾಗೂ ಇತರ ತನ್ನ ಒಡನಾಡಿಗಳ ಕೆಲಸ ಮತ್ತು ಗುಣವನ್ನು ಗುರುತಿಸುವಂತಹ ಸಾಮರ್ಥ್ಯವೂ ಕೂಡ ಆ ಮಗುವಿನಲ್ಲಿರುತ್ತದೆ. ಆದ್ದರಿಂದಲೇ ಮಗುವನ್ನು ನೋಡಿಕೊಳ್ಳುವ ಪ್ರತಿಯೊಬ್ಬ ಪಾಲಕರೂ ವಯಸ್ಸು ಸಣ್ಣದೆಂದು ಖಂಡಿತ ಕಡೆಗಣಿಸಬಾರದು. ಅವರು ಭವಿಷ್ಯದಲ್ಲಿ ಪ್ರಭಾವ ಬೀರುವಂತಹ ಮಹಾಶಕ್ತಿಗಳಾಗಿ ಈಗ ರೂಪುಗೊಳ್ಳುವಂತಹ ಶಕ್ತಿಗ್ರಹಿಕೆಯ ಸಮಯದಲ್ಲಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು. ಪ್ರದರ್ಶಕ ವರ್ತನೆಗಳಲ್ಲಿ ಬಾಲ್ಯ, ಕಿಶೋರ, ಹದಿಹರೆಯ; ಹೀಗೆ ಮಗುವಿನ ವಯೋಮಾನದ ಎಲ್ಲಾ ಹಂತಗಳಲ್ಲಿ ಅಧ್ಯಯನ ಮತ್ತು ಗಮನ ಬಹಳ ಮುಖ್ಯ. ಅವುಗಳನ್ನೆಲ್ಲಾ ಮುಂದೆ ವಿವರವಾಗಿ ಗಮನಿಸೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News