ಆರೆಸ್ಸೆಸ್‌ನಂತಹ ಅಪಾಯಕಾರಿ ಸಂಘಟನೆ ಜಗತ್ತಿನಲ್ಲೇ ಇಲ್ಲ: ಬಿ.ಕೆ.ಹರಿಪ್ರಸಾದ್

Update: 2018-01-20 15:54 GMT

ಬೆಂಗಳೂರು, ಜ.20: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದು ಜನರಿಂದ ಆಯ್ಕೆಯಾದ ಬಿಜೆಪಿ ಪ್ರತಿನಿಧಿಗಳಲ್ಲ, ನಾಗ್ಪುರದಿಂದ ನೇಮಿಸಲ್ಪಟ್ಟಿರುವ ಆರೆಸ್ಸೆಸ್ ನಾಯಕರೆಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಶನಿವಾರ ಸಿರಿವರ ಪ್ರಕಾಶನ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕಿ ಕಲೈಸೆಲ್ವಿ ಅನುವಾದಿಸಿರುವ ‘ಸಂಚುಗಾರ ಸಂಘ ಪರಿವಾರ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸಹ ಸಂಘಪರಿವಾರದ ಕೈಗೊಂಬೆಯಾಗಿದ್ದಾರೆ. ಕೇಂದ್ರದ ಸಚಿವ ಸಂಪುಟಕ್ಕೆ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳುವಂತಹ ಯಾವುದೇ ಅಧಿಕಾರವಿಲ್ಲವೆಂದು ತಿಳಿಸಿದರು.

ಬಿಜೆಪಿ ಅಧಿಕಾರದಲ್ಲಿರುವ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ಮೇಲೆ ಆರೆಸ್ಸೆಸ್ ತನ್ನ ಹಿಡಿತವನ್ನು ಸಾಧಿಸಿದೆ. ಹೀಗಾಗಿ ಬಿಜೆಪಿ ಆಡಳಿತವಿರುವ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಬದಲಿಗೆ, ಕೋಮು ಗಲಭೆ ಪ್ರಕರಣಗಳೇ ಹೆಚ್ಚಾಗುತ್ತಿದೆ. ಈ ಮೂಲಕ ಜನಸಾಮಾನ್ಯರು ಹಸಿವಿನ ಜೊತೆಗೆ ದಿನಪೂರ್ತಿ ಆತಂಕದಲ್ಲೇ ಜೀವನ ದೂಡುವಂತಾಗಿದೆ ಎಂದು ಅವರು ವಿಷಾದಿಸಿದರು.

ಆರೆಸ್ಸೆಸ್ ಅಕ್ಟೋಪಸ್‌ನಂತೆ ಅಪಾಯಕಾರಿ: ವಿಷಕಾರಿ ಹಾವನ್ನು ನಾವು ನಂಬಬಹುದು. ಆದರೆ, ಕೇವಲ ಸುಳ್ಳುಗಳನ್ನು ಹಬ್ಬಿಸಿಯೇ ದೇಶದಲ್ಲಿ ವೈದಿಕ ಸಿದ್ಧಾಂತವನ್ನು ಬಿತ್ತುತ್ತಿರುವ ಆರೆಸ್ಸೆಸ್‌ನಂತಹ ಅಪಾಯಕಾರಿ ಸಂಘಟನೆ ಜಗತ್ತಿನಲ್ಲಿಯೇ ಸಿಗುವುದಿಲ್ಲ. ಆರೆಸ್ಸೆಸ್ ಅಕ್ಟೋಪಸ್‌ನಂತೆ, ಯಾರನ್ನು ಹೇಗೆ ಹತ್ಯೆ ಮಾಡಲಿದೆಯೋ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಜನತೆ ಸದಾ ಎಚ್ಚರಿಕೆಯಿಂದಿರಬೇಕು ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಮಾತನಾಡಿ, ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಹಿಂದೂಗಳು ಎಂದು ಘೋಷಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ದೇಶದಲ್ಲಿ ಹಿಂದೂ, ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ನರಿಂದ ಸಮಸ್ಯೆಯಾಗುತ್ತಿಲ್ಲ. ಬದಲಾಗಿ ಬ್ರಾಹ್ಮಣಶಾಹಿ ವೈದಿಕರಿಂದ ದೇಶದಲ್ಲಿ ದ್ವೇಷ, ಅಸಹನೆ, ಅತ್ಯಾಚಾರ, ಅನಾಚಾರಗಳು ನಡೆಯುತ್ತಿದ್ದು, ಇದು ದೇಶಕ್ಕೆ ದೊಡ್ಡ ಸಮಸ್ಯೆಯಾಗಿದೆ ಎಂದು ತಿಳಿಸಿದರು.

ವೈದಿಕರೇ ನಮ್ಮ ಶತ್ರುಗಳು: ದೇಶದಲ್ಲಿ ತಾಂಡವವಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ಕಾರಣ ಯಾರು ಎಂಬುದನ್ನು ಕೂಲಂಕುಶವಾಗಿ ಹುಡುಕುತ್ತಾ ಹೋದರೆ, ವೈದಿಕರ ಜನವಿರೋಧಿ ನೀತಿಗಳು ದೇಶದಲ್ಲಿ ಮಾಡಿರುವ ಅವಾಂತರಗಳು ಗೋಚರವಾಗುತ್ತದೆ. ಹೀಗಾಗಿ ನಮ್ಮ ಶತ್ರಗಳು ವೈದಿಕರೇ ಎಂಬುವುದರಲ್ಲಿ ಸಂಶಯವಿಲ್ಲ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಪ್ರೊ.ಕೆ.ಮರುಳ ಸಿದ್ದಪ್ಪ, ಸಂಚುಗಾರ ಸಂಘ ಪರಿವಾರದ ಮೂಲ ಲೇಖಕ ವಿಡುದಲೈ ರಾಜೇಂದ್ರನ್, ಲೇಖಕಿ ಕಲೈಸೆಲ್ವಿ ಹಾಗೂ ಸಿರಿವರ ಪ್ರಕಾಶನದ ರವೀಂದ್ರನಾಥ್ ಮತ್ತಿತರಿದ್ದರು.

ವೈದಿಕರನ್ನು ಬೇರ್ಪಡಿಸೋಣ:
ದೇಶದಲ್ಲಿರುವ ಪ್ರಗತಿಪರರು, ಜಾತ್ಯತೀತವಾದಿಗಳು, ಸಮಾನತೆ, ಸಹಬಾಳ್ವೆಯ ಬಗ್ಗೆ ಆಶಯವನ್ನಿಟ್ಟುಕೊಂಡಿರುವ ಪ್ರತಿಯೊಬ್ಬರೂ ಹಿಂದೂಗಳಾಗಿದ್ದಾರೆ. ಆದರೆ, ಅಸಮಾನತೆಯನ್ನೆ ತನ್ನ ಸಿದ್ಧಾಂತವನ್ನಾಗಿಸಿಕೊಂಡಿರುವ ವೈದಿಕರು ಹಿಂದೂಗಳೆಂದು ಹೇಳಿಕೊಂಡು, ಹಿಂದೂ ಧರ್ಮಕ್ಕೆ ಅಪಪ್ರಚಾರ ಮಾಡಿದ್ದಾರೆ. ಹೀಗಾಗಿ ಅವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸಬೇಕು.
-ಅಗ್ನಿ ಶ್ರೀಧರ್ ಹಿರಿಯ ಪತ್ರಕರ್ತ

ಅಸ್ವಸ್ಥ ಹೆಗಡೆ ರಾಜೀನಾಮೆ ನೀಡಲಿ :
ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಗೆ ಬುದ್ಧಿ ಭ್ರಮಣೆಯಾಗಿದೆ. ಅವರು ಜನಪ್ರತಿನಿಧಿಯಾಗಿ ಮುಂದುವರೆಯುವುದಕ್ಕೆ ಕಿಂಚಿತ್ತೂ ಯೋಗ್ಯತೆಯಿಲ್ಲ. ಅವರ ಹೇಳಿಕೆಯಿಂದಾಗಿ ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳುವುದು ಒಳಿತು. ದಕ್ಷಿಣ ಕನ್ನಡದಲ್ಲಿ ಕೋಮು ದಳ್ಳುರಿಗೆ ಹತ್ಯೆಯಾಗಿರುವ ಬಹುತೇಕರನ್ನು ಸಂಘಪರಿವಾರದವರೆ ಕೊಂದಿದ್ದಾರೆ. ಪ್ರವೀಣ್ ಪೂಜಾರಿಯೆಂಬ ಬಿಜೆಪಿ ನಾಯಕನನ್ನು ಬಜರಂಗದಳ ಹತ್ಯೆ ಮಾಡಿದೆ. ಅಂದರೆ, ಹಿಂದುಳಿದ, ದಲಿತ ಜಾತಿಗೆ ಸೇರಿದ ಯಾವುದೇ ವ್ಯಕ್ತಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆಯುತ್ತಿದ್ದಂತೆ ಸಂಘಪರಿವಾರ ಆತನನ್ನು ಹತ್ಯೆ ಮಾಡಲಿದೆ. ಇದೇ ಅದರ ನೀತಿ. ಅಲ್ಲಿ ಬದುಕುವುದಕ್ಕೆ ಅವಕಾಶವಿರುವುದು ಕೇವಲ ಬ್ರಾಹ್ಮಣರಿಗೆ ಮಾತ್ರ.
-ಬಿ.ಕೆ.ಹರಿಪ್ರಸಾದ್ ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News