ಶೀಘ್ರದಲ್ಲಿ ಕರ್ನಾಟಕ ವಿದ್ಯುತ್ ಸ್ವಾವಲಂಬಿ ರಾಜ್ಯ: ಸಚಿವ ಡಿ.ಕೆ. ಶಿವಕುಮಾರ್

Update: 2018-01-20 15:42 GMT

ಬೆಂಗಳೂರು, ಜ. 20: ಸೌರಶಕ್ತಿ, ಪವನ ಶಕ್ತಿ, ಜಲ ವಿದ್ಯುತ್, ಥರ್ಮಲ್ ಪವರ್ ಸೇರಿ ವಿದ್ಯುತ್ ಉತ್ಪಾದನೆಗೆ ಸರಕಾರ ಕೈಗೊಂಡಿರುವ ಹಲವು ಕ್ರಮಗಳಿಂದ ಕರ್ನಾಟಕ ಮುಂದಿನ ಕೆಲ ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿ ರಾಜ್ಯವಾಗಲಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ

ಶನಿವಾರ ಭಾರತೀಯ ವೆಚ್ಚ ಲೆಕ್ಕಿಗರ ಕರ್ನಾಟಕ ಶಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಇಂಧನ ವಲಯದ ಸುಧಾರಣೆ ಮತ್ತು ವೆಚ್ಚ ನಿರ್ವಹಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೈಗಾರಿಕೆಗಳು, ರೈತರು, ಕಂಪೆನಿಗಳು ಸೇರಿದಂತೆ ಎಲ್ಲ ಗ್ರಾಹಕರು ಮುಖ್ಯ. ಹೀಗಾಗಿ ಅವರಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ವಿದ್ಯುತ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲಿದೆ ಎಂದ ಅವರು, ರಾಜ್ಯದಲ್ಲಿ ಹಲವು ವರ್ಷಗಳಿಂದ ಬರಗಾಲವಿದೆ. 140 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಹೀಗಿದ್ದರೂ, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯಲ್ಲಿ ತೊಂದರೆ ಎದುರಾಗದಂತೆ ನಿಭಾಯಿಸಲಾಗುತ್ತಿದೆ ಎಂದರು.

ಪಾವಗಡದಲ್ಲಿ ಅತಿದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, 2 ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ರೈತರು ಜಾಗ ನೀಡಿದ್ದು, ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿಯೂ ಮಾರ್ಪಾಡು ಮಾಡಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ವಿದ್ಯುತ್ ಕಂಪೆನಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುವ ಶಕ್ತಿ ಸಾಮರ್ಥ್ಯ ಪಡೆದಿವೆ. ಕನಕಪುರದಲ್ಲಿ ಪ್ರಾಯೋಗಿಕವಾಗಿ ಸೂರ್ಯ ರೈತ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಸೌರ ವಿದ್ಯುತ್ ಯೋಜನೆ ಮೂಲಕ ರೈತರಿಗೆ ವಿದ್ಯುತ್ ಒದಗಿಸಲಾಗುವುದು. ಇದರಿಂದ ವರ್ಷದ ಎಲ್ಲ ದಿನವೂ ರೈತರಿಗೆ ವಿದ್ಯುತ್ ದೊರೆಯಲಿದೆ ಎಂದರು.

ವಿದ್ಯುತ್ ಪೂರೈಕೆ ವೆಚ್ಚ ಕಡಿತ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಚರ್ಚಿಸಿ ಮುಂದೆ ಏನಾಗಬೇಕೆಂಬ ಸಲಹೆಗಳನ್ನು ನೀಡಿದರೆ ಅವುಗಳನ್ನು ಅನುಷ್ಠಾನಕ್ಕೆ ತರಲು ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು ಶಿವಕುಮಾರ್ ಇದೇ ವೇಳೆ ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷ ಜಿ.ಎನ್.ವೆಂಕಟ್‌ರಾಮ್, ಅಧ್ಯಕ್ಷ ಮಹಾಬಲೇಶ್ವರ್ ಭಟ್, ಉಪಾಧ್ಯಕ್ಷ ಸುರೇಶ್ ಜಿ.ಗುಂಜಹಳ್ಳಿ, ಎನ್.ಆರ್.ಕೌಶಿಕ್, ಸಂಜಯ್ ಗುಪ್ತ, ಎಚ್.ಆರ್.ಶ್ರೀಪಾದ್, ಮಾಧ್ಯಮ ವಿಭಾಗದ ಅಧ್ಯಕ್ಷ ಡಾ.ಎ.ಎಸ್. ಗುರುದತ್ ಸಮಾರಂಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News