ಜನಪ್ರತಿನಿಧಿಗಳಿಗೆ ಸೈದ್ಧಾಂತಿಕ ಸ್ಪಷ್ಟತೆಯಿಲ್ಲ: ಪ್ರೊ.ಮರುಳಸಿದ್ದಪ್ಪ

Update: 2018-01-20 13:01 GMT

ಬೆಂಗಳೂರು, ಜ.20: ಪ್ರಸ್ತುತ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರಿಗಿದ್ದ ಸೈದ್ಧಾಂತಿಕ ಸ್ಪಷ್ಟತೆ ಹಾಗೂ ಇಂದಿರಾ ಗಾಂಧಿಗಿದ್ದ ಬಡವರ ಪರವಾದ ಕಾಳಜಿ ಇಲ್ಲವಾಗಿದೆ. ಕೇವಲ ಚುನಾವಣೆಯಲ್ಲಿ ಜಯಗಳಿಸುವುದೊಂದೇ ಮಾನ ದಂಡವಾಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಮರುಳಸಿದ್ದಪ್ಪ ಬೇಸರ ವ್ಯಕ್ತಪಡಿಸಿದರು.

ಶನಿವಾರ ನಗರದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂಚುಗಾರ ಸಂಘ ಪರಿವಾರ’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರದ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಜಾತ್ಯತೀತ ಚಿಂತನೆವುಳ್ಳವರಾಗಿದ್ದರು ಎಂಬುವುದೇ ಹೆಮ್ಮೆಯ ವಿಷಯವೆಂದು ತಿಳಿಸಿದರು.

ಜಾತ್ಯತೀತತೆ ಅಂದ್ರೆ ಒಗ್ಗಟ್ಟು: ಸಂಘಪರಿವಾರದ ನಾಯಕರು ಜಾತ್ಯತೀತತೆಯ ಕುರಿತು ಜನತೆಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಜಾತ್ಯತೀತತೆ ಎಂದರೆ ಜಾತಿ ಇಲ್ಲವೆ ಧರ್ಮವನ್ನು ಬಿಡುವುದಲ್ಲ. ತಮ್ಮ ಜಾತಿ, ಧರ್ಮದಲ್ಲಿ ಇದ್ದುಕೊಂಡೆ ಅನ್ಯ ಜಾತಿ, ಧರ್ಮಗಳನ್ನು ಗೌರವಿಸುತ್ತಾ, ಸಹಬಾಳ್ವೆಯಿಂದ ಬದುಕುವುದಾಗಿದೆ ಎಂದು ಅವರು ತಿಳಿಸಿದರು.

ಶೂದ್ರರು, ದಲಿತರು ತಮ್ಮ ಪರಂಪರೆಯ ಅಸ್ಮಿತೆಯ ಕುರಿತು ಅಭಿಮಾನ ಪಟ್ಟುಕೊಳ್ಳಬೇಕು. ವೈದಿಕರು ಈ ದೇಶವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದ್ದರೆ, ಶೂದ್ರ, ದಲಿತ ಸಮುದಾಯ ಜೀವಪರವಾಗಿ ಬದುಕುವುದನ್ನು ಹೇಳಿಕೊಟ್ಟಿದೆ. ಆದರೆ, ಅಕ್ಷರ ಸಂಸ್ಕೃತಿ ಬಂದಾದ ಮೇಲೆ ವೈದಿಕರು ಮನುವಾದವನ್ನು ಏಕಮಾತ್ರ ಸಂಸ್ಕೃತಿಯೆಂದು ಬಿಂಬಿಸಲು ಹೊರಟಿದೆ. ಹೀಗಾಗಿ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಸಾರಿದ ಪಂಪ, ಕುವೆಂಪು, ವಚನಕಾರರು, ಜುಂಜಪ್ಪ, ಮಂಟೇಸ್ವಾಮಿ ನಮ್ಮ ಆದರ್ಶವಾಗಲಿ.
-ಪ್ರೊ.ಮರುಳಸಿದ್ದಪ್ಪ, ಅಧ್ಯಕ್ಷ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News