ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕೇಂದ್ರದ ಸಬ್ಸಿಡಿ: ಸಚಿವ ಅನಂತಕುಮಾರ್
ಬೆಂಗಳೂರು, ಜ. 20: ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲು ಪ್ರೋತ್ಸಾಹಿಸುವ ದೃಷ್ಟಿಯಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕೇಂದ್ರ ಸರಕಾರದಿಂದ ಶೇ.30ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಭರವಸೆ ನೀಡಿದ್ದಾರೆ.
ಶನಿವಾರ ನಗರದ ಯಡಿಯೂರು ವಾರ್ಡ್‌ನ ಸೌತ್ ಎಂಡ್ ವೃತ್ತದ ಸಮೀಪ ಅಳವಡಿಸಲಾಗಿರುವ 5 ಟನ್ ಸಾಮರ್ಥ್ಯದ ಜೈವಿಕ ಅನಿಲ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರು ವಾರ್ಡ್‌ನಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಇಂತಹ ಯೋಜನೆಗಳಿಗೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಸಬ್ಸಿಡಿ ನೀಡುವ ಸಂಬಂಧ ಬಿಬಿಎಂಪಿ ಮೇಯರ್ ಅವರು ಪತ್ರ ಬರೆದರೆ ಪ್ರಧಾನಿ ಮೋದಿ ಅವರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೆ ನೆರವು ಒದಗಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿದ್ದ ಮೇಯರ್ ಸಂಪತ್ ರಾಜ್, ಪಾಲಿಕೆ ಸದಸ್ಯೆ ಪೂರ್ಣಿಮಾ ಹಾಗೂ ಆಡಳಿತ ಪಕ್ಷದ ಮಾಜಿ ನಾಯಕ ರಮೇಶ್ ಅವರ ಕಾರ್ಯ ಶ್ಲಾಘನೀಯ. ನನ್ನ ವಾರ್ಡ್‌ನಲ್ಲೂ ಜೈವಿಕ ಅನಿಲ ಘಟಕ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸುವೆ. ಎಲ್ಲ ವಾರ್ಡ್‌ಗಳಲ್ಲೂ ಈ ರೀತಿಯ ಯೋಜನೆ ಜಾರಿಗೊಳಿಸುವಂತೆ ಬಿಬಿಎಂಪಿ ಸದಸ್ಯರಿಗೆ ಮೇಯರ್ ಮನವಿ ಮಾಡಿಕೊಂಡರು.
ಎನ್.ಆರ್.ರಮೇಶ್ ಮಾತನಾಡಿ, ಜೈವಿಕ ಅನಿಲ ಘಟಕ ಸ್ಥಾಪಿಸಿರುವುದರಲ್ಲಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ವಾರ್ಡ್ ಎಂಬ ಹೆಗ್ಗಳಿಕೆ ಯಡಿಯೂರಿಗೆ ಸಂದಿದೆ. ಹಸಿತ್ಯಾಜ್ಯವನ್ನು ಮಿಥೇಲ್ ಅನಿಲವನ್ನಾಗಿ ಪರಿವರ್ತಿಸಿ ಅದರಿಂದ ವಿದ್ಯುತ್ ಉತ್ಪಾದಿಸಲಾಗುವುದು. ಪ್ರತಿನಿತ್ಯ ಉತ್ಪಾದನೆಯಾಗುವ 250 ಕಿ.ವ್ಯಾಟ್ ವಿದ್ಯುತನ್ನು ವಾರ್ಡ್‌ನಲ್ಲಿರುವ ಅಂಬರ-ಚುಂಬನ ಗಡಿಯಾರ ಗೋಪುರ, ನವತಾರೆ ಬ್ಯಾಡ್ಮಿಂಟನ್ ಅಕಾಡೆಮಿ, ಕಂಠೀರವ ಉದ್ಯಾನವನ, ಚೈತನ್ಯ ಉದ್ಯಾನವನ, ಚಂದವಳ್ಳಿಯ ತೋಟ, ಧನ್ವಂತರಿ ವನ, ಸಂಜೀವಿನಿವನ ಹಾಗೂ ಪಾದಚಾರಿ ಮಾರ್ಗದಲ್ಲಿ 1ಕಿ.ಮೀ.ಉದ್ದದವರೆಗೂ ಅಳವಡಿಸಿರುವ ಆಲಂಕಾರಿಕ ದೀಪ ಬೆಳಗಿಸಲು, 6 ಕೊಳವೆಬಾವಿ ಪಂಪ್‌ಸೆಟ್‌ಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ಜೈವಿಕ ಅನಿಲ ಘಟಕದಿಂದ ಪ್ರತಿ ತಿಂಗಳು ಖರ್ಚಾಗುತ್ತಿದ್ದ 6.5ಲಕ್ಷ ರೂ. ಉಳಿತಾಯವಾಗುತ್ತಿದೆ. ಇದರ ಜತೆಗೆ ಇಲ್ಲಿರುವ 17ಪಾಲಿಕೆ ಕಟ್ಟಡಗಳಿಗೆ ಸೌರ ವಿದ್ಯುತ್ ಪೂರೈಸುವ ಉದ್ದೇಶದಿಂದ ಧನ್ವಂತರಿ ಮತ್ತು ಸಂಜೀವಿನಿ ವನದ ನಡುವೆ ಇರುವ ವಾಯುವಿಹಾರ ಮಾರ್ಗದಲ್ಲಿ ಸೌರ ವಿದ್ಯುತ್ ಫಲಕ ಅಳವಡಿಸುವ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.