ಕ್ರಿಮಿನಲ್‌ಗಳಿಗೆ ಗುಂಡು ಹೊಡೆಯಿರಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್

Update: 2018-01-20 13:19 GMT

ಬೆಂಗಳೂರು, ಜ.20: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸುವಂತಹ ಕ್ರಿಮಿನಲ್ ಗಳಿಗೆ ಮುಲಾಜಿಲ್ಲದೇ ಗುಂಡು ಹೊಡೆಯಿರಿ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.

ಇತ್ತೀಚಿಗೆ ಕರ್ತವ್ಯ ನಿರತ ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣಗಳ ಸಂಬಂಧ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಠಾಣಾ ಆಸ್ತಿಯ ರಕ್ಷಣೆಗಾಗಿ ಬಲಪ್ರಯೋಗ ಮಾಡಲು ಪೊಲೀಸರಿಗೆ ಅವಕಾಶವಿದೆ. ಬಲ ಪ್ರಯೋಗವನ್ನು ಗುಂಡು ಹಾರಿಸುವ ಹಂತಕ್ಕೂ ಉಪಯೋಗಿಸಬಹುದು. ಪೊಲೀಸರಿಗೆ ಬಂದೂಕು ನೀಡಿರುವುದು ಆತ್ಮರಕ್ಷಣೆಗೆ. ಅದನ್ನು ಮುಲಾಜಿಲ್ಲದೆ ಬಳಸಿ ಎಂದರು.

ನಗರ ವ್ಯಾಪ್ತಿಯ ಕೊಡಿಗೇಹಳ್ಳಿ, ಜಗಜೀವನ್‌ರಾಮನಗರ, ಜೀವನ್‌ಭೀಮಾನಗರ, ಕಬ್ಬನ್‌ಪಾರ್ಕ್, ಬಾಣಸವಾಡಿ ಹಾಗೂ ಕಾಡುಗೊಂಡನಹಳ್ಳಿ ಠಾಣೆಗಳ ಗಸ್ತು ಸಿಬ್ಬಂದಿ ಮೇಲೆ ಇತ್ತೀಚೆಗೆ ಹಲ್ಲೆ ನಡೆದಿದೆ.

ಸಾರ್ವಜನಿಕರ ನೆಮ್ಮದಿ ಕಾಪಾಡಲು ಕಾವಲುಗಾರರಂತೆ ಕೆಲಸ ಮಾಡುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ, ಈ ರೀತಿಯ ಪ್ರಕರಣಗಳು ಮರುಕಳಿಸಿದರೆ ಮುಲಾಜಿಲ್ಲದೇ ಹಲ್ಲೆಕೋರರ ಮೇಲೆ ಗುಂಡು ಹಾರಿಸುವಂತೆ ಸಿಬ್ಬಂದಿಗೆ ತಿಳಿಸಿದ್ದೇನೆ ಎಂದು ಸುನೀಲ್ ಕುಮಾರ್ ನುಡಿದರು.

ಇತ್ತೀಚೆಗೆ ಜೀವನ್‌ಭೀಮಾ ನಗರದಲ್ಲಿ ಕೇರಳ ಮೂಲದ ಯುವಕರು ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದರು. ಅವರನ್ನು ಬಂಧಿಸಲು ಹೋದಾಗ ಪ್ರತಿರೋಧ ವ್ಯಕ್ತಪಡಿಸಿದ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಅಕ್ರಮವಾಗಿ ಚಾಕು ಇಟ್ಟುಕೊಂಡಿದ್ದಕ್ಕೆ ಶಸ್ತ್ರಾಸ್ತ್ರ ಕಾಯ್ದೆ, ಮಹಿಳಾ ಪಿಎಸ್ಸೈಗಳ ಸಮವಸ್ತ್ರ ಎಳೆದಾಡಿರುವುದು ಸೇರಿದಂತೆ ಹಲವಾರು ಸೆಕ್ಷನ್‌ಗಳಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದ ಅವರು, ಕಾನೂನು ಸುವ್ಯವಸ್ಥೆ ರಕ್ಷಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವ ಕ್ರಿಮಿನಲ್ ಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಮದ್ಯದಂಗಡಿ: ಕೆಲ ಯುವಕರ ಗುಂಪು ಬೆಳಗ್ಗೆವರೆಗೂ ರಸ್ತೆಬದಿಯಲ್ಲಿ ಮೋಜು ಮಾಡುತ್ತಿರುವುದು ಕಂಡು ಬಂದಿದೆ. ಅಷ್ಟು ಹೊತ್ತಿಗೆ ಅವರಿಗೆ ಮದ್ಯ ಹೇಗೆ ಸಿಗುತ್ತಿದೆ ಎಂಬ ಬಗ್ಗೆಯೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಅವಧಿ ಮೀರಿ ಮದ್ಯ ಪೂರೈಸುವ ಮದ್ಯದಂಗಡಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಆಯುಕ್ತರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News