×
Ad

ಜನರ ತೆರಿಗೆ ಹಣದಲ್ಲಿ ರಾಜ್ಯ ಪ್ರವಾಸ ಮಾಡುವವರಿಗೆ ಜನಪರ ಕಾಳಜಿ ಇದೆಯೇ : ದೇವೇಗೌಡ ಪ್ರಶ್ನೆ

Update: 2018-01-20 18:56 IST

ಬೆಂಗಳೂರು, ಜ. 20: ರಾಜ್ಯ ಸರಕಾರ ತನ್ನ ಸಾಧನೆ ಹೇಳಲು 650 ಕೋಟಿ ರೂ.ಖರ್ಚು ಮಾಡುತ್ತಿದ್ದು, ಇದು ಯಾರಪ್ಪನ ಮನೆಯ ದುಡ್ಡು. ಜನತೆಯ ತೆರಿಗೆ ಹಣದಲ್ಲಿ ಪ್ರವಾಸ ಮಾಡುವ ಇವರಿಗೆ ಜನಪರ ಕಾಳಜಿ ಇದೆಯೇ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.

ಶನಿವಾರ ಇಲ್ಲಿನ ಗಾಂಧಿ ನಗರದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹಾಡುಹಗಲೇ ಕೊಲೆ-ಸುಲಿಗೆ ನಡೆಯುತ್ತಿವೆ. ಪೊಲೀಸ್ ಅಧಿಕಾರಿಗಳು ಕೆಂಪಯ್ಯನ ಉಪಟಳದಿಂದ ಕೈಚೆಲ್ಲಿದ್ದು, ಜನತೆ ನೆಮ್ಮದಿ ಕಳೆದುಕೊಳ್ಳುವ ಸ್ಥಿತಿ ಸೃಷ್ಟಿಯಾಗಿದೆ ಎಂದು ಹೇಳಿದರು.

ನಾನು ಬಿಡುವುದಿಲ್ಲ: ರಾಜ್ಯದಲ್ಲಿ ಶೋಷಣೆ ರಹಿತ ವ್ಯವಸ್ಥೆ ಬರಬೇಕಿದೆ. ದೇವರು ನನಗೆ ಆ ಶಕ್ತಿ ಕೊಟ್ಟಿದ್ದಾನೆ. ನಾನು ಇವರನ್ನು ಸುಮ್ಮನೆ ಬಿಡುವುದಿಲ್ಲ. ರಾಜ್ಯದೆಲ್ಲೆಡೆ ಪ್ರವಾಸ ಕೈಗೊಳ್ಳುವೆ. ಜನತೆ ನನಗೆ ಸಹಕಾರ ನೀಡುವ ವಿಶ್ವಾಸವಿದೆ ಎಂದು ದೇವೇಗೌಡ ತಿಳಿಸಿದರು.

ನೈತಿಕತೆ ಇಲ್ಲ:  ರಾಜ್ಯವನ್ನು ಲೂಟಿ ಮಾಡುತ್ತಿರುವವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ ಇಲ್ಲ ಎಂದು ಟೀಕಿಸಿದ ಅವರು, ಬೆಂಗಳೂರು ಅಭಿವೃದ್ಧಿಗೆ ಮುಹೂರ್ತ ನಿಗದಿಪಡಿಸಿದ್ದು ಯಾರೆಂಬುದು ಜನರಿಗೆ ಗೊತ್ತಿದೆ. ಈಗಿನವರು ನಾವು ಎಲ್ಲವನ್ನು ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ, ಈ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದೇ ದೊಡ್ಡ ಸಾಧನೆ ಎಂದು ದೂರಿದರು.

ತಾನು ಸಿಎಂ ಆಗಿದ್ದು ಕೇವಲ ಒಂದೂವರೆ ವರ್ಷ ಮಾತ್ರ. ಆಗ ಬೆಂಗಳೂರನ್ನು ಲೂಟಿ ಮಾಡುತ್ತಿದ್ದವರ ಕೈಕಟ್ಟಿ ಹಾಕಿದ್ದೆ. ಆದರೆ, ಈಗ ಬೆಂಗಳೂರನ್ನು ಲೂಟಿ ಮಾಡುತ್ತಿದ್ದಾರೆಂದ ಅವರು, ಬಡವರ ಹೆಸರಲ್ಲಿ ಸರಕಾರ ಲೂಟಿ ಮಾಡುತ್ತಿವೆ. ಇನ್ನು 3 ತಿಂಗಳಲ್ಲಿ ನಮ್ಮ ಸರಕಾರ ಬಂದ ನಂತರ, ಬೆಂಗಳೂರನ್ನು ಲೂಟಿ ಹೊಡೆದವರ ಜಾತಕ ಬಯಲು ಮಾಡುತ್ತೀವಿ ಎಂದು ಎಚ್ಚರಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಗೆ ಗಾಂಧಿನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನಾಗಿ ನಾರಾಯಣಸ್ವಾಮಿ ಕಣಕ್ಕಿಳಿಯಲಿದ್ದು, ಅವರು ಗೆಲ್ಲಬೇಕು. ಆ ಮೂಲಕ ಈ ಕ್ಷೇತ್ರವನ್ನು ಲೂಟಿ ಮಾಡುವವರಿಗೆ ಬುದ್ಧಿ ಕಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಭ್ಯರ್ಥಿ ನಾರಾಯಣಸ್ವಾಮಿ, ಮುಖಂಡರಾದ ಶಿವರಾಮೇಗೌಡ ಸೇರಿದಂತೆ ಸಮಾವೇಶದಲ್ಲಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

‘ಇಬ್ಬರು ಮಹಾನುಭಾವರು ಪಕ್ಷವನ್ನು ಬಿಟ್ಟು ಓಡಿಹೋಗಿದ್ದಾರೆ. ಇದರಿಂದ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ. ನಮ್ಮ ಪಕ್ಷಕ್ಕೆ ಯಾವುದೇ ನಷ್ಟವೂ ಇಲ್ಲ. ರಾಯಚೂರಿನ ಕಾರ್ಯಕರ್ತರು ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ’
-ಎಚ್.ಡಿ.ದೇವೇಗೌಡ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News