ಸಮರ್ಪಕ ಉದ್ಯೋಗಾವಕಾಶಗಳು ಕಲ್ಪಿಸುವಲ್ಲಿ ಸರಕಾರಗಳು ವಿಫಲ: ಕೆ.ಪಿ.ಸುರೇಶ್
ಬೆಂಗಳೂರು, ಜ.20: ಸಮರ್ಪಕ ಉದ್ಯೋಗಾವಕಾಶಗಳು ಕಲ್ಪಿಸುವಲ್ಲಿ ವಿಫಲವಾಗಿರುವ ಸರಕಾರಗಳು ಸ್ಕಿಲ್ ಇಂಡಿಯಾ ಹೆಸರಿನಲ್ಲಿ ತರಬೇತಿ ಕೊಡುವ ಧಾವಂತದಲ್ಲಿವೆ. ಸರಿಯಾದ ತರಬೇತುದಾರರಿಲ್ಲದಿದ್ದರೂ 24 ಲಕ್ಷ ಜನರಿಗೆ ತರಬೇತಿ ಕೊಟ್ಟಿದ್ದೇವೆ ಎಂದು ಕೇಂದ್ರ ಸರಕಾರದ ಅಂಕಿ ಅಂಶ ಮಂಡಿಸುತ್ತಿರುವುದು ವಿಪರ್ಯಾಸ ಎಂದು ಅಂಕಣಕಾರ ಕೆ.ಪಿ.ಸುರೇಶ್ ಅಭಿಪ್ರಾಯಿಸಿದ್ದಾರೆ.
ಶನಿವಾರ ನಗರದ ಗಾಂಧಿಭವನದಲ್ಲಿ ಉದ್ಯೋಗಕ್ಕಾಗಿ ಯುವ ಜನರು ವೇದಿಕೆ ಏರ್ಪಡಿಸಿದ್ದ ಕೃಷಿ ಬಿಕ್ಕಟ್ಟು, ನಿರುದ್ಯೋಗ ಮತ್ತು ಚುನಾವಣೆ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾಗಳು ಆರಂಭ ಮಾಡಿರುವ ತರಬೇತಿಗಳ ಮೂಲಕ ಕೇವಲ ಶೇ.8 ರಷ್ಟು ಜನರಿಗಷ್ಟೇ ತಾತ್ಕಾಲಿಕ ಉದ್ಯೋಗ ನೀಡಿದ್ದಾರೆ ಎಂದರು.
ಮನೆಯಲ್ಲಿ ಎರಡು ಹಸುಗಳನ್ನು ಸಾಕಿಕೊಂಡು, ಎರಡು ಎಕರೆ ಭೂಮಿ ಹೊಂದಿರುವ ರೈತ ಕುಟುಂಬಗಳನ್ನು ಅತ್ಯಂತ ಸುಲಭದಲ್ಲಿ ಸುಸ್ಥಿರ ಜೀವನಕ್ಕೆ ಹೊಂದಿಕೊಳ್ಳುವಂತೆ ಮಾಡಬಹುದು. ಜೊತೆಗೆ, ಉತ್ತಮ ಉದ್ಯೋಗದೊಂದಿಗೆ ಗೌರವಯುತ ಜೀವನ ನಡೆಸುವಂತೆ ಮಾಡಬಹುದು. ಹಾಗೂ ಕುರಿ ಸಾಕಾಣಿಕೆ ಒಂದು ಲಾಭದಾಯಕ ಉದ್ಯಮ. ಅದನ್ನು ಸರಕಾರ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.
ಗ್ರಾಮ ಮಟ್ಟದಲ್ಲಿ ಬೀಜ ಬ್ಯಾಂಕ್ ಸ್ಥಾಪಿಸಬೇಕು. ಅದು ಸುಸ್ಥಿರ ಕೃಷಿ ಸಂಪನ್ಮೂಲ ಕೇಂದ್ರವಾಗಿ ಮಾಡಬೇಕು. ಅದಕ್ಕೆ ಮಹಿಳಾ ಸ್ವ ಸಹಾಯ ಸಂಘಗಳ ಉಸ್ತುವಾರಿ ನೀಡಬೇಕು. ಗ್ರಾಮಕ್ಕೆ ಬರುವ ಎಲ್ಲಾ ಯೋಜನೆಗಳನ್ನು ಈ ಮೂಲಕ ಜಾರಿಗೊಳಿಸಬೇಕು ಎಂದ ಅವರು, ಸ್ಥಳೀಯ ಸಂಪನ್ಮೂಲ ಆಧಾರಿತವಾಗಿ ಉದ್ಯೋಗ ನಿರ್ಮಾಣ ಮಾಡಿದರೆ ಶೇ.40 ರಷ್ಟು ಉದ್ಯೋಗಾವಕಾಶಗಳು ನಿರ್ಮಾಣವಾಗುತ್ತದೆ ಎಂದು ನುಡಿದರು.
ಇಂಧೋರ್‌ನ ನೀತ್ ತಿವಾರಿ ಮಾತನಾಡಿ, ಕೇರಳದಲ್ಲಿ ಕುಟುಂಬಶ್ರೀ ಯೋಜನೆ ಅತ್ಯಂತ ಯಶಸ್ವಿಯಾಗಿದ್ದು, ಅದನ್ನು ಬೇರೆ ರಾಜ್ಯಗಳು ಮಾದರಿಯಾಗಿ ಪಡೆಯಬೇಕು. ಮಹಿಳೆಯರ ನೇತೃತ್ವದಲ್ಲಿ ಭೂಮಿಯನ್ನು ಗೇಣಿ ಪಡೆದು ಸಾಮೂಹಿಕವಾಗಿ ವೈಜ್ಞಾನಿಕ ಕೃಷಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.
ಕೇರಳದ 14 ಜಿಲ್ಲೆಗಳಲ್ಲಿ 2 ಲಕ್ಷ ಮಹಿಳೆಯರ ನೇತೃತ್ವದಲ್ಲಿ ಇದು ನಡೆಯುತ್ತಿದೆ. ಇದಕ್ಕೆ ಗ್ರಾಮಪಂಚಾಯತ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಬೆಂಬಲ ನೀಡಿದ್ದಲ್ಲದೇ ಎಡಪಕ್ಷಗಳ ನೇತೃತ್ವದ ಸರಕಾರ ಸಂಪೂರ್ಣ ಬೆಂಬಲ ನೀಡಿದೆ. ಈ ಯೋಜನೆ ಜಾರಿಯಿಂದ ಮಹಿಳೆಯರ ಸಶಕ್ತೀಕರಣ ಸಾಧ್ಯವಾಗಿದೆ. ಗ್ರಾಮಗಳಲ್ಲಿ ಜಮೀನ್ದಾರರ ಉಪಟಳ ನಿಂತಿದೆ ಮತ್ತು ದಲಿತರಿಗೂ ಭೂಮಿ ಸಿಗಲು ಕಾರಣವಾಗಿದೆ ಹಾಗೂ ಬಹಳಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಸ್ವಾತಿ, ಅಖಿಲೇಶ್, ಮಹೇಶ್, ಪ್ರಾಧ್ಯಾಪಕ ಡಾ.ಬಿ.ಸಿ ಬಸವರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೃಷಿ ಬಿಕ್ಕಟ್ಟು, ನಿರುದ್ಯೋಗ, ಭ್ರಷ್ಟಾಚಾರ, ಶಿಕ್ಷಣ ಮತ್ತು ಆರೋಗ್ಯದ ವ್ಯಾಪಾರೀಕರಣವಿಂದು ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಾಗಿವೆ. ಇವುಗಳ ವಿರುದ್ಧ ಚುನಾವಣೆಯ ಸಂದರ್ಭದಲ್ಲಿ ನಿರ್ಣಾಯಕ ಹೋರಾಟ ನಡೆಸಬೇಕಿದೆ.
-ಎಸ್.ಆರ್. ಹಿರೇಮಠ್ ಸಾಮಾಜಿಕ ಹೋರಾಟಗಾರ