ತ್ರಿವಳಿ ತಲಾಖ್ ಮಸೂದೆ ಹಿಂಪಡೆಯಲು ಮುಸ್ಲಿಮ್ ಲೀಗ್ ಒತ್ತಾಯ
ಬೆಂಗಳೂರು, ಜ.20: ತ್ರಿವಳಿ ತಲಾಖ್ ಮಸೂದೆಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಆಗ್ರಹಿಸಿದೆ.
ಶನಿವಾರ ನಗರದ ಪುರಭವನದ ಎದುರು ತ್ರಿಬಲ್ ತಲಾಖ್ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಸದಸ್ಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆ ಬೆಂಗಳೂರು ಜಿಲ್ಲಾಧ್ಯಕ್ಷ ಡಾ.ಮುಹಮ್ಮದ್ ಫಾರೂಕ್, ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮ್ ಸಮುದಾಯವನ್ನೇ ಗುರಿಯಾಗಿಸಿಕೊಂಡು ದಬ್ಬಾಳಿಕೆ ನಡೆಸಲಾಗುತ್ತಿದೆ.
ಗೋ ಸಂರಕ್ಷಣೆ ಹೆಸರಿನಲ್ಲಿ ಹಾಗೂ ಕ್ಷುಲ್ಲಕ ಕಾಣರಗಳಿಗಾಗಿ ಮುಸ್ಲಿಮ್, ದಲಿತ ಸೇರಿ ಬಹುಜನರ ಮೇಲೆ ಹಲ್ಲೆಗಳು ಹೆಚ್ಚಾಗಿವೆ.ಆದರೂ, ಈ ಬಗ್ಗೆ ಕೇಂದ್ರ ಸರಕಾರ ಯಾವುದೇಕಠಿಣ ಕ್ರಮ ಕೈಗೊಂಡಿಲ್ಲ. ಇನ್ನು ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ, ಜಾತ್ಯತೀತ ತತ್ವಗಳನ್ನು ದಮನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ಮುಸ್ಲಿಮ್ ಜನಾಂಗದ ಸಾಂಸ್ಕೃತಿಕ ಗುರುತನ್ನು ನಾಶ ಮಾಡಲು ಮುಂದಾಗಿದೆ. ಅನಗತ್ಯವಾದ ನೀತಿಗಳನ್ನು ಸಮುದಾಯದ ಮೇಲೆ ಹೇರಿಕೆ ಮಾಡಲಾಗುತ್ತಿದೆ. ಮುಸ್ಲಿಮ್ ಸಮುದಾಯದ ಭಾವನಾತ್ಮಕ ವಿಚಾರಗಳ ಮೇಲೆ ದಾಳಿ ಮಾಡಲು ಮುಂದಾಗಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ಗೆ ಮುಸ್ಲಿಮ್ ಮಹಿಳೆಯೊಬ್ಬರು ತಲಾಖ್ ಎಂಬ ಮುಸ್ಲಿಮ್ ಶರಿಅತ್ ಕಾನೂನಿನ ವಿರುದ್ಧ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ಕೇಂದ್ರದ ಅಫಿದವಿತ್ ಕೇಳಿ ಆದೇಶ ನೀಡಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೇಂದ್ರ ಸರಕಾರ ಮುಸ್ಲಿಮ್ ಶರೀಅತ್ ಕಾನೂನನ್ನು ಮೊಟಕುಗೊಳಿಸಿ ತ್ರಿಬಲ್ ತಲಾಖ್ ವಿರುದ್ಧ ಹಾಗೂ ಏಕ ರೂಪದ ನಾಗರಿಕ ಸಂಹಿತೆ ಜಾರಿ ಮಾಡಲು ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀರ್ ಮುನೀರ್ ಅಹ್ಮದ್, ಕಾರ್ಯದರ್ಶಿಗಳಾದ ಅಬ್ದುಲ್ ಖಾದೀರ್, ಅಬ್ದುಲ್ ಲತೀಫ್, ಶೇಕ್ ನಸೀರ್ ಅಹ್ಮದ್ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.