×
Ad

ನದಿ ನೀರು ಸಮುದ್ರಕ್ಕೆ ಸೇರುವುದೇ ಪರಿಸರ ನ್ಯಾಯ: ಕೃಪಾಕರ ಸೇನಾನಿ

Update: 2018-01-20 20:37 IST

ಬೆಂಗಳೂರು, ಜ.20: ನದಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ ಎಂದು ರಾಜಕೀಯದವರು ಮಾತನಾಡಲಿ. ಆದರೆ, ರೈತ ಸಂಘಟನೆಯವರು ಮಾತನಾಡುತ್ತಿರುವುದು ಸರಿಯಲ್ಲವೆಂದು ಪರಿಸರ ವಿಜ್ಞಾನಿಗಳಾದ ಕೃಪಾಕರ ಸೇನಾನಿ ಅಭಿಪ್ರಾಯ ಪಟ್ಟರು.

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸಮುದ್ರಕ್ಕೆ ವ್ಯರ್ಥವಾಗಿ ಸೇರುವ ನೇತ್ರಾವತಿ ನದಿ ನೀರನ್ನು ಬಯಲು ಸೀಮೆಗಳಿಗೆ ಹರಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ರಾಜಕೀಯ ಪ್ರೇರಿತವಾದ ಮಾತುಗಳಾಗಬೇಕೆ ಹೊರತು, ಪರಿಸರದಲ್ಲಿ ತಾನೊಂದಾಗಿ ಬದುಕುತ್ತಿರುವ ರೈತರು ಆಡುವ ಮಾತಾಗಬಾರದು ಎಂದು ಆಶಿಸಿದರು.

ನದಿಗಳು ಹರಿಯುವ ಮಾರ್ಗಗಳಲ್ಲಿ ಮನುಷ್ಯನು ಒಳಗೊಂಡಂತೆ ಸಾವಿರಾರು ಜೀವ ಸಂಕುಲಗಳು ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತವೆ. ಹಾಗೂ ನದಿ ನೀರು ಸಮುದ್ರಕ್ಕೆ ಸೇರುವ ಹಿನ್ನೀರಿನಲ್ಲಿ ಮಾತ್ರವೇ ಮೀನುಗಳು ವಂಶಾಭಿವೃದ್ಧಿ ನಡೆಸಲು ಸಾಧ್ಯ. ಇದೊಂದು ಸಾವಿರಾರು ವರ್ಷಗಳಿಂದ ಜೀವ ಸಂಕುಲಗಳ ಸರಪಣಿ. ಇದನ್ನು ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಕ್ಷಣಾರ್ಧದಲ್ಲಿ ನಾಶ ಮಾಡುವುದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು ಎಂದು ಅವರು ವಿನಂತಿಸಿದರು.

ಈಶಾನ್ಯ ಭಾರತದಲ್ಲಿ ಹುಲಿ ಸಂರಕ್ಷಣಾ ಪ್ರದೇಶವೆಂದು ಗುರುತಿಸಿ, ಅಲ್ಲಿ ವಾಸಿಸುತ್ತಿದ್ದ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಯಿತು. ಆದರೆ, ಮೂರು ತಿಂಗಳಲ್ಲಿ ಗಣಿಗಾರಿಕೆಗೆಂದು ಅದಾನಿ ಕಂಪನಿಗೆ ಆ ಪ್ರದೇಶವನ್ನು ಗುತ್ತಿಗೆಗೆ ಕೊಡಲಾಯಿತು. ಹೀಗೆ ಜನಪ್ರತಿನಿಧಿಗಳೇ ಪರಿಸರ ಹಾಗೂ ಜನವಿರೋಧಿಯಾದರೆ ಪರಿಸರದ ಸಮತೋಲನ ಕಾಪಾಡುವುದಾದರು ಹೇಗೆ ಎಂದು ಅವರು ಪ್ರಶ್ನಿಸಿದರು.

ಪ್ರತಿ ಪ್ರಾಣಿಯೂ ಅಮೂಲ್ಯ: ಜೀವ ಸಂಕುಲದ ಸರಪಣಿಯಲ್ಲಿ ಪ್ರತಿ ಜೀವಿಯ ಬದುಕು ಅಗತ್ಯವಿರುತ್ತದೆ. ಯಾವುದಾದರು ಒಂದು ಜೀವಿಗೆ ಹಾನಿಯಾದರೂ, ಇಲ್ಲವೆ ಕಣ್ಮರೆಯಾದರೂ ಇಡೀ ಜೀವ ಸಂಕುಲದ ಬದುಕು ಅಸಹಜವಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ಈ ಭೂಮಿಗೆ ಮನುಷ್ಯನು ಎಷ್ಟು ಮುಖ್ಯವೋ, ಸಣ್ಣ ಜೀವಿಯು ಅಷ್ಟೆ ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.

ಓದಿನ ಅಗತ್ಯವಿದೆ: ಛಾಯಾಚಿತ್ರ ಇಲ್ಲವೆ ಪ್ರಾಣಿ-ಪಕ್ಷಿಗಳ ಕುರಿತು ಕೇವಲ ಆಸಕ್ತಿ ಇದ್ದ ಮಾತ್ರಕ್ಕೆ ಉತ್ತಮ ಛಾಯಾ ಚಿತ್ರಗಾರನಾಗಲಿ, ಪರಿಸರ ಕುರಿತು ಅರಿವನ್ನಾಗಲಿ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ಸುತ್ತಮುತ್ತಲಿನ ಪರಿಸರ, ಭೂಮಿ ಸೃಷ್ಟಿ, ಇಲ್ಲಿನ ವಾತಾವರಣದ ವೈವಿಧ್ಯತೆ ಸೇರಿದಂತೆ ಭೂಮಿಯ ಪ್ರತಿಯೊಂದು ಚಲನವಲನಗಳನ್ನು ತಿಳಿಯಲು ಮುಂದಾಗಬೇಕು. ಇದಕ್ಕಾಗಿ ಛಾಯಾಚಿತ್ರಗಾರನಿಗೆ ಕ್ಯಾಮೆರಾದ ಜೊತೆಗೆ ಓದಿನ ಹಸಿವಿರಬೇಕು ಎಂದು ಅವರು ಹೇಳಿದರು.

ಕಾಡು ಕುರುಬ ಹಾಗೂ ಜೇನು ಕುರುಬರ ಪ್ರೇರಣೆಯಿಂದಾಗಿ ಕೃಪಾಕರ ಸೇನಾನಿಯಾಗಿರುವ ನಾವಿಬ್ಬರು ಉತ್ತಮ ಛಾಯಾಗ್ರಾಹಕರಾಗಿ, ಕಾಡು ಪ್ರಾಣಿಗಳ ಸಂಶೋಧಕರಾಗಿ ಜಗತ್ತಿನಲ್ಲಿ ಹೆಸರು ಹಾಗೂ ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದೇವೆ. ಕಾಡು, ಕಾಡು ಪ್ರಾಣಿ-ಪಕ್ಷಿಗಳ ಕುರಿತು ಅವರಿಂದ ಕಲಿತ ಶಿಕ್ಷಣ ಜಗತ್ತಿನ ಯಾವುದೇ ವಿಶ್ವವಿದ್ಯಾಲಯದಿಂದ ಕಲಿಯಲು ಸಾಧ್ಯವಿಲ್ಲ. ಹೀಗಾಗಿ ಇಂತಹ ಬುಡಕಟ್ಟು ಜನರ ಜ್ಞಾನ ಪರಿಸರ ಕಾಳಜಿಯಷ್ಟೆ ಅಮೂಲ್ಯವಾದುದ್ದೆಂದು ಅವರು ಹೇಳಿದರು.

ದಕ್ಷಿಣ ಭಾರತದಲ್ಲಿ ಸಂಭವಿಸುವ ಕಾಡ್ಗಿಚ್ಚುಗಳು ಶೇ.100ರಷ್ಟು ಮಾನವ ನಿರ್ಮಿತವೇ ಆಗಿರುತ್ತದೆ. ನಾನಾ ಕಾರಣಗಳಿಗಾಗಿ ಬೆಂಕಿ ಹಾಕುವ ಮೂಲಕ ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುತ್ತಾರೆ. ಬಂಡಿಪುರ ಅರಣ್ಯದಲ್ಲಿ ಬೇಸಿಗೆ ಕಾಲವು ಒಳಗೊಂಡಂತೆ ವರ್ಷ ಪೂರ್ತಿ ಹರಿಯುವ 5 ಝರಿಗಳು ಇದ್ದವು. ಕಳೆದ 10ವರ್ಷಗಳಲ್ಲಿ ಅವು ಕಾಣೆಯಾಗಿವೆ. ಇದರಿಂದ ಪ್ರಾಣಿ ಪಕ್ಷಿಗಳಿಗೆ ತೀರ ಸಂಕಷ್ಟವಾಗಿದೆ. ಕಾಡುಗಳಲ್ಲಿ ಅಲ್ಲಲ್ಲಿ ಕೃತಕವಾಗಿ ಕುಂಟೆಗಳನ್ನು ಮಾಡಿ ಅದಕ್ಕೆ ಟ್ಯಾಂಕರ್‌ಗಳ ಮೂಲಕ ನೀರನ್ನು ಬಿಡಲಾಗುತ್ತಿದೆ. ಇದರಿಂದ ಕಾಡುಪ್ರಾಣಿಗಳಿಗೆ ಹಕ್ಕಿಗಳಿಗೆ ನೀರು ಒದಗಿಸುತ್ತೇವೆ ಎಂಬುದು ಹಾಸ್ಯಾಸ್ಪದ. ನೈಸರ್ಗಿಕ ಸಂಪನ್ಮೂಲಗಳಿಂದ ಮಾತ್ರ ಜೀವ ಸಂಕುಲಗಳನ್ನು ಉಳಿಸಲು ಸಾಧ್ಯವೇ ಹೊರತು, ಮಾನವ ನಿರ್ಮಿಸುವ ಯಾವುದೇ ಸಂಪನ್ಮೂಲಗಳಿಂದ ಸಾಧ್ಯವಿಲ್ಲ.

-ಕೃಪಾಕರ ಸೇನಾನಿ ಪರಿಸರ ಛಾಯಾಗ್ರಾಹಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News