ಗಾಂಧಿ ಸ್ಮಾರಕ ನಿಧಿಯಲ್ಲಿ ಅವ್ಯವಹಾರ: ಈ ಬಸವರಾಜು ಆರೋಪ
ಬೆಂಗಳೂರು, ಜ.20: ಗಾಂಧಿ ಸ್ಮಾರಕ ನಿಧಿ ಟ್ರಸ್ಟ್‌ನಲ್ಲಿ ಗೌರವ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ನನ್ನನ್ನು ಯಾವುದೇ ಆರೋಪಗಳಿಲ್ಲದಿದ್ದರೂ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಈ ಬಸವರಾಜು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ ಸ್ಮಾರಕ ನಿಧಿಯಲ್ಲಿ ಸರ್ವಾಧಿಕಾರಿ ಪ್ರವೃತ್ತಿ ಬೆಳೆಯುತ್ತಿದ್ದು, ಅವ್ಯವಹಾರಗಳು ನಡೆಯುತ್ತಿವೆ. ಸಂಸ್ಥೆಯ ನೀತಿ-ನಿಯಮಗಳ ಉಲ್ಲಂಘನೆ ಮಾಡುತ್ತಾ, ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ನಿಷ್ಠಾವಂತರಿಗೆ ಕಿರುಕುಳ ಹಾಗೂ ಹೊರದಬ್ಬುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಆರೋಪವಿಲ್ಲದಿದ್ದರೂ ಅನಗತ್ಯವಾಗಿ ನನ್ನನ್ನು ಕೆಲಸದಿಂದ ಬಿಡುಗಡೆ ಮಾಡಿರುವ ಪತ್ರ ನೀಡಿದ್ದಾರೆ ಎಂದು ತಿಳಿಸಿದರು.
ಸ್ಮಾರಕ ನಿಧಿಯಲ್ಲಿ ಕಳೆದ 6 ವರ್ಷಗಳ ಹಿಂದೆ ಕೋದಂಡರಾಮು ಎಂಬುವವರು ಗೌರವ ಕಾರ್ಯದರ್ಶಿಯಾಗಿದ್ದರು. ಈ ವೇಳೆ ಜಿ.ಬಿ.ಶಿವರಾಜು ಎಂಬುವವರು ಸಹ ಕಾರ್ಯದರ್ಶಿಯಾಗಿ ನೇಮಕವಾದ ಮೇಲೆ ಕೋದಂಡರಾಮುಗೆ ಅವಧಿ ಮುಗಿದಿದೆ ಎಂದು ಪತ್ರ ಕೊಡಿಸಿದ್ದಾರೆ. ಅಲ್ಲದೆ, ಶಿವರಾಜು ಗೌರವ ಕಾರ್ಯದರ್ಶಿಯಾದರು. ಅನಂತರ ಲ.ನರಸಿಂಹಯ್ಯ ನನಗೆ ಪ್ರತಿಸ್ಪರ್ಧಿ ಆಗಬಾರದು ಎಂದು ಬಿಡುಗಡೆ ಮಾಡಿಸಿದರು. ನಂತರ ಹುಡೇದ್‌ಗೆ ದಿಲ್ಲಿಯಿಂದ ಉತ್ತಮ ಕಾರ್ಯಕರ್ತ ಎಂದು ಪತ್ರ ಬಂದ ಕೂಡಲೇ ನಿಮ್ಮ ಅಗತ್ಯವಿಲ್ಲ ಎಂದು ಸೇವೆಯಿಂದ ಕಳಿಸಿದರು. ಹಾಗೂ ಇದೇ ರೀತಿ ಹತ್ತಾರು ಜನರನ್ನು ಸೇವೆಯಿಂದ ತೆಗೆದು ಹಾಕಿ ಸರ್ವಾಧಿಕಾರಿಯಾಗಲು ಮುಂದಾಗಿದ್ದಾರೆ ಎಂದರು.
ಸ್ಮಾರಕ ನಿಧಿ ಸಭೆಗೆ ಹೋಗಲು ಸಾವಿರಾರು ರೂ.ಗಳನ್ನು ಖರ್ಚು ಮಾಡಿ ವಿಮಾನ ಪ್ರಯಾಣ ಮಾಡುತ್ತಾರೆ ಹಾಗೂ ಸರಕಾರ ಮತ್ತು ಇನ್ನಿತರ ಕಡೆಗಳಿಂದ ಲಕ್ಷಾಂತರ ರೂ.ಗಳು ಹಣ ಸಂಗ್ರಹ ಮಾಡಿ ದುಂದು ವೆಚ್ಚ ಮಾಡುತ್ತಿದ್ದಾರೆ. ಹೊ.ಶ್ರೀನಿವಾಸಯ್ಯ ಮರಣದ ನಂತರ ಸ್ಮಾರಕ ನಿಧಿ ಅಧ್ಯಕ್ಷರಾಗಿರುವ ವೂಡೇ ಪಿ.ಕೃಷ್ಣ ಐಶಾರಾಮಿ ಜೀವನ ನಡೆಸಲು ಮುಂದಾಗಿದ್ದಾರೆ. ಇದಕ್ಕೆಲ್ಲ ಜಿ.ಬಿ.ಶಿವರಾಜು ಬೆಂಬಲ ನೀಡುತ್ತಾ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ಕೋಟಿ ಅನುದಾನವಿದ್ದರೂ ಗಾಂಧಿ ಸ್ಮಾರಕ ನಿಧಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸರಿಯಾದ ಕನಿಷ್ಟ ಕೂಲಿ ನೀಡುತ್ತಿಲ್ಲ. 20 ವರ್ಷಗಳಿಂದ ದುಡಿಯುತ್ತಿರುವವರಿಗೆ ಕೇವಲ 17 ಸಾವಿರ ಮಾತ್ರ ಸಂಬಳ ಸಿಗುತ್ತಿದೆ. ಇಲ್ಲಿನ ನೌಕರರಿಗೆ ಕನಿಷ್ಟ ಸೇವಾ ಭದ್ರತೆಯಿಲ್ಲ. ನಿಮಗೆ ಇಷ್ಟವಾದರೆ ಇರಿ. ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂದು ಬೆದರಿಸುತ್ತಾರೆ. ಒಟ್ಟಾರೆಯಾಗಿ ಗುಲಾಮ ಸಂಸ್ಕೃತಿಯನ್ನು ಜಿ.ಬಿ.ಶಿವರಾಜು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.