ಧರ್ಮದಲ್ಲಿ ರಾಜಕಾರಣ ಬೆರೆಸಲು ಅವಕಾಶ ನೀಡಬಾರದು: ಸಿದ್ದರಾಮಯ್ಯ

Update: 2018-01-20 16:13 GMT

ಬೆಂಗಳೂರು,ಜ.20: ರಾಜಕಾರಣದಲ್ಲಿ ಧರ್ಮವಿರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣವನ್ನು ಯಾರೂ ಬೆರೆಸಬಾರದು. ರಾಜಕೀಯ ಲಾಭಕ್ಕಾಗಿ ಜನರನ್ನು ದಾರಿ ತಪ್ಪಿಸುವವರು ರಾಷ್ಟ್ರಕವಿ ಕುವೆಂಪು ನಾಡಗೀತೆಯಲ್ಲಿ ನೀಡಿರುವ ಸಂದೇಶವನ್ನು ಅರ್ಥ ಮಾಡಿಕೊಂಡರೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ರಾಜ್ಯ ಹಜ್ ಸಮಿತಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಹಜ್‌ ಯಾತ್ರೆಗೆ ತೆರಳುವವರನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕುವೆಂಪು ನಾಡಗೀತೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿ, ಸಿಖ್ಖ, ಜೈನರ ಉದ್ಯಾನ ಎಂದು ಕನ್ನಡ ನಾಡನ್ನು ವರ್ಣಿಸಿದ್ದಾರೆ. ಈ ಸಂದೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವವರು ಮನುಷ್ಯರಾಗಲು ನಾಲಾಯಕ್ ಎಂದು ಅವರು ತಿಳಿಸಿದರು.

ಪ್ರತಿಯೊಂದು ಧರ್ಮದಲ್ಲೂ ದಯೆ, ಕರುಣೆ ಇರುತ್ತದೆ. ಬಸವಣ್ಣ ದಯೆಯೇ ಧರ್ಮದ ಮೂಲವಯ್ಯ, ದಯೇ ಇಲ್ಲದ ಧರ್ಮ ಯಾವುದಯ್ಯ ಎಂದಿದ್ದರು. ಯಾವ ಧರ್ಮವೂ ಮನುಷ್ಯ, ಮನುಷ್ಯರ ನಡುವೆ ದ್ವೇಷದ ಭಾವನೆ ಬಿತ್ತುವುದಿಲ್ಲ. ಪ್ರೀತಿಸುವುದನ್ನೆ ಕಲಿಸುತ್ತದೆ. ಪ್ರೀತಿ ಇರುವ ಕಡೆ ದ್ವೇಷ ಹುಟ್ಟು ಹಾಕುವ ಕೆಲಸವನ್ನು ಯಾರೂ ಮಾಡಬಾರದು. ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸೌರ್ಹಾದತೆಯಿಂದ ಎಲ್ಲರೂ ಬದುಕಬೇಕು. ಆ ಮೂಲಕ ನಮ್ಮ ಕನ್ನಡ ನಾಡು ಅಭಿವೃದ್ಧಿ, ಸಮೃದ್ಧಿಯಾಗಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಸಕ್ತ ಸಾಲಿನಲ್ಲಿ ರಾಜ್ಯದಿಂದ 6624 ಮಂದಿ ಹಜ್ ಯಾತ್ರೆಗೆ ತೆರಳುತ್ತಿದ್ದಾರೆ. ಒಟ್ಟು 18 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸತತ ಮೂರು ಬಾರಿ ಅರ್ಜಿ ಸಲ್ಲಿಸಿದರೂ ಆಯ್ಕೆಯಾಗದೆ ಇದ್ದವರು ನಾಲ್ಕನೆ ಬಾರಿ ನೇರವಾಗಿ ಆಯ್ಕೆಯಾಗುತ್ತಿದ್ದರು. ಆದರೆ, ಕೇಂದ್ರ ಸರಕಾರ ನೂತನ ಹಜ್ ನೀತಿಯಲ್ಲಿ ಆ ಮೀಸಲಾತಿ ವರ್ಗವನ್ನು ತೆಗೆದು ಹಾಕಿ, ಹೊಸದಾಗಿ 45 ವರ್ಷ ಮೇಲ್ಪಟ್ಟ ಮಹಿಳೆಯರು ಸಂಗಾತಿ ಇಲ್ಲದೆ ಯಾತ್ರೆಗೆ ತೆರಳುವ ಅವಕಾಶವನ್ನು ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಸತತ ನಾಲ್ಕನೆ ಬಾರಿ ಅರ್ಜಿ ಸಲ್ಲಿಸಿ, ಆಯ್ಕೆಯ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್.ರೋಷನ್‌ಬೇಗ್, ಹಜ್‌ ಯಾತ್ರೆಯ ಸಬ್ಸಿಡಿಯನ್ನು ಕೇಂದ್ರ ಸರಕಾರ ರದ್ದು ಮಾಡಿದ ವಿಚಾರ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಯಿತು. ಕೇಂದ್ರ ಸರಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ಹಜ್‌ ಯಾತ್ರೆಗಾಗಿ ನಮಗೆ ಯಾರ ನೆರವು ಅಗತ್ಯವಿಲ್ಲ ಎಂದರು.

ರಾಜ್ಯಸಭಾ ಸದಸ್ಯ ಡಾ.ಕೆ.ರಹ್ಮಾನ್‌ಖಾನ್ ಮಾತನಾಡಿ, ಹಜ್ ಸಬ್ಸಿಡಿಯನ್ನು ರದ್ದುಪಡಿಸಿದ್ದು ತನ್ನ ಸಾಧನೆ ಎಂಬ ರೀತಿಯಲ್ಲಿ ಕೇಂದ್ರ ಸರಕಾರ ವರ್ತಿಸುತ್ತಿದೆ. ಆದರೆ, ಸುಪ್ರೀಂಕೋರ್ಟ್ ಆದೇಶ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೂ, ಅನಗತ್ಯವಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಅದೇ ರೀತಿ, 45 ವರ್ಷ ಮೇಲ್ಪಟ್ಟ ಮಹಿಳೆಯರು ಸಂಗಾತಿಯಿಲ್ಲದೆ ಹಜ್‌ ಯಾತ್ರೆ ಕೈಗೊಳ್ಳಬಹುದು ಎಂದು ಸೌದಿ ಅರೇಬಿಯಾ ಸರಕಾರ ತೀರ್ಮಾನ ಮಾಡಿ ಎಲ್ಲ ದೇಶಗಳಿಗೂ ಮಾಹಿತಿ ನೀಡಿದೆ. ಆದರೆ, ನಮ್ಮ ಪ್ರಧಾನಿ ತಮ್ಮ ಮನ್ ಕೀ ಬಾತ್ ನಲ್ಲಿ ಮುಸ್ಲಿಮ್ ಮಹಿಳೆಯರ ಬಗ್ಗೆ ಮಾತನಾಡುತ್ತಾ ನಾಟಕೀಯವಾಗಿ ಈ ಸಂಗತಿಯನ್ನು ತನ್ನ ಸಾಧನೆ ಎಂಬಂತೆ ಬಿಂಬಿಸಿದರು ಎಂದು ಟೀಕಿಸಿದರು.

ಯುಪಿಎ ಸರಕಾರದ ಅವಧಿಯಲ್ಲಿ ಪಿ.ಚಿದಂಬರಂ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿ, ಹಜ್‌ ಯಾತ್ರೆಗೆ ಬೇಕಾದ ಸಿದ್ಧತೆಗಳನ್ನು ಮಾಡಲು ನಿಗಮವನ್ನು ಸ್ಥಾಪಿಸುವ ಕುರಿತು ಚರ್ಚಿಸಲಾಗಿತ್ತು. ಈಗಿನ ಸರಕಾರ ಆ ಬಗ್ಗೆ ಗಮನ ಹರಿಸಬೇಕು. ಅಲ್ಲದೇ, ಸೌದಿ ಅರೇಬಿಯಾದಲ್ಲಿ ಹಜ್‌ ಯಾತ್ರಿಗಳಿಗೆ ವಸತಿ ಸೌಲಭ್ಯ ಒದಗಿಸಲು ಕರ್ನಾಟಕ ಭವನವನ್ನು ನಿರ್ಮಿಸಲು ಅವಕಾಶವಿದ್ದು, ರಾಜ್ಯ ಸರಕಾರ ಈ ಬಗ್ಗೆ ಗಮನ ಹರಿಸಲಿ. ದಾನಿಗಳಿಂದಲೂ ಆರ್ಥಿಕ ನೆರವು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ರಶಾದಿ, ವಿಧಾನಪರಿಷತ್ ಸದಸ್ಯ ಸೈಯ್ಯದ್ ಮುದೀರ್ ಆಗಾ, ಬಿಬಿಎಂಪಿ ಸದಸ್ಯರಾದ ಝಮೀರ್ ಶಾ, ಶಕೀಲ್ ಅಹ್ಮದ್, ರಾಜ್ಯ ಹಜ್ ಸಮಿತಿಯ ಸದಸ್ಯರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಹಜ್ ಸಮಿತಿಯ ಕಾರ್ಯನಿವಾರ್ಹಕ ಅಧಿಕಾರಿ ಸರ್ಫರಾಝ್‌ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೇಂದ್ರ ಸರಕಾರವು ಇತ್ತೀಚೆಗೆ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಹಜ್‌ ಯಾತ್ರಿಗಳ ಸಬ್ಸಿಡಿಯನ್ನು ರದ್ದು ಮಾಡಿದೆ. ಬಿಜೆಪಿಯವರು ಅಲ್ಪಸಂಖ್ಯಾತರ ಬಗ್ಗೆ ಹೊಂದಿರುವ ಮನಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆ. ಯಾತ್ರಿಗಳ ಹೆಸರಿನಲ್ಲಿ ಏರ್ ಇಂಡಿಯಾದ ನಷ್ಟವನ್ನು ಭರಿಸಲಾಗುತ್ತಿತ್ತು. ಸರಕಾರ ನೀಡುವ ಸಬ್ಸಿಡಿ ಹಣವನ್ನು ನಂಬಿಕೊಂಡು ಯಾರೂ ದೇವರ ಯಾತ್ರೆಯನ್ನು ಮಾಡಲ್ಲ.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News