ಬೂಸಾ ಪ್ರಕರಣ ಮತ್ತು ಬಿ. ಬಸವಲಿಂಗಪ್ಪ

Update: 2018-01-20 17:31 GMT

ಸಿದ್ದಲಿಂಗಯ್ಯ ಎಂಬ ಹರಿಜನರ ತರುಣ ಬಸವಲಿಂಗಪ್ಪನವರ ಸುತ್ತ ಎದ್ದ ಬೂಸಾ ವಿವಾದದಲ್ಲಿ ಸಿಕ್ಕಿಕೊಂಡವರಲ್ಲಿ ಒಬ್ಬರು. ಈ ಬೂಸಾ ಪ್ರಕರಣಕ್ಕಿಂತ ಮುಂಚೆಯೇ ವಿಚಾರ ಚಳವಳಿ ನಡೆಸುತ್ತಿದ್ದ ಇವರು ‘‘ಉಚ್ಚ’’ ಜಾತಿಗಳ ಕೈಗೆ ಈ ಪ್ರಕರಣದಲ್ಲಿ ಸಿಕ್ಕರು. ಇವರು ಸ್ವಂತ ಅನುಭವಗಳನ್ನು ಹೇಳಿರುವ ರೀತಿಯಿಂದ ಓದುಗರು ಅರಿಯಬಹುದಾದಂತೆ ನಮ್ಮ ದಲಿತ ಜನ ತಮ್ಮ ಹೋರಾಟದಲ್ಲಿ ಎದುರಿಸಬೇಕಾದ ಅನಿಷ್ಟ ಶಕ್ತಿಗಳು ಸಾಮಾನ್ಯವಲ್ಲ; ದಲಿತ ವರ್ಗದ ಎದುರು ಇರುವ ಸಮಸ್ಯೆಗಳು ಸರಳವಲ್ಲ.

  - ಪಿ. ಲಂಕೇಶ್

ನಮ್ಮ ಶೋಷಣೆಯ ವಿರುದ್ಧ ನಾವು ರೊಚ್ಚಿಗೇಳುವುದು ನಮ್ಮ ಕರ್ತವ್ಯ ಮತ್ತು ಹಕ್ಕು. ಇದನ್ನು ಸವರ್ಣೀಯರು ನಡೆಸುವುದಿಲ್ಲ. ಯಾಕೆಂದರೆ ಇದೇ ಸ್ಥಿತಿಯಲ್ಲಿ ನಾವು ಇರುವುದು ಅವರಿಗೆ ಇಷ್ಟ. ಆದರೆ ನಮ್ಮ ಜಾಗದಲ್ಲಿ ಈ ಸವರ್ಣೀಯರು ಇದ್ದಿದ್ದರೆ ಖಂಡಿತವಾಗಿಯೂ ಅವರು ಹೀಗೆ ಮಾಡುತ್ತಿರಲಿಲ್ಲ.

ವಿದ್ಯಾರ್ಥಿ ಕ್ರಿಯಾ ಸಮಿತಿಯವರು ಸಭೆ ಕರೆದು ಬಸವಲಿಂಗಪ್ಪನವರು ರಾಜೀನಾಮೆ ಕೊಡುವವರೆಗೂ ಹೋರಾಡುತ್ತೇವೆಂದು ಠರಾವು ಮಂಡಿಸಿದಾಗ ಅಲ್ಲೇ ಕಲ್ಲೂರು ಮೇಘರಾಜ್ ಮತ್ತು ನಾನು ಎದ್ದು ‘‘ನಾವು ಬಸವಲಿಂಗಪ್ಪನವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದು ಪಟ್ಟಭದ್ರಹಿತಾಸಕ್ತಿಗಳ ಕುತಂತ್ರ’’ ಎಂದು ಹೇಳಿದೆವು. ಆದರೆ ನಮ್ಮ ವಿಚಾರವಾದವನ್ನು ಕೇಳಲು ಯಾರೂ ಸಿದ್ಧರಿರಲಿಲ್ಲ. ಶೂದ್ರ ವಿದ್ಯಾರ್ಥಿಗಳೇ ವೈದಿಕರ ಜಾಲಕ್ಕೆ ಬಿದ್ದರು. ಇವರಲ್ಲಿ ಬಸವಲಿಂಗಪ್ಪನವರ ಬಗ್ಗೆ ಏನೋ ಒಂದು ರೀತಿಯ ದ್ವೇಷವನ್ನು ಹುಟ್ಟಿಸಿದ್ದರು. ಈ ಶೂದ್ರ ವಿದ್ಯಾರ್ಥಿಗಳ ದ್ವೇಷ ಬ್ರಾಹ್ಮಣ ಹಿತಾಸಕ್ತಿಗೆ ಅನುಗುಣವಾಗಿತ್ತು. ಇಷ್ಟು ಆಗುವುದರ ಒಳಗೆ ನಮಗೆಲ್ಲ ಬಸವಲಿಂಗಪ್ಪನವರ ಪರವಾದಿಗಳೆಂಬ ಹಣೆಚೀಟಿಯನ್ನು ಅಂಟಿಸಿದರು.

ಮೂಢನಂಬಿಕೆಗಳ ಬಗ್ಗೆ ತಿಳುವಳಿಕೆ ಕೊಡಲು ನಾವು ವಿಚಾರವಾದಿ ಬಳಗವನ್ನು ಕಟ್ಟಿದೆವು. ಸಮಾವೇಶ ಕರೆಯಲು ಒಂದು ತಿಂಗಳಿಂದ ವ್ಯವಸ್ಥೆ ಮಾಡಿದ್ದೆವು. ಅನೇಕರು ಇದನ್ನು ಬಸವಲಿಂಗಪ್ಪನವರ ರಕ್ಷಣೆಗಾಗಿ ಎಂದು ಭಾವಿಸಿದರು. ಆದರೆ ನಾವಿದನ್ನು ವ್ಯವಸ್ಥೆ ಮಾಡಲು ನಿರ್ಧರಿಸಿದಾಗ ಬೂಸಾ ಚಳವಳಿಯ ಕಲ್ಪನೆಯೇ ನಮಗಿರಲಿಲ್ಲ. ನಮ್ಮ ಸಮಾವೇಶಕ್ಕೆ ಸೆನೆಟ್ ಭವನವನ್ನು ಬಿಟ್ಟು ಕೊಡಲು ಒಪ್ಪಿಕೊಂಡಿದ್ದ ವಿಶ್ವವಿದ್ಯಾನಿಲಯದವರು ಸಮಾವೇಶ ಸೇರಲು ಕೇವಲ ಎರಡೇ ಗಂಟೆ ಮುಂಚೆ ಅದನ್ನು ನಿರಾಕರಿಸಿದರು. ಬೇರೆ ದಾರಿ ಇಲ್ಲದೆ ಹಾಕಿ ಮೈದಾನದಲ್ಲಿ ಸಭೆ ಸೇರಿದೆವು. ಪ್ರಾಸ್ತಾವಿಕ ಭಾಷಣ ಆಗುತ್ತಿದ್ದಾಗ ಕೆಲವರು ಹಸ್ತಪ್ರತಿಯಲ್ಲಿ ಅಚ್ಚು ಹಾಕಿಸಿದ್ದ ‘‘ಹಣೆಗಳನ್ನು ಕೊರೆಯುತಿಹ ವಿಭೂತಿ ನಾಮಗಳ ಅಳಿಸಳಿಸಿ ಉಜ್ಜುಜ್ಜಿ ಓಡಿಬನ್ನಿ’’ ಎಂಬುದರ ಬಗ್ಗೆ ಆಕ್ಷೇಪಣೆಗಳು ಬಂದವು. ಆಗ ನಾವು ವಿಭೂತಿ ಮತ್ತು ನಾಮ ಮೂಢನಂಬಿಕೆಯ ಸಂಕೇತವೆಂದು ಸ್ಪಷ್ಟೀಕರಣ ನೀಡಿದಾಗ ಸಭೆ ಶಾಂತವಾಯಿತು. ಕಲ್ಲೂರು ಮೇಘರಾಜ್, ಅನಂತ, ವಾಸು ದೇವ್, ಚಿಂತಾಮಣಿ ರಾಜಣ್ಣ ಇವರು ಮಾತನಾಡಿದ ಮೇಲೆ ಕೆಲವು ಗೆಳೆಯರು ಅಂದರೆ ಇದಕ್ಕೆ ಸಂಬಂಧಿಸದ ಆರ್ಟ್ಸ್ ಕಾಲೇಜಿನ ಚುನಾವಣೆಯಲ್ಲಿ ನನ್ನ ವಿರುದ್ಧ ನಿಂತು ಸೋತವರು ಇಲ್ಲವೇ ವಿರುದ್ಧ ಪ್ರಚಾರ ಮಾಡಿದವರು ಬಂದು ಸಭೆಯಲ್ಲಿ ಅವಕಾಶ ಪಡೆದು ‘ಮೂಢನಂಬಿಕೆಗಳು ಇರಬೇಕು. ಅವೇ ಚಂದ. ದೇವರು ಇದ್ದಾನೆ’ ಎಂದು ಸಾಬೀತು ಮಾಡಲು ಯತ್ನಿಸಿದರು. ‘‘ದೇವರು ಇಲ್ಲದೆ ನಾವು ಹೇಗೆ ಹುಟ್ಟುತ್ತೇವೆ? ಮಕ್ಕಳು ಹೇಗೆ ಹುಟ್ಟುತ್ತವೆ?’’ ಇಂಥ ಪ್ರಶ್ನೆಗಳನ್ನು ಕೇಳಿದರು. ಆಗ ನಾವು ‘‘ಒಂದು ಕೋಣೆಯಲ್ಲಿ ಹೆಂಗಸನ್ನೂ ಇನ್ನೊಂದು ಕೋಣೆಯಲ್ಲಿ ಗಂಡಸನ್ನೂ ಕೂಡಿಹಾಕಿದರೆ ಮಕ್ಕಳು ಹುಟ್ಟುವುದಿಲ್ಲ. ಅವರಿಬ್ಬರೂ ಒಂದು ಕೋಣೆಗೆ ಬಂದಾಗ ಮಾತ್ರ ಮಕ್ಕಳು ಹುಟ್ಟುತ್ತವೆ. ಆದ್ದರಿಂದ ಮಕ್ಕಳನ್ನು ಹುಟ್ಟಿಸಲು ದೇವರು ಬರಬೇಕಾಗಿಲ್ಲ’’ ಎಂದು ಹೇಳಿ ಸುಮ್ಮನಿರಿಸಬೇಕಾಯಿತು. ಆದರೂ ಗೊಂದಲ ಮುಂದುವರಿಯಿತು. ಏಕೆಂದರೆ ನಮ್ಮ ಸಭೆಯನ್ನು ಕೆಡಿಸಲು ಅವರು ಪಣತೊಟ್ಟು ಬಂದಿದ್ದರು. ಅನೇಕರಿಗೆ ಮಾನಸಿಕ ಸ್ಥಿರತೆ ಇರಲಿಲ್ಲ. ತೂಗಾಡುವ ತಲೆ, ಆದರೂ ಮೂಢನಂಬಿಕೆಗಳನ್ನು ಉಳಿಸಬೇಕೆಂಬ ಹಂಬಲ. ಕೊನೆಗೆ ಸಭೆಯಲ್ಲಿ ಹಾಜರಿದ್ದ ಆಸಕ್ತ ವಿದ್ಯಾರ್ಥಿಗಳಿಗೂ, ಕೆಡಿಸಲು ಬಂದವರಿಗೂ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿತು. ಸಿದ್ಧತೆ ಇಲ್ಲದೆ ಕುಳಿತಿದ್ದ ವಿಚಾರವಾದಿ ವಿದ್ಯಾರ್ಥಿಗಳು ಈ ಅನಿರೀಕ್ಷಿತ ಘರ್ಷಣೆಯಲ್ಲಿ ಅಸಹಾಯಕರಾದರು. ಚಾಕು, ಸೈಕಲ್‌ಚೈನು, ಚಪ್ಪಲಿಗಳು ಬಳಸಲ್ಪಟ್ಟವು. ಅನೇಕ ವಿಚಾರವಾದಿ ಗೆಳೆಯರು ತೀವ್ರ ಗಾಯಗೊಂಡರು. ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ನನಗೂ ಹೊಡೆತಗಳು ಬಿದ್ದವು. ಒಂದು ತಿಂಗಳಿಂದ ನಾವು ದುಡಿದದ್ದು ವ್ಯರ್ಥವಾಯಿತು. ವಿಚಾರವಾದಿಗಳೆಂದರೆ ಬಸವಲಿಂಗಪ್ಪನವರ ಬೆಂಬಲಿಗರು, ಅವರೆಲ್ಲ ಹೆಚ್ಚಾಗಿ ಹರಿಜನ ವಿದ್ಯಾರ್ಥಿಗಳು ಎಂಬ ಭಾವನೆಯನ್ನು ಹರಡಲಾಯಿತು.

ವಿಚಾರವಾದಿ ಸಮಾವೇಶ ಮುಗಿದ ಮಾರನೇ ದಿನವೇ ವಿಚಾರವಾದಿ ವಿದ್ಯಾರ್ಥಿಗಳಿಗೆ ಹೊಡೆತ ಶುರುವಾಯಿತು. ಸರಕಾರಿ ಆರ್ಟ್ಸ್ ಕಾಲೇಜಿನಲ್ಲಿ ನಮ್ಮ ಗೆಳೆಯರೊಬ್ಬರನ್ನು ಮಹಡಿಯಿಂದ ಕೆಳಗೆ ಎಸೆದು ಅವರನ್ನು ಮುಗಿಸಿಬಿಡುವ ಭಯಾನಕ ಪ್ರಯತ್ನ ನಡೆಯಿತು. ಮತ್ತೊಬ್ಬ ಗೆಳೆಯರ ಪಕ್ಕೆಗೆ ಚಾಕು ಹಾಕಲಾಯಿತು. ನಮ್ಮ ವಿರೋಧಿಗಳು ಕಾಲೇಜಿನ ಆಫೀಸಿನಲ್ಲಿ ಹಾಜರಿ ಪುಸ್ತಕವನ್ನು ತೆಗೆದುಕೊಂಡು ತರಗತಿಗಳಲ್ಲಿ ಹರಿಜನ ವಿದ್ಯಾರ್ಥಿಗಳನ್ನು ಗುರುತು ಹಿಡಿದು ಹೊಡೆಯಲು ಆರಂಭ ಮಾಡಿದರು. ವಿಚಾರವಾದಿ ಸಮಾವೇಶಕ್ಕೂ ಬರದೆ, ಬಸವಲಿಂಗಪ್ಪನವರ ಬಗ್ಗೆ ಏನೇನೂ ಗೊತ್ತಿರದ ಮುಗ್ಧ ಹರಿಜನ ವಿದಾರ್ಥಿಗಳನೇಕರು ಏಟು ತಿಂದರು. ಕಾಲೇಜಿನ ಆವರಣದಲ್ಲಿ ಹೊಲೆಯರು, ಮಾದಿಗರು ಎಂದು ಜೋರಾಗಿ ಕಿರುಚುವುದು, ಅವರು ಸಿಕ್ಕಿದರೆ ದನ ಬಡಿದಂತೆ ಬಡಿಯುವುದು, ಹೀನಾಮಾನ ಬಯ್ಯುವುದು ಮುಂದುವರಿಯಿತು. ಅನೇಕ ಹರಿಜನ ವಿದ್ಯಾರ್ಥಿಗಳು ಸುಳ್ಳು ಜಾತಿ ಹೇಳಿಕೊಂಡು ದೈಹಿಕ ಯಾತನೆಯಿಂದ ಪಾರಾದರು. ಅನೇಕರು ಕಾಲೇಜು ಮತ್ತು ಹಾಸ್ಟೆಲ್‌ಗಳನ್ನು ಬಿಟ್ಟು ಊರುಗಳಿಗೆ ಹೊರಟು ಹೋದರು. ‘‘ಹೊಲೇರು, ಮಾದಿಗರು ಊರೇಲಿ ವಲಾ ಉಳೋದ ಬಿಟ್ಟು ಓದಾಕೆ ಬಂದವ್ರೆ. ಅವ್ರನ್ನ ಊರಿಗೆ ಕಳ್ಸಿ ಸಾರ್’’, ಎಂದು ಅನೇಕ ಹಿಂದೂ ಸಂಸ್ಕೃತಿಯ ಆರಾಧಕರು ಕಾಲೇಜಿನ ಪ್ರಿನ್ಸಿಪಾಲರನ್ನು ಒತ್ತಾಯ ಮಾಡಿದರು. ಆಗ ಕಾಲೇಜಿನ ಪ್ರಿನ್ಸಿಪಾಲರು, ಉಪಕುಲಪತಿಗಳ ತಟಸ್ಥ ಧೋರಣೆಯನ್ನು ಅನುಸರಿಸಿ ತಮ್ಮ ರಕ್ಷಣೆಯನ್ನು ಮಾಡಿಕೊಂಡರು. ಹರಿಜನ ವಿದ್ಯಾರ್ಥಿಗಳಿಗೆ ಕಾಲೇಜು ಪರಕೀಯವಾಯಿತು.

ಒಂದು ದಿನ ಕಪ್ಪಗಿರುವವರಿಗೆಲ್ಲ ಹೊಡೆತ ಬೀಳಲಾರಂಭಿಸಿತು. ಸಿಕ್ಕವರು ಕಪ್ಪಗಿದ್ದರೆ ಅವರು ಹರಿಜನರೆಂದೇ ಈ ಧರ್ಮರಕ್ಷಕರ ಭಾವನೆ, ಅವರೆಲ್ಲಾ ನಾಸ್ತಿಕರು ಎಂಬುದೇ ಇವರ ತಿಳುವಳಿಕೆ. ಕಪ್ಪಗಿರುವ ಲಿಂಗಾಯತ ಗೆಳೆಯನೊಬ್ಬ ಇವರಿಗೆ ಅಡ್ಡ ಬಂದ. ಹೊಡೆತ ಬೀಳಲಾರಂಭಿಸಿತು. ‘ನಾನು ಲಿಂಗಾಯತ’ ಎಂದು ಎಷ್ಟು ಹೇಳಿದರೂ ಇವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವನ ಶಿವದಾರ ಇವರ ಕೈಗೆ ಸಿಕ್ಕಿದಾಗ ಪಶ್ಚಾತ್ತಾಪದಿಂದ ಅವನನ್ನು ಬಿಟ್ಟುಬಿಟ್ಟರು. ಆ ಸಮಯದಲ್ಲಿ ಎಷ್ಟೋ ಒಕ್ಕಲಿಗ ವಿದ್ಯಾರ್ಥಿಗಳು ಏಟು ತಿಂದರು. ಏಕೆಂದರೆ ಅವರಿಗೆ ಆಗದ ವಿದ್ಯಾರ್ಥಿಗಳು ಇವರನ್ನು ಗೂಂಡಾಗಳಿಗೆ ಹರಿಜನರೆಂದು ತೋರಿಸಿಕೊಟ್ಟರು.

ವಿಚಾರವಾದಿಗಳಿಗೆ ಜಾತಿಯೂ ಇಲ್ಲ. ದೇವರೂ ಇಲ್ಲ, ಬೂರ್ಜ್ವಾಗಳಿಗೆ ದೇವರನ್ನು ತೋರಿಸಬೇಕೆಂಬ ಹಂಬಲ. ಅದಕ್ಕಾಗಿ ಇವರು ಮಾಡಿದ ಉಪಾಯ: ನೂರಾರು ಹುಡುಗರು ಕಾಲೇಜಿಗೆ ಬರುವಾಗ ವಿಭೂತಿ ನಾಮಗಳನ್ನು ಹಚ್ಚಿಕೊಂಡು ಬಂದರು. ಅವರ ಮುಖಗಳಲ್ಲಿ ದೇವರನ್ನು ತೋರಿಸುತ್ತಿದ್ದೇವೆ ಎಂಬ ಆನಂದ ಹರಿದಾಡುತ್ತಿತ್ತು. ಹಾಗೆ ಬಂದವರೇ ನಿಷೇಧಾಜ್ಞೆಯನ್ನು ಉಲ್ಲಂಘಿಸಿದರು. ಸ್ವಲ್ಪ ಹೊತ್ತಿನಲ್ಲೇ ನಮ್ಮ ಅಭಿನವ ದೇವತೆಗಳು ಲಾಕಪ್ಪಿನಲ್ಲಿ ಕುಳಿತಿದ್ದರು. ದೇವರ ಅಸ್ತಿತ್ವದ ಸ್ಥಾಪನೆಗಾಗಿ ಇವರು ಕಂಡುಹಿಡಿದ ಇನ್ನೂ ಒಂದು ಉಪಾಯ. ಎಲ್ಲ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ವಿಭೂತಿ ಬಳಿಯುವ ಕಾರ್ಯಕ್ರಮ ಬಲಾತ್ಕಾರದಿಂದ ನಡೆಸಿದರು. ಸಿಕ್ಕ ಸಿಕ್ಕ ವಿಚಾರವಾದಿಗಳನ್ನು ಹಿಡಿದು ಚಾಕು ಹಾಕಿ ಅವರಿಂದ ದೇವರಿದ್ದಾನೆ ಎಂದು ಅಗ್ರಿಮೆಂಟ್ ಬರೆಸಿಕೊಂಡರು. ಇಲ್ಲದಿದ್ದರೆ ಆ ಭರವಸೆಯನ್ನು ಬಾಯಿಮಾತಿನಿಂದಲಾದರೂ ಪಡೆದರು. ಈ ಕೆಲಸಗಳಿಂದ ನಮ್ಮ ಸಂಸ್ಕೃತಿಯನ್ನು ಪೂರ್ಣ ರಕ್ಷಿಸಿದೆವೆಂದು ಅವರು ಭ್ರಮಿಸಿದರು. ವಿಚಾರವಾದಿ ಸಮಾವೇಶವನ್ನು ಗೂಂಡಾಗಳಿಂದ ಚದುರಿಸಿದ್ದನ್ನು ಪ್ರತಿಭಟಿಸಲು ನಾವು ಒಂದು ಮೆರವಣಿಗೆ ಮಾಡಿದೆವು. ಸಾವಿರಾರು ಜನರಿದ್ದ ಮೆರವಣಿಗೆಕಾರರಿಗೆ ಬಸವಲಿಂಗಪ್ಪನವರಿಗೆ ಬೆಂಬಲ ಸೂಚಿಸುವ ಉದ್ದೇಶ ಇತ್ತು. ನಮ್ಮ ಹಿಂದೆಯೇ ಒಂದು ಮೆರವಣಿಗೆ. ಅದು ನಮ್ಮ ಸಂಖ್ಯೆಗಿಂತ ದೊಡ್ಡದು, ಅವರು ಬಸವಲಿಂಗಪ್ಪನವರಿಗೆ ಧಿಕ್ಕಾರ ಹಾಕಿಕೊಂಡು ಬಂದರು. ನಮ್ಮ ಸಭೆ ಇನ್ನೂ ಮುಗಿದಿರಲಿಲ್ಲ. ಪೊಲೀಸ್ ಅಧಿಕಾರಿಗಳು ‘‘ಬೇಗ ಮುಗಿಸಿ, ಘರ್ಷಣೆಯಾದರೆ ನಾವು ಜವಾಬ್ದಾರರಲ್ಲ’’ ಎಂದು ಒಂದೇ ಸಮನೆ ಹೇಳತೊಡಗಿದರು. ಹರಿಜನ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮುಂದುವರಿಯಿತು. ಯಾರೂ ನಮ್ಮ ರಕ್ಷಣೆಯ ಬಗ್ಗೆ ಕಾಳಜಿ ವಹಿಸಲಿಲ್ಲ. ಕೊನೆಗೆ ನಾವು ನಿರಾಶರಾಗಿ ಗೂಂಡಾಗಳಿಂದ ರಕ್ಷಣೆ ಕೊಡಲು ವಿಫಲವಾದ ಸರಕಾರಕ್ಕೆ ಧಿಕ್ಕಾರ ಹಾಕಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಬಂಧಿತರಾದೆವು. ಲಾಕಪ್ಪಿನಲ್ಲಿದ್ದಾಗ ಪೊಲೀಸರ ಮೈಗಾವಲಿನಲ್ಲಿ ನಮಗೆ ರಕ್ಷಣೆ ದೊರೆಯಿತೇ ಹೊರತು ಬಂದೀಖಾನೆಯ ಹೊರಗಿದ್ದ ಅಸಂಖ್ಯಾತ ಗೆಳೆಯರಿಗೆ ರಕ್ಷಣೆ ದೊರೆಯಲಿಲ್ಲ.

ಬಹುದಿನಗಳಿಂದ ಕಾಲೇಜಿಗೆ ತಪ್ಪಿಸಿಕೊಂಡಿದ್ದ ನಾನು ಕಾಲೇಜಿಗೆ ಹೋದಾಗ ನನ್ನ ಚಟುವಟಿಕೆಗಳನ್ನು ಹೀನಾಮಾನ ಬೈಯುತ್ತ ಕೆಲವರು ಸುತ್ತುಗಟ್ಟಿದರು- ಬಾಲಿಶಃ ಪ್ರಶ್ನೆಗಳನ್ನು ಕೇಳುತ್ತಾ... ಉತ್ತರ ಕೊಡಲು ಮುಂದಾದಾಗ ಹೊಡೆಯಲು ಕೈ ಎತ್ತಿದರು. ಲಲಿತ ಕಲಾ ಕಾರ್ಯದರ್ಶಿಯ ಸ್ಥಾನಕ್ಕೆ ಬಹುಮತ ದಿಂದ ಆಯ್ಕೆಗೊಂಡಿದ್ದ ನನ್ನನ್ನು ರಾಜೀನಾಮೆ ಕೊಡುವಂತೆ ಅವರು ಒತ್ತಾಯಪಡಿಸಿದರು. ಆ ವೇಳೆಗೆ ವಿದ್ಯಾರ್ಥಿ ರಾಜಕೀಯದಿಂದ ನಾನು ಅಸಹ್ಯಗೊಂಡಿದ್ದೆ. ಬಾಟ್ಲುಗಳು, ಹೋಟ್ಲುಗಳು ಯಾವ ರೀತಿ ವಿದ್ಯಾರ್ಥಿ ರಾಜಕೀಯದಲ್ಲಿ ಪ್ರಭಾವ ಬೀರುತ್ತವೆ ಎಂಬುದನ್ನು ಅರಿತು ಕೊಂಡಿದ್ದೆ. ಈ ಚೌಕಟ್ಟಿನಿಂದ ಬಿಡುಗಡೆಗಾಗಿ ಬಯಸುತ್ತಿದ್ದ ನಾನು ಆ ಕಾಲ ಬಂದಾಗ ಸ್ಥಾನಕ್ಕೆ ಕೊನೆ ನಮಸ್ಕಾರ ಹಾಕಿ ಮನಸ್ಸನ್ನು ಹಗುರ ಮಾಡಿಕೊಂಡೆ.

ದೇವರಾಜ ಅರಸು

ವಿದ್ಯಾರ್ಥಿಗಳು ಬಸವಲಿಂಗಪ್ಪನವರ ವಿರುದ್ಧ ಬೂಸಾ ಚಳವಳಿ ಮಾಡಿ ಒಂದು ಗೊಂದಲಪುರ ನಿರ್ಮಾಣ ಮಾಡಿದರು. ರಾಜೀನಾಮೆ ಕೊಡಿಸುವಲ್ಲಿ ಇವರು ಶಕ್ತರೆಂದು ಕಂಡಾಗ ಮಂತ್ರಿಗಳು ಸಾಮೂಹಿಕ ರಾಜೀನಾಮೆಯ ನಾಟಕವಾಡಬೇಕಾಯಿತು. ಇದರಿಂದ ಬಸವಲಿಂಗಪ್ಪನವರ ರಾಜೀನಾಮೆ ಅನಿವಾರ್ಯವಾಯಿತು.

ಬಸವಲಿಂಗಪ್ಪನವರು ಮಂತ್ರಿ ಪದವಿ ಬಿಟ್ಟ ಮೇಲೆ ಅವರನ್ನು ಸನ್ಮಾನಿಸಲು ಅನೇಕ ಸಮಾರಂಭಗಳು ನಡೆದವು. ಇದನ್ನು ವ್ಯವಸ್ಥೆ ಮಾಡಿದ್ದವರು ಸಮಾಜದ ತೀರಾ ಕೆಳಗಿನ ಜನ. ಅವರನ್ನು ಕಂಡು ಈ ಜನ ಕಣ್ಣೀರು ಹಾಕಿದರು. ಕಾಲಿಗೆ ಬಿದ್ದರು. ಅವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಿದರು. ಯುವಕರು ಅವರನ್ನು ಹೊತ್ತುಕೊಂಡು ಉತ್ಸಾಹದ ಹುಚ್ಚಿನಲ್ಲಿ ಕುಣಿದರು. ಅವರು ಹೇಳಿದ ಪ್ರಕಾರ ಎಷ್ಟೋ ಹರಿಜನರು ದೇವರ ಪಟಗಳನ್ನು ಚರಂಡಿಗೆ ಹಾಕಿದರು. ಕೆಲವು ದಿನಗಳ ಹಿಂದೆ ಬಸವಲಿಂಗಪ್ಪನವರನ್ನು ಭೇಟಿಮಾಡಲು ಹೋಗಿದ್ದಾಗ ಅವರನ್ನು ಕೆಲವು ಹರಿಜನ ಮುಖಂಡರು ಮದುವೆಗೆ ಆಹ್ವಾನಿಸಲು ಬಂದಿದ್ದರು. ಆ ಮದುವೆ ವಿಶೇಷ ಹಿಂದೂ ಧರ್ಮ ಸಂಪ್ರದಾಯವನ್ನು ಮುರಿಯುವುದು. ಆ ಮದುವೆ ನಡೆಯುವ ಕಾಲ ರಾಹುಕಾಲ. ಹರಿಜನರಲ್ಲಿ ವಿಚಾರ ಶಕ್ತಿಯನ್ನು ಉದ್ದೀಪನಗೊಳಿಸಲು ಯತ್ನಿಸಿದ ಬಸವಲಿಂಗಪ್ಪನವರು ಈ ಮಿತಿಯಲ್ಲಿ ಅಭಿನಂದನಾರ್ಹರು.

ಕರ್ನಾಟಕದ ರಾಜಕೀಯ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ 1970ರ ದಶಕದಲ್ಲಿ ನಡೆದ ‘ಬೂಸಾ’ ಪ್ರಕರಣ’ ಒಂದು ಮಹತ್ವದ ಘಟನೆಯಾಗಿದೆ.ದೇವರಾಜ ಅರಸು ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ದಲಿತ ನಾಯಕ ಬಿ. ಬಸವಲಿಂಗಪ್ಪ ‘‘ಕನ್ನಡ ಸಾಹಿತ್ಯದಲ್ಲಿ ಇರುವುದೆಲ್ಲ ಬೂಸಾ’’ ಎಂದು ನೀಡಿದ್ದ ಹೇಳಿಕೆ ನಂತರ ವಿವಾದವಾಯಿತು. ಬ್ರಾಹ್ಮಣ್ಯಶಾಹಿಗಳು ಆ ಸಂದರ್ಭವನ್ನು ಬಳಸಿಕೊಂಡು ದಲಿತ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆ ಹಾಗೂ ದಾಳಿಗಳ ಕಹಿ ನೆನಪನ್ನು ಖ್ಯಾತ ಲೇಖಕ ಡಾ. ಸಿದ್ದಲಿಂಗಯ್ಯ ಇಲ್ಲಿ ದಾಖಲಿಸಿದ್ದಾರೆ.ದಿವಂಗತ ಪಿ. ಲಂಕೇಶರು ಸಂಪಾದಿಸಿದ ‘ಪಾಂಚಾಲಿ’ ಕೃತಿಯಿಂದ ಈ ಲೇಖನ ಆರಿಸಲಾಗಿದೆ.

Writer - ಸಿದ್ದಲಿಂಗಯ್ಯ

contributor

Editor - ಸಿದ್ದಲಿಂಗಯ್ಯ

contributor

Similar News