ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು : ಅನಿಲ್ ಕುಂಬ್ಳೆ

Update: 2018-01-21 12:02 GMT

ಬೆಂಗಳೂರು, ಜ.21: ವಿದ್ಯಾರ್ಥಿಗಳು ತಮ್ಮ ಬಗ್ಗೆ ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ತಮ್ಮ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳದೆ ಕೊನೆಯ ಪ್ರಯತ್ನದವರೆಗೂ ಹೋರಾಡುವುದನ್ನು ಅಳವಡಿಸಿಕೊಳ್ಳಬೇಕು ಎಂದು ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆ.
ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಯುಸಿಇ ಫೌಂಡೇಶನ್ ಆಯೋಜಿಸಿದ್ದ 229 ವಿದ್ಯಾರ್ಥಿಗಳಿಗೆ 25ಲಕ್ಷ ರೂ.ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್ ಕೇವಲ ಪದವಿ ಪಡೆಯಲು ಮಾತ್ರವಲ್ಲ. ಆತ್ಮಶ್ವಾಸವನ್ನು ಬೆಳೆಸಿಕೊಳ್ಳುವುದಕ್ಕೂ ಸಹಾಯಕವಾಗಿದೆ ಎಂದು ಹೇಳಿದರು.

ಎಂಜನಿಯರಿಂಗ್ ಕೌಶಲ್ಯವನ್ನು ನಾನು ಕ್ರಿಕೆಟ್‌ನಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದೇನೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯದ ಬಗೆಗಿನ ಅರಿವನ್ನು ಹೊಂದಿರಬೇಕು. ಇದು ತಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಸಹಾಯಕವಾಗುತ್ತದೆ ಎಂದು ನುಡಿದರು.

ಕ್ರೀಡಾಪಟು ಅಶ್ವಿನ್ ನಾಚಪ್ಪ ಮಾತನಾಡಿ, ಅಪ್ಪ ಕೆಲಸ ಮಾಡುತ್ತಿದ್ದ ಕಾರ್ಖಾನೆ ಹಲವು ತಿಂಗಳು ಕಾಲ ಮುಚ್ಚಿತ್ತು. ಶಾಲೆಗೆ ಶುಲ್ಕ ಕಟ್ಟುವುದೂ ಕಷ್ಟವಾಗಿತ್ತು. ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದರಿಂದ 5ನೆ ತರಗತಿಯಿಂದ ಉಚಿತ ಶಿಕ್ಷಣ ದೊರೆಯಿತು ಎಂದು ತಮ್ಮ ಬಾಲ್ಯದ ದಿನಗಳನ್ನು ನೆನೆಪಿಸಿಕೊಂಡರು.

ಫೌಂಡೇಶನ್‌ನ ಟ್ರಸ್ಟಿ ಜಗದೀಶ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಿನ ಹಸ್ತಚಾಚಿರುವ ಎಲ್ಲ್ಲ ದಾನಿಗಳಿಗೆ ಮತ್ತು ಯುಸಿಇಗೆ ನಾನು ಆಭಾರಿಯಾಗಿದ್ದೇನೆ. ನಾವು ಸಮಾಜದಿಂದ ಪಡೆದದ್ದನ್ನು ಅದೇ ಸಮಾಜಕ್ಕೆ ವಾಪಸ್ ನೀಡಲು ಇದು ಸಕಾಲವಾಗಿದೆ. ಇದು ಕೇವಲ ಸಮಾಜಕ್ಕಷ್ಟೇ ಅಲ್ಲ, ಮುಂದಿನ ಪೀಳಿಗೆಗೆ ನೀಡುವ ಕೊಡುಗೆಯಾಗಿದೆ ಎಂದು ಹೇಳಿದರು.

ಫೌಂಡೇಶನ್‌ನ ಅಧ್ಯಕ್ಷ ಮಾಧವ ಮಾತನಾಡಿ, ಯುವಿಸಿಇ ಅಲುಮ್ನಿ ಫೌಂಡೇಶನ್ ಆರಂಭವಾಗಿ 6 ವರ್ಷಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವ ಮೂಲಕ ನೆರವಿನ ಹಸ್ತ ನೀಡಲಾಗಿದೆ. ಇದಕ್ಕಾಗಿ ಧನ ಸಂಗ್ರಹಕ್ಕಾಗಿ ಅಮೆರಿಕಾ ಸೇರಿದಂತೆ ಹಲವು ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆರ್ಥಿಕ ನೆರವು ಅಗತ್ಯವಿರುವ, ವಿದ್ಯಾರ್ಥಿಗಳ ಕುಟುಂಬ ಪರಿಸ್ಥಿತಿ, ಶೈಕ್ಷಣಿಕ ಪ್ರಗತಿ ಮತ್ತು ಪ್ರತಿಭೆಗಳ ಮಾನ ದಂಡದ ಮೇಲೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದರು.

ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ತಾಂತ್ರಿಕ ಕಾಲೇಜಿನ(ಯುಸಿಇ)ಲ್ಲಿ ವ್ಯಾಸಂಗ ಮಾಡಿ ದೂರದ ಅಮೇರಿಕಾದಲ್ಲಿರುವ ಮತ್ತು ಭಾರತದ ವಿವಿಧ ಸ್ಥಳಗಳಲ್ಲಿ ನೆಲೆಸಿರುವ ಹಳೆಯ ದ್ಯಾರ್ಥಿಗಳು ಸೇರಿ ಯುಸಿಇ ಫೌಂಡೇಶನ್ ಎಂಬ ಒಂದು ಸಮಾಜಸೇವಾ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಈ ಫೌಂಡೇಶನ್‌ನ ಸದಸ್ಯರೆಲ್ಲಾ ಸೇರಿ ಯುಸಿಇಯ 229 ದ್ಯಾರ್ಥಿಗಳಿಗೆ 25ಲಕ್ಷ ರೂ.ವಿದ್ಯಾರ್ಥಿ ವೇತನವನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News