4 ಕೋಟಿ ರೂ.ಮೌಲ್ಯದ ಪುಸ್ತಕ ಮಾರಾಟವಾಗಿಲ್ಲ : ಕಸಾಪ ಗೌರವ ಕಾರ್ಯರ್ಶಿ ಚನ್ನೇಗೌಡ

Update: 2018-01-21 13:50 GMT

ಬೆಂಗಳೂರು, ಜ.21: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಗೊಂಡಿರುವ ಸುಮಾರು 4 ಕೋಟಿ ರೂ. ಮೌಲ್ಯದ ಪುಸ್ತಕಗಳು ಮಾರಾಟವಾಗದೆ ಹಾಗೇ ಉಳಿದಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ತಿಳಿಸಿದರು.

ರವಿವಾರ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ನಗರದ ಕಸಾಪದಲ್ಲಿ ಆಯೋಜಿಸಿದ್ದ ಲೇಖಕ ಡಾ.ಪಿ.ಶಾಂತರಾಮ ಪ್ರಭು ಸಂಪಾದನೆಯ ‘ಮಳೆ ಮುಗಿಲ ಮುಗುಳುನಗೆ’, ಕವಿ ಭೀಮ್‌ಚಂದ್ ಎ.ಡಂಗೇರ್‌ರವರ ‘ಅವಳೊಲವ ಮುಳ್ಳುಗಳು’, ಯುವ ಲೇಖಕ ಅಂತಃಕರಣರವರ ‘ಆಟದ ಬಯಲು’, ಸಾಹಿತಿ ಮಲ್ಲಿಕಾರ್ಜುನ ಬಿ.ಢಂಗಿ ‘ಹೆಸರಿಲ್ಲದ ಹೂವುಗಳು’ ಬರಹಗಾರ ಹೊಳೇನರಸೀಪುರ ಮಂಜುನಾಥರವರ ‘ಭದ್ರತಾಲೋಕದಲ್ಲಿ ಹಾಗೂ ಎಂ.ಎಸ್.ಧರ್ಮೇಂದ್ರರವರ ‘ಕನ್ನಡ ಕರ್ನಾಟಕ ಮೊದಲ ಹೆಜ್ಜೆಗಳು’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಸರಕಾರದ ಅನುದಾನದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಹೀಗಾಗಿ ಪುಸ್ತಕಗಳು ನಿಧಾನವಾಗಿ ಮಾರಾಟವಾದರೂ ಸಮಸ್ಯೆಯಾಗುವುದಿಲ್ಲ. ಆದರೆ, ಖಾಸಗಿ ಪುಸ್ತಕ ಪ್ರಕಾಶನಗಳು ಪುಸ್ತಕಗಳನ್ನು ಪ್ರಕಟಿಸಿ ನಷ್ಟವಾಗುವ ಹಂತಕ್ಕೆ ಮುಟ್ಟಬಾರದು. ಈ ನಿಟ್ಟಿನಲ್ಲಿ ಓದುಗರಿಗೆ ಅಗತ್ಯವಾದ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಆರ್ಥಿಕ ಸದೃಢತೆಯನ್ನು ಕಾಯ್ದುಕೊಳ್ಳಬೇಕು ಎಂದು ಅವರು ಆಶಿಸಿದರು.

ದೇಶದಲ್ಲಿ ಹಿಂದಿ ಪುಸ್ತಕ ಹೊರತು ಪಡಿಸಿ ಕನ್ನಡ ಪುಸ್ತಕಗಳೇ ಹೆಚ್ಚು ಬಿಡುಗಡೆಯಾಗುತ್ತಿವೆ. ಗ್ರಾಂಥಾಲಯಕ್ಕೆ ತಮ್ಮ ಪುಸ್ತಕಗಳನ್ನು ಕೊಳ್ಳುವಂತೆ ಪ್ರತಿವರ್ಷಕ್ಕೆ ನಾಲ್ಕು ಸಾವಿರ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಇಷ್ಟು ವಿಫುಲವಾಗಿರುವ ಪುಸ್ತಕ ಸಂಪತ್ತಿನ ಕಡೆಗೆ ಕನ್ನಡ ಜನತೆ ಮುಗಿಬಿದ್ದು ಉಪಯುಕ್ತ ಪುಸ್ತಕಗಳನ್ನು ಕೊಂಡುಕೊಳ್ಳಬೇಕು ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಕ್ಷೇತ್ರ ಕೇವಲ ಕತೆ, ಕಾದಂಬರಿಗಳಿಗೆ ಸೀಮಿತವಾಗಬಾರದು. ಮನುಷ್ಯನ ದಿನನಿತ್ಯದ ಬದುಕಿಗೆ ಅಗತ್ಯವಾದ ಆರೋಗ್ಯ, ಕ್ರೀಡೆ, ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಪರಿಚಯಿಸುವಂತಹ ಪುಸ್ತಕಗಳು ಪ್ರಕಟಗೊಂಡರೆ, ಓದುಗರರು ಕೊಂಡುಕೊಳ್ಳಲು ಮುಂದಾಗುತ್ತಾರೆ ಎಂದು ವ.ಚ.ಚನ್ನೇಗೌಡ ಹೇಳಿದರು.

ನಾವು ರುಚಿಯಾದ ತಿಂಡಿ ತಿಂದರೆ ಅದರ ರುಚಿ ನಮ್ಮ ನಾಲಗೆಯಲ್ಲಿ ಉಳಿಯುವುದು ಕೇವಲ ಎರಡರಿಂದ ಮೂರು ಗಂಟೆ. ಆದರೆ, ಒಂದು ಉತ್ತಮ ಪುಸ್ತಕವನ್ನು ಓದಿದರೆ ಅದರ ಅನುಭವ, ಜ್ಞಾನ ನಾವು ಬದುಕಿರುವವರೆ ನೆನಪಿನಲ್ಲಿರುತ್ತದೆ. ಹೀಗಾಗಿ ಪ್ರಕಾಶಕರು ಉತ್ತಮ ಪುಸ್ತಕಗಳನ್ನು ಪ್ರಕಟಿಸುವಂತಾಗಲಿ, ಓದುಗರ ಅಂತಹ ಪುಸ್ತಕಗಳನ್ನು ಕೊಂಡು ಓದುವಂತಾಗಲಿ ಎಂದು ಅವರು ಆಶಿಸಿದರು.

ಸಾಹಿತಿ ಡಾ.ಕೆ.ಎಸ್.ಚೈತ್ರಾ ಮಾತನಾಡಿ, ಯುವ ಜನತೆ ಸಾಹಿತ್ಯದ ಕಡೆಗೆ ಗಮನ ಹರಿಸುತ್ತಿಲ್ಲವೆಂದು ಹೇಳುವವರೆ ಹೆಚ್ಚಾಗಿದ್ದಾರೆ. ಆದರೆ, ಅವರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಹ ಒಂದು ಸೂಕ್ತ ವೇದಿಕೆಯನ್ನು ನಿರ್ಮಾಣ ಮಾಡಿಕೊಡುತ್ತಿಲ್ಲ. ಹೀಗಾಗಿ ಯುವ ಜನತೆಯನ್ನು ಉತ್ತಮ ಅವಕಾಶಗಳನ್ನು ನಿರ್ಮಿಸುವುದು ಹಿರಿಯರ ಜವಾಬ್ದಾರಿಯೆಂದು ತಿಳಿಸಿದರು.

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಅದನ್ನು ಉಪಯುಕ್ತವಾಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವತ್ತ ಚಿಂತಿಸುತ್ತಿಲ್ಲ. ಉತ್ತಮ ಕವಿತೆ, ಬರಹಗಳನ್ನು ಪ್ರಕಟಿಸಲು, ಉತ್ತಮ ಸ್ನೇಹಿತರು, ಹಿರಿಯ ಜೊತೆಗೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಬಳಕೆಯಾಗಲಿ ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಲೇಖಕರಾದ ಗುಬ್ಬಚ್ಚಿ ಸತೀಶ್, ನಾರಾಯಣ ಬಾಬಾ ಕೃತಿಗಳ ಕುರಿತು ಪರಿಚಯ ಮಾಡಿಕೊಟ್ಟರು. ಈ ವೇಳೆ ಡಾ.ಪಿ.ಶಾಂತರಾಮ ಪ್ರಭು, ಭೀಮ್‌ಚಂದ್ ಎ.ಡಂಗೇರ್, ಮಲ್ಲಿಕಾರ್ಜುನ ಬಿ.ಢಂಗಿ, ಹೊಳೆನರಸೀಪುರ ಮಂಜುನಾಥ್, ಬೆನಕ ಬುಕ್ಸ್ ಬ್ಯಾಂಕ್ ಡಾ.ಕೆ.ಶಿವರಾಂ, ಹಾಗೂ ನಿಮ್ಮೆಲ್ಲರ ಮಾನಸ ಸಂಪಾದಕ ಗಣೇಶ್ ಕೋಡೂರು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News