ಸ್ವಾತಂತ್ರ ಬಂದು ಎಪ್ಪತ್ತು ವರ್ಷವಾದರೂ ಗಂಗಮತಸ್ಥರಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ: ಎಸ್.ಕೆ.ಮೇಲಕಾರ್

Update: 2018-01-21 12:10 GMT

ಬೆಂಗಳೂರು, ಜ.21: ಮೂಢನಂಬಿಕೆ, ಅನಿಷ್ಠ ಪದ್ಧತಿ, ಜಾತಿ ಪದ್ಧತಿಯನ್ನು ಹೋಗಲಾಡಿಸಲು ಹೋರಾಡಿದ ನಿಜಶರಣ ಅಂಬಿಗರ ಚೌಡಯ್ಯ ಅವರ ಸಮುದಾಯಕ್ಕೆ ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷ ಕಳೆದರೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಎಂದು ಸಾಹಿತಿ ಡಾ.ಎಸ್.ಕೆ.ಮೆೀಲಕಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಅಂಬಿಗರ ಚೌಡಯ್ಯ ಸ್ಮಾರಕಕ್ಕೆ ಹಣವನ್ನು ಬಿಡುಗಡೆ ಮಾಡಿದರೂ ಚೌಡಯ್ಯ ಸಮುದಾಯದವರು ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಸಾಕಷ್ಟು ಹಿಂದೆ ಉಳಿದಿದ್ದಾರೆ. ಹೀಗಾಗಿ, ರಾಜ್ಯ ಸರಕಾರವು ಈ ಸಮುದಾಯಕ್ಕೆ ಎಲ್ಲ ರೀತಿಯ ಶಕ್ತಿಯನ್ನು ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಹೇಳಿದ್ದಾರೆ.

ಅಂಬಿಗರ ಚೌಡಯ್ಯ ಸಮುದಾಯದ ಗಂಗಮತಸ್ಥರು, ಮೋಗವೀರರು, ಬೆಸ್ತರನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ರಾಜ್ಯ ಸರಕಾರ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಿದೆ. ಆದರೂ ಕೇಂದ್ರ ಸರಕಾರ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ. ಈ ಪ್ರಸ್ತಾಪವನ್ನು ತಿರಸ್ಕರಿಸಲು ಈ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯೆ ಕಾರಣಯೆಂದು ತಿಳಿಸಿದರು.

ದೇಶದ 13 ರಾಜ್ಯಗಳಲ್ಲಿ ಗಂಗಮಸ್ಥರು ಎಸ್ಸಿ, ಎಸ್ಟಿ ಪಂಗಡಕ್ಕೆ ಸೇರಿದ್ದಾರೆ. ಕರ್ನಾಟಕದಲ್ಲಿ ಗಂಗಮತಸ್ಥರನ್ನು ಅತೀ ಹಿಂದುಳಿದ ಜನಾಂಗಕ್ಕೆ ಒಳಪಟ್ಟವರು ಎಂದು ಕರೆಯಲ್ಪಡುತ್ತಿದ್ದರೂ ಸರಕಾರದಿಂದ ಸೀಗಬೇಕಾದ ಸೌಲಭ್ಯಗಳು ಈಗಲೂ ಸಿಕ್ಕಿಲ್ಲ. ರಾಜ್ಯ ಸರಕಾರ ನಮ್ಮ ಸಮುದಾಯದ ಬಾಬುರಾವ್ ಚಿಂಚನಸೂರ್ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಾಗಲೂ ನಾವು ಒಗ್ಗಟ್ಟಿನಿಂದ ಧ್ವನಿ ಎತ್ತಿ ಪ್ರತಿಭಟಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬಿಗರ ಚೌಡಯ್ಯನವರು ಒಂದು ಸಾವಿರ ವಚನಗಳನ್ನು ರಚಿಸಿದ್ದು, ಅವುಗಳಲ್ಲಿ 399 ವಚನಗಳು ಲಭ್ಯವಾಗಿವೆ. ಹೀಗಾಗಿ, ಚೌಡಯ್ಯನವರ ಬಗ್ಗೆ ಹಾಗೂ ವಚನಗಳ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕಾಗಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಚಿಂತನೆ ನಡೆಸಬೇಕೆಂದು ಆಸೆ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮಾತನಾಡಿ, ಹನ್ನೇರಡನೆ ಶತಮಾನದ ಅನುಭವ ಮಂಟಪದಲ್ಲಿಯಿದ್ದ ಎಲ್ಲರಿಗೂ ಶರಣ, ಶರಣಿಯರು ಎನ್ನುತ್ತಾರೆ. ಆದರೆ, ಅಂಬಿಗರ ಚೌಡಯ್ಯನವರಿಗೆ ನಿಜಶರಣರು ಎಂದು ಕರೆಯುವುದು ವಿಶೇಷವಾಗಿದೆ. ಹೀಗಾಗಿ, ಈ ಸಮುದಾಯದ ಜನರು ಕೀಳಹಿರಿಮೆಯನ್ನು ಬಿಟ್ಟು ಚೌಡಯ್ಯ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದು ಸಲಹೆ ನೀಡಿದರು.

ನಿಜಶರಣ ಅಂಬಿಗರ ಚೌಡಯ್ಯ ಅವರ ವಚನಗಳನ್ನು ಒಂದು ಕಡೆ ಸೇರಿಸಿ ಮುಂದಿನ ವರ್ಷದ ಒಳಗಾಗಿ ಸಮಗ್ರ ವಚನ ಸಂಪುಟವನ್ನು ಹೊರ ತರಲಾಗುವುದು. ಈ ಸಮಗ್ರ ವಚನ ಸಂಪುಟವನ್ನು ಹೊರ ತರಲು ನಿಮ್ಮೇಲ್ಲ  ಸಹಕಾರಬೇಕೆಂದು ಹೇಳಿದರು.

ಬೇಡಿಕೆಗಳು: ರಾಜ್ಯದಲ್ಲಿ 60ಲಕ್ಷ ಮಂದಿ ಗಂಗಮತಸ್ಥರಿದ್ದು, ಅವರ ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ನ್ಯಾಯ ಒದಗಿಸಬೇಕು. ಗಂಗಮತಸ್ಥರನ್ನು ಎಸ್ಟಿಗೆ ಸೇರಿಸಬೇಕು. ಬೆಂಗಳೂರಿನಲ್ಲಿ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ನಿಗಮ ಸ್ಥಾಪಿಸಿ 1ಸಾವಿರ ಕೋಟಿ ರೂ.ಮೀಸಲಿಡಬೇಕು. ಧಾರವಾಡ ವಿವಿಯಲ್ಲಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸ್ಥಾಪಿಸಬೇಕು. ಪ್ರತಿ ಜಿಲ್ಲೆಯಲ್ಲಿ ಸ್ಮಶಾನಕ್ಕೆ ಭೂಮಿ ಒದಗಿಸಬೇಕು.

ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ, ಬೆಂಗಳೂರು ಜಿಲ್ಲಾ ಗಂಗಾ ಮತಸ್ಥರ ಸಂಘದ ಅಧ್ಯಕ್ಷ ಜಿ.ಟಿ. ವೆಂಕಟೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News