ಕನಸುಗಳ ಸಾಕಾರದಿಂದ ಚಾರಿತ್ರಿಕ ಬದುಕು: ಚಂಪಾ

Update: 2018-01-21 17:09 GMT

ಬೆಂಗಳೂರು, ಜ.21: ಕಂಡಂತ ಎಲ್ಲ ಕನಸುಗಳು ನನಸಾಗಲು ಸಾಧ್ಯವಿಲ್ಲ. ಕನಸುಗಳನ್ನು ಜಾಗೃತಗೊಳಿಸಿ ಕ್ರಿಯಾಶೀಲತೆಯಿಂದ ಸಾಕಾರಗೊಳಿಸಿದರೆ ಚಾರಿತ್ರಿಕ ಬದುಕು ಕಟ್ಟಿಕೊಳ್ಳಬಹುದೆಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಗಾಂಧಿಭವನದಲ್ಲಿ ಪ್ರೊ. ಎಸ್.ಎನ್. ಕಾತರಕಿ-81 ಹಾಗೂ ಗಿರಿಜಾ ತಾಯಿ ಅಭಿನಂದನ ಸಮಿತಿಯಿಂದ ಆಯೋಜಿಸಿದ್ದ, ಪ್ರೊ.ವಿ.ಎಸ್. ಹಿರೇಮಠ ರಚಿತ ‘ದಣಿವರಿಯದ ಕನಸುಗಾರ’ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವ್ಯಕ್ತಿಗೆ ಕನಸೆಂಬುದು ಪ್ರೇರಕ ಶಕ್ತಿ, ಜೀವನದಲ್ಲಿ ಸರಿಯಾದ ಧ್ಯೇಯೋದ್ದೇಶದೊಂದಿಗೆ ಗುರಿ ತಲುಪಲು ಶ್ರಮಿಸಿದರೆ ಸಮಾಜದಲ್ಲಿ ಚರಿತ್ರೆ ಸೃಷ್ಟಿಸುವ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದ ಅವರು, ಎಸ್.ಎನ್. ಕಾತರಕಿ ಕ್ರಿಯಾಶೀಲ ವ್ಯಕ್ತಿತ್ವದ ವ್ಯಕ್ತಿ ಅವರು ಎಂದಿಗೂ ಕಾತುರತೆ ಕಳೆದುಕೊಳ್ಳದೆ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಿ, ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಚಂಪಾ ನುಡಿದರು.

ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ ಪಾಟೀಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರೀಕರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶಿಕ್ಷಣ ಸಂಸ್ಥೆ ಕಟ್ಟಿ ಮುನ್ನಡೆಸುತ್ತಿರುವ ಕಾತರಕಿಯಂತಹ ವ್ಯಕ್ತಿತ್ವಗಳ ಅಗತ್ಯವಿದೆ. ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಕಾತರಕಿಯವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯವಲಯದಲ್ಲಿ ತನ್ನದೇ ಚಾಪು ಮೂಡಿಸಿ, ನಿಷ್ಕಳಂಕ ಮನಸ್ಸಿನಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಿರಾಂಡ ಶಿಕ್ಷಣ ಸಂಸ್ಥೆಯಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ನೌಕರರಿಗೆ ಸನ್ಮಾನಿಸಲಾಯಿತು. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮೀಜಿ, ಪ್ರೊ.ಎಸ್.ಎನ್.ಕಾತರಕಿ, ಗಿರಿಜಾ ತಾಯಿ, ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ, ಹಿರಿಯ ನ್ಯಾಯವಾದಿ ಕೆ.ದಿವಾಕರ, ಡಾ.ಶ್ರೀಧರ, ಮಹಾದೇವ ಹೊರಟ್ಟಿ ಸೇರಿ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News