ಜ.22ರಿಂದ ವಿದೇಶಿ ಮರಳು ಮಾರಾಟ:ನಿರ್ದೇಶಕ ಪ್ರಕಾಶ್

Update: 2018-01-21 12:19 GMT

ಬೆಂಗಳೂರು, ಜ. 21: ವಿದೇಶದಿಂದ ಆಮದು ಮಾಡಿಕೊಂಡಿರುವ ಮರಳಿನ ಮಾರಾಟ ಜ.22ರಿಂದ ಆರಂಭವಾಗಲಿದೆ ಎಂದು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ನಿರ್ದೇಶಕ ಜಿ.ಸಿ.ಪ್ರಕಾಶ್ ತಿಳಿಸಿದ್ದಾರೆ.

ವಿದೇಶದಿಂದ ಆಮದು ಮಾಡಿಕೊಂಡಿರುವ 50ಕೆ.ಜಿ. ಮರಳಿನ ಚೀಲಕ್ಕೆ ಬೆಂಗಳೂರಿನಲ್ಲಿ 200 ರೂ.ಬೆಲೆ ನಿಗದಿಪಡಿಸಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪಾವತಿಸುವ ಶುಲ್ಕ, ಜಿಎಸ್‌ಟಿ ಮತ್ತು ಆಮದು ಸುಂಕ ಸೇರಿ ಪ್ರತಿ ಟನ್ ಮರಳಿಗೆ 4 ಸಾವಿರ ರೂ.ಬೆಲೆ ನಿಗದಿಪಡಿಸಲಾಗಿದೆ ಎಂದರು.

ಬಿಡದಿಯ ಯಾರ್ಡ್‌ನಲ್ಲಿ ಮರಳು ದಾಸ್ತಾನು ಮಾಡಲಾಗಿದೆ. ಜನವರಿ ಕೊನೆಯ ವಾರದಲ್ಲಿ ದೊಡ್ಡಬಳ್ಳಾಪುರ ಹಾಗೂ ನಂತರದ ದಿನಗಳಲ್ಲಿ ಕೆ.ಆರ್.ಪುರದ ಚನ್ನಸಂದ್ರದಲ್ಲಿ ಮರಳು ಮಾರಾಟ ಆರಂಭಿಸಲಾಗುವುದು ಎಂದು ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಮಲೇಷಿಯಾದಿಂದ ಕೃಷ್ಣಪಟ್ಟಣಂಗೆ ಬರುವ ಟನ್ ಮರಳಿಗೆ 2,300ರೂ. ವೆಚ್ಚವಾಗುತ್ತದೆ. ಕೃಷ್ಣಪಟ್ಟಣಂನಲ್ಲೇ ಮರಳು ಚೀಲಕ್ಕೆ ಭರ್ತಿಯಾಗಲಿದೆ. ಬಳಿಕ ರೈಲಿನಲ್ಲಿ ಬೆಂಗಳೂರಿಗೆ ಸಾಗಿಸಲು ಪ್ರತಿ ಟನ್‌ಗೆ 1,100ರೂ.ವೆಚ್ಚವಾಗಲಿದೆ. ಶೇ.5ರಷ್ಟು ಜಿಎಸ್‌ಟಿ, ಗಣಿ ಇಲಾಖೆಗೆ ಪ್ರತಿಟನ್‌ಗೆ 60ರೂ. ಪಾವತಿಸಲಾಗುತ್ತದೆ. ಸಂಸ್ಥೆಗೆ 100ರೂ.ನಿಂದ 150ರೂ.ಲಾಭವಿಟ್ಟುಕೊಂಡು 4 ಸಾವಿರ ರೂ.ದರ ನಿಗದಿ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಎಂಎಸ್‌ಐಎಲ್ ವೆಬ್‌ಸೈಟ್ (www.msilonline.com) ಮೂಲಕವೂ ಮರಳು ಕಾದಿರಿಸಬಹುದು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮರಳು ಮಾರಾಟದ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಮೊಬೈಲ್ ಸಂಖ್ಯೆ- 96069 30236 (ಬಿಡದಿ), 96069 30231 (ದೊಡ್ಡಬಳ್ಳಾಪುರ) ಎಂಎಸ್‌ಐಎಲ್ ಯಾರ್ಡ್ ಸಂಪರ್ಕಸಬಹುದು ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News