ಪರಿಶಿಷ್ಟ ಗುತ್ತಿಗೆದಾರರ ಮೀಸಲಾತಿ ಮಿತಿ ಹೆಚ್ಚಳ: ಸಿಎಂ ಸಿದ್ದರಾಮಯ್ಯ

Update: 2018-01-21 14:44 GMT

ಬೆಂಗಳೂರು, ಜ.21: ಸರಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಕಲ್ಪಿಸಿರುವ 50 ಲಕ್ಷ ರೂ. ಮೀಸಲಾತಿ ಮಿತಿಯನ್ನು 1ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ರವಿವಾರ ಕರ್ನಾಟಕ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘ ನಗರದ ಚಾಮರಾಜಪೇಟೆಯಲ್ಲಿ ಸ್ಥಾಪಿಸಿರುವ ಮಹರ್ಷಿ ವಾಲ್ಮೀಕಿ ಭವನದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಳ ಸಮುದಾಯಗಳಿಗೆ ಆರ್ಥಿಕ ಬಲ ಸಿಕ್ಕರೆ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಎಸ್ಸಿ-ಎಸ್ಟಿ ಸಮುದಾಯಕ್ಕೆ ಆರ್ಥಿಕ ಶಕ್ತಿ ತುಂಬುವಂತಹ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ತಿಳಿಸಿದರು.

ಸಾವಿರಾರು ವರ್ಷಗಳಿಂದ ಶೋಷಣೆಗೆ ತುತ್ತಾಗಿರುವ ದಲಿತ ಸಮುದಾಯ ಆರ್ಥಿಕವಾಗಿ ಬಲಿಷ್ಟರಾಗಬೇಕು. ಈ ಸಮುದಾಯದ ವ್ಯಕ್ತಿಗಳು ಕಾರ್ಖಾನೆಗಳನ್ನು ಸ್ಥಾಪಿಸುವುದರ ಮೂಲಕ ಉದ್ಯಮಿಗಳಾಗಿ ಹೆಸರು ಮಾಡಬೇಕು. ಆ ನಿಟ್ಟಿನಲ್ಲಿ ಸರಕಾರಿ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ 1ಕೋಟಿ ರೂ.ವರೆಗೆ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸಲಾಗುವುದು. ಅಲ್ಲದೆ, ಕೈಗಾರಿಕೆ ಸ್ಥಾಪಿಸಲು ಭೂಮಿ ಸೇರಿದಂತೆ ಆರ್ಥಿಕ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಪರಿಶಿಷ್ಟ ವರ್ಗಕ್ಕೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.7ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕೆಂದು ವಾಲ್ಮಿಕಿ ಸಮುದಾಯದ ಬೇಡಿಕೆಯಾಗಿದೆ. ಇವರ ಬೇಡಿಕೆಯನ್ನು ನಾನು ಬೆಂಬಲಿಸುತ್ತೇನೆ. ರಾಜ್ಯದಲ್ಲಿ ಎಸ್ಸಿ-ಎಸ್ಟಿ ಸಮುದಾಯ ಶೇ.24.1ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಅದರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಕಲ್ಪಿಸಬೇಕೆಂಬುದು ರಾಜ್ಯ ಸರಕಾರದ ಆಶಯವಾಗಿದೆ ಎಂದು ಅವರು ಹೇಳಿದರು.

ಬಿಜೆಪಿಯವರು ಸುಳ್ಳು ಬುರುಕರು: ಒಂದೇ ಒಂದು ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾತನಾಡದ ಬಿಜೆಪಿ ನಾಯಕರು, ಕೆಲಸಕ್ಕೆ ಬಾರದ ವಿಷಯಗಳ ಕುರಿತು ಜನತೆಯಲ್ಲಿ ಸುಳ್ಳುಗಳನ್ನು ಹೇಳುತ್ತಾ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಮ್ಮಿಂದಲೆ ಉದ್ದಾರ ಆಯ್ತು ಎನ್ನುತ್ತಾರೆ. ಆದರೆ, ಏನು ಅಭಿವೃದ್ಧಿಯಾಗಿದೆ ಎಂಬುದನ್ನು ಹೇಳುವುದಿಲ್ಲವೆಂದು ಅವರು ವ್ಯಂಗ್ಯವಾಡಿದರು. ಈ ವೇಳೆ ಶಾಸಕ ಝಮೀರ್ ಅಹ್ಮದ್ ಖಾನ್, ಪ್ರಸನ್ನಾನಂದ ಸ್ವಾಮೀಜಿ ಮತ್ತಿತರರಿದ್ದರು.

‘ಕಾಂಗ್ರೆಸ್‌ನಲ್ಲಿ ನಾಯಕ ಸಮುದಾಯಕ್ಕೆ ಸೇರಿದ 11 ಮಂದಿ ಶಾಸಕರಿದ್ದಾರೆ. ಎಸ್ಸಿ-ಎಸ್ಟಿ ಸಮುದಾಯಕ್ಕೆ ಕಾಂಗ್ರೆಸ್ ಮಾತ್ರ ಅತಿಹೆಚ್ಚು ಅವಕಾಶಗಳನ್ನು ನೀಡುತ್ತಿದೆ. ಹೀಗಾಗಿ ನಾಯಕ ಸಮುದಾಯದ ಮತ್ತಷ್ಟು ಜನಪ್ರತಿನಿಧಿಗಳು ಕಾಂಗ್ರೆಸ್‌ಗೆ ಸೇರಲಿದ್ದಾರೆ’
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News