‘ಮಾಲೂಮಾತ್‌ಕಾ ಎನ್‌ಸೈಕ್ಲೊಪೀಡಿಯಾ ಪುಸ್ತಕ ಲೋಕಾರ್ಪಣೆ’

Update: 2018-01-21 14:29 GMT

ಬೆಂಗಳೂರು, ಜ.21: ಇಂಡಿಯನ್ ಕೌನ್ಸಿಲ್ ಆಫ್ ಫತ್ವಾ ಅಂಡ್ ರಿಸರ್ಚ್ ಟ್ರಸ್ಟ್ ಹೊರತರುತ್ತಿರುವ ‘ಮಾಲೂಮಾತ್‌ಕಾ ಎನ್‌ಸೈಕ್ಲೊಪೀಡಿಯಾ’ ಪುಸ್ತಕವು ಮಾ.24ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಮೌಲಾನ ಬದೀಉಝ್‌ಝಮಾ ಹೇಳಿದರು.

ರವಿವಾರ ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಮೀದ್ ಷಾ ಕಾಂಪ್ಲೆಕ್ಸ್‌ನ ಉರ್ದು ಹಾಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 10 ಸಂಪುಟಗಳಲ್ಲಿ ಹೊರಬರಲಿರುವ ಈ ಪುಸ್ತಕವು 5550 ಪುಟಗಳನ್ನು ಹೊಂದಿರಲಿದೆ ಎಂದರು.

ಕುರ್‌ಆನ್, ಹದೀಸ್, ಇತಿಹಾಸ, ಸಮಾಜದಲ್ಲಿ ಇರುವ ವಿವಿಧ ಬಗೆಯ ಸಮಸ್ಯೆಗಳ ಬಗ್ಗೆಯೂ ಈ ಪುಸ್ತಕ ಬೆಳಕು ಚೆಲ್ಲಲಿದೆ. ಶರೀಅತ್, ಫತ್ವಾ, ವಿಜ್ಞಾನ, ಮಹಿಳೆಯರ ಹಕ್ಕುಗಳು, ಮಕ್ಕಾ, ಮದೀನಾದ ಇತಿಹಾಸ, ಮದ್ರಸಾಗಳು, ಯುವಕರ ಸಮಸ್ಯೆಗಳು, ಅಂತಿಮ ದಿನದ ಗುರುತುಗಳು ಸೇರಿದಂತೆ ಬಹುತೇಕ ವಿಷಯಗಳ ಬಗ್ಗೆ ಈ ಪುಸ್ತಕದಲ್ಲಿ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಅವರು ಹೇಳಿದರು.

ಸುಮಾರು 1.50 ಲಕ್ಷ ಪುಸ್ತಕಗಳ ಮಾಹಿತಿಯನ್ನು ಈ ಒಂದು ಪುಸ್ತಕದಲ್ಲಿ ಒದಗಿಸುವ ಪ್ರಯತ್ನ ಮಾಡಲಾಗಿದೆ. ಈ ಒಂದು ಪುಸ್ತಕವು ಒಂದು ಗ್ರಂಥಾಲಯಕ್ಕೆ ಸಮವಾಗಲಿದೆ. ಯಾವುದೇ ಮಸ್ಲಕ್‌ನ ಭಾವನೆಗಳಿಗೆ ಧಕ್ಕೆಯಾಗದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಉಲೇಮಾಗಳು, ಮುಫ್ತಿಗಳು, ವಿದ್ಯಾರ್ಥಿಗಳಿಗೆ ಈ ಪುಸ್ತಕವು ಒಂದು ಮಾರ್ಗದರ್ಶಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸೈಯ್ಯದ್ ಅಕ್ಬರ್ ಪಾಷ, ಅಮೀರ್ ಶರೀಫ್, ಟ್ರಸ್ಟಿ ಅಬ್ದುಲ್ಲಾ ರಿಯಾಝ್, ಮೌಲಾನ ಆಬಿದ್ ಹುಸೇನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News