ಎಸ್‌ಡಿಪಿಐ ಕುರಿತು ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ: ಶೋಭಾ ಕರಂದ್ಲಾಜೆ

Update: 2018-01-21 15:43 GMT

ಬೆಂಗಳೂರು, ಜ.21: ಕೇರಳದ ಕಣ್ಣೂರಿನಲ್ಲಿ ಶುಕ್ರವಾರ ನಡೆದ ಎಬಿವಿಪಿ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಕೇರಳ ಪೊಲೀಸರು ಬಂಧಿಸಿರುವ ನಾಲ್ವರು ಆರೋಪಿಗಳು ಎಸ್‌ಡಿಪಿಐ ಕಾರ್ಯಕರ್ತರು ಎನ್ನುವುದು ವರದಿಯಾಗಿದೆ. ಎಸ್‌ಡಿಪಿಐ ಜತೆಗೆ ಚುನಾವಣಾ ಮೈತ್ರಿಗೆ ಯತ್ನಿಸುತ್ತಿರುವ ಕಾಂಗ್ರೆಸ್ ಈಗಲೂ ಅದೇ ನಿಲುವು ಹೊಂದಿದೆಯೆ ಎನ್ನುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟೀಕರಣ ನೀಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
 ಎಸ್‌ಡಿಪಿಐ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಸಂಘಟನೆಯಾಗಿದ್ದು, ರಾಜ್ಯದ ಕರಾವಳಿ ಭಾಗ, ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಪಾತ್ರ ವಹಿಸಿರುವುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಇದೀಗ ಕೇರಳದಲ್ಲಿ ಬಂಧಿತರಾಗಿರುವ ಎಸ್‌ಡಿಪಿಐ ಕಾರ್ಯಕರ್ತರು ಹಿಂಸೆಯಲ್ಲಿ ತೊಡಗುತ್ತಾರೆ ಎನ್ನುವುದು ಮತ್ತೊಮ್ಮೆ ದೃಢಪಟ್ಟಿದೆ. ಪಿಎಫ್‌ಐ ಮತ್ತು ನಿಷೇಧಿತ ಸಿಮಿ ಸಂಘಟನೆಗಳು ಉಗ್ರ ಸಂಘಟನೆಗಳಾಗಿದ್ದು, ದೇಶ ವಿರೋಧಿ ವಿದೇಶಿ ಸಂಘಟನೆಗಳ ಜತೆ ಈ ಸಂಸ್ಥೆಗಳ ನಿಕಟ ಸಂಪರ್ಕವಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಬೆಂಗಳೂರಿನ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದಿಂದ ಬಂಧಿತರಾದ ಐವರು ಆರೋಪಿಗಳೂ ಪಿಎಫ್‌ಐಗೆ ಸೇರಿದವರು. ಅದೇ ರೀತಿ ಮಂಗಳೂರಿನ ಶರತ್ ಮಡಿವಾಳ ಹಂತಕರೂ ಇದೇ ಸಂಘಟನೆಗೆ ಸೇರಿದವರು ಎಂದು ಅವರು ದೂರಿದ್ದಾರೆ.

ಕರಾವಳಿ ಮತ್ತು ಇತರ ಭಾಗಗಳಲ್ಲಿ ಭಯಗ್ರಸ್ಥ ವಾತಾವರಣ ಮೂಡಲು ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳೇ ಕಾರಣ. ಆದರೆ, ಕಾಂಗ್ರೆಸ್ ಈ ವಿಷಯದಲ್ಲಿ ಕುರುಡಾಗಿ ವರ್ತಿಸುತ್ತಿದೆ. ಅಷ್ಟೇ ಅಲ್ಲ, ಬಿಜೆಪಿ ಮತ್ತು ಸಂಘ ಪರಿವಾರವನ್ನು ದೂಷಿಸುತ್ತಿದೆ. ಇದೀಗ ಕೇರಳದಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ಬಂಧನವು ಕಾಂಗ್ರೆಸ್‌ನ ನಿಜವಾದ ಸ್ನೇಹಿತರು ಯಾರೂ ಎನ್ನುವುದನ್ನು ಬಟಾಬಯಲುಗೊಳಿಸಿದೆ ಎಂದು ಅವರು ಹೇಳಿದರು.

ಮಂಗಳೂರಿನಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಕಾಂಗ್ರೆಸ್ ಕಾರ್ಯಕರ್ತ ಇಲ್ಯಾಸ್ ಪ್ರಕರಣವು ಆಡಳಿತ ರೂಢ ಕಾಂಗ್ರೆಸ್ ಮತ್ತು ಸಮಾಜ ಬಾಹಿರ ಶಕ್ತಿಗಳ ನಡುವಿನ ಸಂಬಂಧವನ್ನು ಅನಾವರಣಗೊಳಿಸಿದೆ. ಇಲ್ಯಾಸ್ ಪತ್ನಿಯೇ ಆಹಾರ ಸಚಿವ ಯು.ಟಿ.ಖಾದರ್ ಮತ್ತು ಇಲ್ಯಾಸ್ ನಡುವಿನ ನಿಕಟ ಸಂಪರ್ಕವನ್ನು ಖಚಿತಪಡಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News