ರಾಜಕೀಯ ನಾಯಕರಿಂದ ವಿಷಬೀಜ: ಕೆ.ಎಸ್.ಪುಟ್ಟಣ್ಣಯ್ಯ

Update: 2018-01-21 16:55 GMT

ಬೆಂಗಳೂರು, ಜ. 21: ಆರು ತಿಂಗಳಿಂದ ರಾಜ್ಯದ ಕೆಲ ರಾಜಕೀಯ ನಾಯಕರು ಜಾತಿ, ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ಎಲ್ಲಿಯವರೆಗೆ ಜನರು ವೌನವಾಗಿರುತ್ತಾರೊ ಅಲ್ಲಿಯವರೆಗೆ ಘರ್ಷಣೆಗಳು ನಡೆಯುತ್ತಿರುತ್ತವೆ. ಹೀಗಾಗಿ ಜನತೆ ಎಚ್ಚತ್ತುಕೊಳ್ಳುವ ಅಗತ್ಯವಿದೆ ಎಂದು ರೈತ ಮುಖಂಡ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದ್ದಾರೆ.

ರವಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಸ್ವರಾಜ್ ಇಂಡಿಯಾ ಪಕ್ಷದಿಂದ ಹಮ್ಮಿಕೊಂಡಿದ್ದ ‘ಸ್ವರಾಜ್ ಒಳನೋಟ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಯಾರೊಬ್ಬರ ಸ್ವತ್ತಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ರಾಜಕೀಯ ಹಾಗೂ ಬದುಕಿನ ನಿರ್ವಹಣೆ ಬಗ್ಗೆ ಗುಣಾತ್ಮಕ ಕಲ್ಪನೆ ಇರಬೇಕು.

ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಧರ್ಮದ ಹೆಸರಿನಲ್ಲಿ ಘರ್ಷಣೆಗೆ ಪ್ರೇರೇಪಿಸುತ್ತಿದ್ದಾರೆ. ಇಂತಹ ಸಣದರ್ಭದಲ್ಲಿ ಜನತೆ ಮೌನವಹಿಸಿರುವುದು ವಿಷಾಧನೀಯ. ರಾಜಕೀಯಕ್ಕೆ ಗುಣಾತ್ಮಕ ಶಕ್ತಿ ಇದೆ. ಪ್ರಜಾಪ್ರಭುತ್ವದ ಹಕ್ಕನ್ನು ಬಳಸಿ ಇಂತಹವರನ್ನು ಮಟ್ಟಹಾಕಬೇಕಿದೆ ಎಂದರು.

ರಾಜನೀತಿಯಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕ ಭದ್ರತೆ ಒದಗಿಸಬೇಕೆಂಬ ಗುರಿ ಇರಬೇಕು. ರಾಜನೀತಿ ರೂಪಿಸಲು ಸರಕಾರಗಳು ಎಡವಿದಾಗ ಚಳವಳಿಗಳು ನಡೆಯಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಭರಾಟೆಯಿಂದ ಚವಳವಳಿಗಳು ಮೌನವಾಗುತ್ತಿವೆ ರಾಜಕಾರಣಕ್ಕೆ ವಿಶಾಲ ವ್ಯಾಪ್ತಿ ಇದೆ. ಸಾಮಾಜಿಕ ನ್ಯಾಯ ಒದಗಿಸಿ, ನೀತಿತತ್ವ ರೂಪಿಸಲು ರಾಜಕಾರಣ ಬಳಕೆಯಾಗಬೇಕು ಎಂದು ಪುಟ್ಟಣ್ಣಯ್ಯ ತಿಳಿಸಿದರು.

ಹಿರಿಯ ಸಾಹಿತಿ ದೇವನೂರು ಮಹದೇವ ಮಾತನಾಡಿ, ರಾಜಕಾರಣಿಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಮಾತಿನಲ್ಲಿ ಮರಳು ಮಾಡಿ, ಸುಳ್ಳಿನ ಭ್ರಮೆಯ ಬೀಜ ಬಿತ್ತುತ್ತಿದ್ದಾರೆ. ರಾಜಕಾರಣದಲ್ಲಿ ಹಣ ಹಾಕಿ, ಹಣ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಮತದಾರನಿಗೆ ಚಿಲ್ಲರೆ ಚೆಲ್ಲಿ ಸಗಟಾಗಿ ಹಣ ಮಾಡಲು ರಾಜಕೀಯ ನಾಯಕರು ಮುಂದಾಗುತ್ತಿದ್ದಾರೆ. ಇಂತಹ ಪ್ರವೃತ್ತಿಯಿಂದ ಬಿಡುಗಡೆ ಪಡೆಯದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಉದ್ಯೋಗ ಸೃಷ್ಟಿ, ಸ್ವಾವಲಂಭನೆ ಬದುಕು ಕಟ್ಟಿಕೊಡುವುದು ದೇಶದ ನಿಜವಾದ ಅಭಿವೃದ್ಧಿ. ಆದರೆ ರಾಜಕಾರಣಿಗಳು ಸುಳ್ಳು ಭರವಸೆ ನೀಡಿ, ಜನರನ್ನು ಭ್ರಮೆಯಲ್ಲಿ ಬದುಕು ನಡೆಸುವಂತೆ ಮಾಡುತ್ತಿದ್ದಾರೆ. ಇದರ ವಿರುದ್ದ ಚಳುವಳಿಗಳು ರೂಪುಗೊಳ್ಳುವ ಅಗತ್ಯವಿದೆ ಎಂದು ದೇವನೂರು ಮಹದೇವ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ವರಾಜ್ ಇಂಡಿಯ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಜಿತ್ ಜಾ, ರಾಜ್ಯ ವೀಕ್ಷಕ ಪುರುಷೋತ್ತಮ, ಮೈಸೂರು ನಗರ ಸಂಚಾಲಕ ಶಬೀರ್ ಮುತಾಜ್, ಗ್ರಾಮೀಣ ಸಂಚಾಲಕ ನಂಜುಂಡಸ್ವಾಮಿ, ಶಿವಮೊಗ್ಗ ಮಾಧ್ಯಮ ವಕ್ತಾರ ಶ್ರೀಪಾಲ್, ಕರ್ನಾಟಕ ರಾಜ್ಯ ರೈತ ಸಂಘ ಮುಖಂಡ ಬಡಗಲಪುರ ನಾಗೇಂದ್ರ, ಸೇರಿದಂತೆ ಇನ್ನಿತರರಿದ್ದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಿಗೆ ಮರೆವಿನ ಶಾಪ ತಟ್ಟಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ 1ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಅಂಕಿ-ಅಂಶಗಳ ಪ್ರಕಾರ ಉದ್ಯೋಗ ಸೃಷ್ಟಿ ಪಾತಾಳಕ್ಕಿಳಿದಿದೆ. ಅಲ್ಲದೆ, ಪ್ರತಿಯೊಬ್ಬ ನಾಗರಿಕನ ಖಾತೆಗೆ 15ಲಕ್ಷ ರೂ. ಹಾಕುತ್ತೇವೆಂದು ಹೇಳಿದ್ದರು. ಒಂದು ನಯಾಪೈಸೆಯೂ ಜಮೆಯಾಗಿಲ್ಲ. ಇಂತಹ ಸುಳ್ಳುಭರವಸೆಗಳ ವಿರುದ್ಧ ಚಳವಳಿ ರೂಪುಗೊಳ್ಳಬೇಕಿದೆ’

-ದೇವನೂರು ಮಹದೇವ ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News