ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಅರಿವು ಮೂಡಿಸುವುದು ಅವಶ್ಯ: ಅಲ್ಲಂ ವೀರಭದ್ರಪ್ಪ

Update: 2018-01-21 17:03 GMT

ಬೆಂಗಳೂರು, ಜ.21: ಮೊಬೈಲ್ ವಾಟ್ಸಪ್‌ಗಳಲ್ಲಿ ಮುಳುಗಿ ಹೋಗುತ್ತಿರುವ ನಮ್ಮ ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಅರಿವು ಮೂಡಿಸುವುದು ಅವಶ್ಯ ಎಂದು ಮಾಜಿ ಸಚಿವ ಅಲ್ಲಂ ವೀರಭ್ರಪ್ಪ ಹೇಳಿದ್ದಾರೆ.

ಕಲಾಗ್ರಾಮದಲ್ಲಿ ವಚನಜ್ಯೋತಿ ಬಳಗ ಆಯೋಜಿಸಿದ್ದ ಮಕ್ಕಳ ವಚನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದುಕಿಗೆ ದಾರಿದೀಪವಾದ ವಚನ ಸಾಹಿತ್ಯವನ್ನು ಮಕ್ಕಳಿಗೆ ಪರಿಚಯಿಸುವ ಮಕ್ಕಳ ವಚನ ಮೇಳಗಳು ರಾಜ್ಯಾದ್ಯಂತ ನಡೆಯಬೇಕು. ಹೋಬಳಿ ಕೇಂದ್ರಗಳಲ್ಲಿ, ತಾಲ್ಲೂಕುಗಳಲ್ಲಿ, ಜಿಲ್ಲೆಗಳಲ್ಲಿ ಮಕ್ಕಳ ವಚನ ಮೇಳ ನಡೆದರೆ ನಮ್ಮ ಕನ್ನಡ ಸಂಸ್ಕೃತಿಯ, ಬಸವಾದಿ ಪ್ರಮಥರ ವಿಚಾರಗಳು ಮಕ್ಕಳಿಗೆ ಮನದಟ್ಟು ಆಗುವುದರೊಂದಿಗೆ ಇಂಗ್ಲೀಷ್ ಮಾಧ್ಯಮವೇ ಪ್ರಧಾನವಾದ ನಮ್ಮ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗುತ್ತದೆ ಎಂದು ಹೇಳಿದರು.

ಸುಂದರ ಪ್ರಕೃತಿಯ ನಡುವೆ ಮಕ್ಕಳನ್ನು ಕರೆತಂದು ಸಮೃದ್ಧ ವಚನ ಸಾಹಿತ್ಯದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರುಗಳಲ್ಲಿ ಉತ್ಸಾಹ ಮತ್ತು ಸಂತೋಷ ಎರಡನ್ನೂ ತುಂಬುತ್ತಿರುವ ವಚನಜ್ಯೋತಿ ಬಳಗಕ್ಕೆ ಸರಕಾರ ಯಾವುದೇ ನೆರವನ್ನು ನೀಡದಿರುವುದು ವಿಷಾದನೀಯ ಎಂದು ಹೇಳಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ತಾವೇ ವೈಯುಕ್ತಿಕವಾಗಿ ಮನವಿ ಮಾಡುವುದಾಗಿ ತಿಳಿಸಿದರು.

ಮಕ್ಕಳ ವಚನ ಮೇಳ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಎಸ್.ಟಿ. ಸೋಮಶೇಖರ್, ಈ ವಿದ್ಯಾರ್ಥಿ ಸಮೂಹವನ್ನು ನೋಡಿದಾಗ ನನಗೆ ನನ್ನ ವಿದ್ಯಾರ್ಥಿ ಜೀವನ ನೆನಪಾಗುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ನುಡಿಗೆ ಅನ್ವರ್ಥಕವಾಗಿ ಇಂದು ಒಳ್ಳೆಯ ಕೆಲಸ ನಡೆಯುತ್ತಿದೆ. ಇಪ್ಪತ್ತೊಂದು ವರ್ಷಗಳಿಂದ ಮಕ್ಕಳಲ್ಲಿ ವಚನ ಚಳವಳಿಯ ಪರಿಚಯವನ್ನು ಮಾಡಿಸುತ್ತಿರುವುದು ನಿಜಕ್ಕೂ ಒಳ್ಳೆಯ ಕೆಲಸ. ಪ್ರತಿ ವರ್ಷವೂ ಮಕ್ಕಳ ವಚನ ಮೇಳಕ್ಕೆ ನನ್ನ ಕೈಲಾದ ನೆರವನು್ನ ನೀಡುತ್ತೇನೆ ಎಂದು ಘೋಸಿಷಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ, ವಿಶ್ವದ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ ಮತ್ತೊಮ್ಮೆ ಕಲಾಗ್ರಾಮದಲ್ಲಿ ಅನಾವರಣಗೊಂಡಿದೆ. ಇಲ್ಲಿ ಬಸವಣ್ಣ,, ಅಲ್ಲಮ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯನವರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಸಂಸ್ಕೃತಿಯ ಪ್ರಸರಣದಲ್ಲಿ ಮಕ್ಕಳ ವಚನ ಮೇಳ ೊಡ್ಡ ಹೆಜ್ಜೆ ಎಂದು ಪ್ರಶಂಸಿದರು.
  
 ಆಶಯ ನುಡಿಗಳನ್ನಾಡಿದ ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ, ಮಕ್ಕಳಲ್ಲಿ ವಚನ ಸಂಸ್ಕೃತಿಯನ್ನು ಬಿತ್ತುವ ಮೂಲಕ ಪ್ರೀತಿ - ವಿಶ್ವಾಸದ ಹಾಗೂ ಸ್ವಾಭಿಮಾನದ ಬದುಕನ್ನು ರೂಢಿಸಬೇಕೆಂಬುದೇ ಬಳಗದ ಮೂಲ ಉದ್ದೇಶವಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದಲೂ ನಿರಂತರವಾಗಿ ಈ ಕೆಲಸ ಮಾಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಆಯ್ದ ಶಾಲೆಗಳಲ್ಲಿ ವಚನ ತರಗತಿಗಳನ್ನು ಉಚಿತವಾಗಿ ನಡೆಸುವುದಾಗಿ ತಿಳಿಸಿದರು. ತರಳಬಾಳು ಕೇಂದ್ರದ ಕಾರ್ಯದರ್ಶಿ ಡಾ. ಎಸ್. ಸಿದ್ಧಯ್ಯ, ಉದ್ಯಮಿ ವಾಗೀಶ್ ಪಾಟೀಲ್, ಸಾಮಾಜಿಕ ಕಾರ್ಯಕರ್ತರಾದ ಬಿ.ಜಿ.ಭಟ್, ಅನುಪಮ ಪಂಚಾಕ್ಷರಯ್ಯ, ಸಮೀಉಲ್ಲಾಖಾನ್, ಬಳಗದ ಕಾರ್ಯಾಧ್ಯಕ್ಷ ಗುರುಪ್ರಸಾದ ಕುಚ್ಚಂಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News