ನಡಾಲ್, ಸಿಲಿಕ್ ಕ್ವಾರ್ಟರ್ ಫೈನಲ್‌ಗೆ

Update: 2018-01-21 18:29 GMT

ಮೆಲ್ಬೋರ್ನ್, ಜ.21: ಸ್ಪೇನ್‌ನ ರಫೆಲ್ ನಡಾಲ್, ಕ್ರೊಯೇಷಿಯದ ಮರಿನ್ ಸಿಲಿಕ್ ಹಾಗೂ ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇಲ್ಲಿ ರವಿವಾರ ಸುಮಾರು 4 ಗಂಟೆಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್ ಅರ್ಜೆಂಟೀನದ ಡಿಯಾಗೊ ಸ್ಚೆವರ್ಟ್‌ಮನ್‌ರನ್ನು 6-3, 6-7(4/7), 6-3, 6-3 ಸೆಟ್‌ಗಳಿಂದ ಮಣಿಸಿದರು. ನಡಾಲ್ ಅವರು ಡಿಯಾಗೊ ವಿರುದ್ಧ ನಾಲ್ಕನೇ ಬಾರಿ ಜಯ ಸಾಧಿಸಿದರು.

ನಡಾಲ್ 10ನೇ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ನಡಾಲ್ ಕ್ವಾರ್ಟರ್‌ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಮರಿನ್ ಸಿಲಿಕ್‌ರನ್ನು ಎದುರಿಸಲಿದ್ದಾರೆ. ನಡಾಲ್ ಅವರು ಸಿಲಿಕ್ ವಿರುದ್ಧ 5-1 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ.

► 100ನೇ ಗ್ರಾನ್‌ಸ್ಲಾಮ್ ಪಂದ್ಯ ಜಯಿಸಿದ ಸಿಲಿಕ್

 ಇದೇ ವೇಳೆ ಮರಿನ್ ಸಿಲಿಕ್ ಸ್ಪೇನ್‌ನ ಪಾಬ್ಲೊ ಕರ್ರೆನೊ ಬುಸ್ಟಾರನ್ನು ನಾಲ್ಕು ಸೆಟ್‌ಗಳಿಂದ ಸೋಲಿಸುವ ಮೂಲಕ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 100ನೇ ಪಂದ್ಯ ಜಯಿಸಿದ ಸಾಧನೆ ಮಾಡಿದರು. ರವಿವಾರ 3 ಗಂಟೆ, 27 ನಿಮಿಷಗಳ ಕಾಲ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ಯುಎಸ್ ಓಪನ್ ಚಾಂಪಿಯನ್ ಸಿಲಿಕ್ 10ನೇ ಶ್ರೇಯಾಂಕದ ಬುಸ್ಟಾರನ್ನು 6-7(2/7), 6-3, 7-6(7/0),7-6(7/3) ಸೆಟ್‌ಗಳಿಂದ ಮಣಿಸಿದರು.

ಸಿಲಿಕ್ ಮೆಲ್ಬೋರ್ನ್‌ನಲ್ಲಿ ಎರಡನೇ ಬಾರಿ ಅಂತಿಮ-8ರ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 11ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿರುವ ಕ್ರೊಯೇಷಿಯದ ಸಿಲಿಕ್ ತಮ್ಮದೇ ದೇಶದ ಗೊರನ್ ಇವಾನಿಸೆವಿಕ್ ದಾಖಲೆ ಸರಿಗಟ್ಟಿದ್ದಾರೆ.

ವಿಶ್ವದ ನಂ.3ನೇ ಆಟಗಾರ ಡಿಮಿಟ್ರೊವ್ 3 ಗಂಟೆ, 26 ನಿಮಿಷಗಳ ಕಾಲ ನಡೆದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್‌ರನ್ನು 7-6(7/3), 7-6(7/4), 4-6,7-6(7/4) ಸೆಟ್‌ಗಳಿಂದ ಮಣಿಸಿದರು.

ಡಿಮಿಟ್ರೊವ್ ಕ್ವಾರ್ಟರ್ ಫೈನಲ್‌ನಲ್ಲಿ ಬ್ರಿಟನ್‌ನ ಕೈಲ್ ಎಡ್ಮಂಡ್‌ರನ್ನು ಎದುರಿಸಲಿದ್ದಾರೆ. ಎಡ್ಮಂಡ್ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಇಟಲಿಯ ಆ್ಯಂಡ್ರಿಯಸ್ ಸೆಪ್ಪಿ ವಿರುದ್ಧ 6-7(4),7-5,6-2, 6-3 ಸೆಟ್‌ಗಳಿಂದ ಸೋಲಿಸಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದರು.

► ವೋಝ್ನಿಯಾಕಿ,ಎಲಿಸ್ ಮಾರ್ಟೆನ್ಸ್ ಅಂತಿಮ-16ರ ಸುತ್ತಿಗೆ ಲಗ್ಗೆ

ಮೆಲ್ಬೋರ್ನ್, ಜ.21: ದ್ವಿತೀಯ ಶ್ರೇಯಾಂಕದ ಕರೊಲಿನ್ ವೋಝ್ನಿಯಾಕಿ ಸ್ಲೋವಾಕಿಯದ ಮಗ್ಡಾಲೆನಾ ರಿಬಾರಿಕೋವಾರನ್ನು 6-3, 6-0 ನೇರ ಸೆಟ್‌ಗಳಿಂದ ಮಣಿಸಿ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. 19ನೇ ಶ್ರೇಯಾಂಕದ ರಿಬಾರಿಕೋವಾರನ್ನು ಸುಲಭವಾಗಿ ಮಣಿಸಿದ ಡೆನ್ಮಾರ್ಕ್‌ನ ವೋಝ್ನಿಯಾಕಿ 2002ರ ಬಳಿಕ ಮೊದಲ ಬಾರಿ ಅಂತಿಮ-8ರ ಘಟ್ಟ ತಲುಪಿದರು. ಎಲಿಸ್ ಮಾರ್ಟೆನ್ಸ್ ಆರು ವರ್ಷಗಳ ಬಳಿಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಬೆಲ್ಜಿಯಂನ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ರವಿವಾರ ನಡೆದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೇಯಾಂಕರಹಿತ ವಿಶ್ವದ ನಂ.37ನೇ ಆಟಗಾರ್ತಿ ಮಾರ್ಟೆನ್ಸ್ ಕ್ರೊಯೇಷಿಯದ ಪೆಟ್ರಾ ಮಾರ್ಟಿಕ್‌ರನ್ನು 7-6(7/4),7-5 ಸೆಟ್‌ಗಳಿಂದ ಮಣಿಸಿದರು. 2012ರಲ್ಲಿ ಕ್ಲಿಮ್ ಕ್ಲಿಜ್‌ಸ್ಟರ್ಸ್‌ ಬಳಿಕ ಕ್ವಾರ್ಟರ್ ಫೈನಲ್ ತಲುಪಿದ ಬೆಲ್ಜಿಯಂನ ಎರಡನೇ ಆಟಗಾರ್ತಿ ಎನಿಸಿಕೊಂಡರು. ಮಾರ್ಟೆನ್ಸ್ ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ.

► ಪೇಸ್-ರಾಜಾ ಜೋಡಿಗೆ ಸೋಲು

ಮೆಲ್ಬೋರ್ನ್, ಜ.21: ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಪೂರವ್ ರಾಜಾ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಡಬಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ್ದಾರೆ.

ಮೆಲ್ಬೋರ್ನ್ ಪಾರ್ಕ್‌ನಲ್ಲಿ ಒಂದು ಗಂಟೆ, 9 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪೇಸ್-ರಾಜಾ ಜೋಡಿ ಕೊಲಂಬಿಯಾದ ಜೋಡಿ ಜುಯಾನ್ ಸೆಬಾಸ್ಟಿಯನ್ ಹಾಗೂ ರಾಬರ್ಟ್ ಫರ್ಹಾ ವಿರುದ್ಧ 1-6, 2-6 ಸೆಟ್‌ಗಳಿಂದ ಸೋತಿದ್ದಾರೆ.

ಪೇಸ್ ಹಾಗೂ ರಾಜಾ ಐದು ಬ್ರೇಕ್ ಪಾಯಿಂಟ್ ಲಾಭ ಪಡೆಯಲು ವಿಫಲರಾದರು. ಈ ಜೋಡಿ 2017ರ ಋತುವಿನಲ್ಲಿ ಎರಡು ಚಾಲೆಂಜರ್ ಲೆವಲ್ ಪ್ರಶಸ್ತಿ ಜಯಿಸಿತ್ತು. ಇಬ್ಬರೂ ಎರಡನೇ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಆಡುತ್ತಿದ್ದಾರೆ.ಪೇಸ್ ಹಾಗೂ ರಾಜಾ 2017ರ ಯುಎಸ್ ಓಪನ್‌ನ ಎರಡನೇ ಸುತ್ತಿನಲ್ಲಿ ಮುಗ್ಗರಿಸಿದ್ದರು. ಪೇಸ್ 2016ರ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News