ಬಂದ್‌ಗೆ ಸಹಕಾರ ನೀಡುವ ಅವಶ್ಯಕತೆ ಸರಕಾರಕ್ಕಿಲ್ಲ: ಯಡಿಯೂರಪ್ಪ-ಅಶೋಕ್ ಹೇಳಿಕೆಗೆ ಸಿಎಂ ತಿರುಗೇಟು
ಬೆಂಗಳೂರು, ಜ.22: ಬಂದ್‌ಗೆ ಸಹಕಾರ ಮಾಡುವ ಅವಶ್ಯಕತೆ ಸರಕಾರಕ್ಕಿಲ್ಲ, ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಡಬೇಕು, ಬಿಜೆಪಿ ಮುಖಂಡರಿಗೆ ಸರಕಾರದ ವಿರುದ್ಧ ಆರೋಪ ಮಾಡಲು ವಿಷಯಗಳಿಲ್ಲ. ಆದುದರಿಂದ ಸಿಎಂ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹಾಗೂ ಅಶೋಕ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಹಾದಾಯಿ ವಿವಾದ ಇತ್ಯರ್ಥ ಪಡಿಸಲು ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಜ.25 ಬಂದ್‌ಗೆ ಕರೆ ನೀಡಿವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕನ್ನಡ ಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಬಿಜೆಪಿಯವರ ಮಾತು ಕೇಳುತ್ತಿದ್ದರಾ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರಿಗೆ ಅಗತ್ಯವಿದ್ದರೆ ಬಂದ್ ಮಾಡದಂತೆ ಮನವಿ ಮಾಡಲಿ ಎಂದರು. ರಾಜ್ಯದಲ್ಲಿ ಯಾವುದೇ ಬಂದ್ ನಡೆದರೂ ನಷ್ಟವಾಗುವುದು ರಾಜ್ಯ ಸರಕಾರದ ಬೊಕ್ಕಸಕ್ಕೆ. ಪರಿಸ್ಥಿತಿ ಹೀಗಿರುವಾಗ ಸರಕಾರ ಬಂದ್‌ಗೆ ಸಹಕರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಬರುವ ದಿನದಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದು ಸರಕಾರದ ಪ್ರಾಯೋಜಿತ ಬಂದ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಟೀಕಿಸಿದ್ದರು.
ಮತ್ತೆ ಕಾಂಗ್ರೆಸ್ ಅಧಿಕಾರ: ಕಾಂಗ್ರೆಸ್ ಬೆಂಬಲ ನೀಡದಿದ್ದರೆ ದೇವೇಗೌಡರು ಪ್ರಧಾನಿಯಾಗುತ್ತಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವುದಿಲ್ಲ, ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿಯಲಿದೆ ಎಂದು ಸಿಎಂ ಭವಿಷ್ಯ ನುಡಿದರು.
ಮುಂದಿನ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಜೊತೆ ಕೈ ಜೋಡಿಸಲ್ಲ ಎಂಬ ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.