ರಾಜೀನಾಮೆ ಅಂಗೀಕಾರದ ಬಳಿಕ ಬಿಜೆಪಿಗೆ ಸೇರ್ಪಡೆ: ಜೆಡಿಎಸ್ ಶಾಸಕರಿಬ್ಬರ ಸ್ಪಷ್ಟಣೆ

Update: 2018-01-22 14:39 GMT

ಬೆಂಗಳೂರು, ಜ. 22: ‘ ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ತಮ್ಮ ರಾಜೀನಾಮೆಯ ಅಂಗೀಕಾರದ ಬಳಿಕ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ ಯಾಗಲಿದ್ದೇವೆ ಎಂದು ಜೆಡಿಎಸ್ ಶಾಸಕರಾದ ಡಾ.ಶಿವರಾಜ್ ಪಾಟೀಲ್ (ರಾಯಚೂರು) ಹಾಗೂ ಮಾನಪ್ಪ ವಜ್ಜಲ್(ಲಿಂಗಸಗೂರು) ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಸೂಚನೆ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರನ್ನು ಖುದ್ದು ಭೇಟಿಯಾಗಿ ತಮ್ಮ ರಾಜೀನಾಮೆ ಸಲ್ಲಿಕೆಯ ಬಗ್ಗೆ ವಿವರಣೆ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಿದ್ದರು.

ತಮಗೆ ರಾಜೀನಾಮೆ ಸಲ್ಲಿಸುವಂತೆ ಯಾವುದೇ ರೀತಿಯ ಒತ್ತಡಗಳಿಲ್ಲ. ಸ್ವಇಚ್ಛೆಯಿಂದ ನಾನು ಮತ್ತು ಮಾನಪ್ಪ ವಜ್ಜಲ್ ರಾಜೀನಾಮೆ ಸಲ್ಲಿಸಿದ್ದೇವೆ. ಜ.18ಕ್ಕೆ ರಾಜೀನಾಮೆ ಸಲ್ಲಿಸಿದ್ದು, ಆ ಬಳಿಕ ಬಿಜೆಪಿ ಕಚೇರಿಯಲ್ಲಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಕಾರಣಕ್ಕೆ ಅಲ್ಲಿಗೆ ತೆರಳಿದ್ದೆವು. ಆದರೆ, ತಾವೂ ಇನ್ನೂ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿಲ್ಲ ಎಂದು ಡಾ.ಶಿವರಾಜ್ ಪಾಟೀಲ್ ಸ್ಪಷ್ಟಪಡಿದರು.

ಜೆಡಿಎಸ್ ಪಕ್ಷದಲ್ಲಿದ್ದ ಆಂತರಿಕ ನೋವಿನಿಂದ ಬೇಸತ್ತು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದೇವೆ. ಅಲ್ಲದೆ, ತಮ್ಮ ಆಳಲನ್ನು ವರಿಷ್ಠರ ಬಳಿ ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಅವರು ಇದೇ ವೇಳೆ ತಿಳಿಸಿದರು. ಈ ವೇಳೆ ಶಾಸಕ ಮಾನಪ್ಪ ವಜ್ಜಲ್ ಹಾಜರಿದ್ದರು.

‘ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಸೂಚನೆ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆಗೆ ಸ್ಪಷ್ಟಣೆ ನೀಡಿದ್ದೇವೆ. ಸ್ವಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇವೆ. ರಾಜೀನಾಮೆ ಅಂಗೀಕಾರದ ಬಳಿಕ ಬಿಜೆಪಿಗೆ ಸೇರ್ಪಡೆಯಾಗಲಿದ್ದೇವೆ’
-ಮಾನಪ್ಪ ವಜ್ಜಲ್ ಜೆಡಿಎಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News