×
Ad

ಅಂತರ್ಜಾತಿ ವಿವಾಹಗಳಿಂದ ತಾರತಮ್ಯ ನಿರ್ನಾಮ: ವೀರಭದ್ರಚನ್ನಮಲ್ಲ ಸ್ವಾಮೀಜಿ

Update: 2018-01-22 21:14 IST

ಬೆಂಗಳೂರು, ಜ.22: ಅಂತರ್ ಜಾತಿ ಮತ್ತು ಅಂತರ್ ಧರ್ಮಗಳ ನಡುವೆ ಹೆಚ್ಚು ಹೆಚ್ಚು ವಿವಾಹಗಳು ನಡೆದರೆ ಜಾತಿ ಜಾತಿಗಳ ನಡುವಿನ ಅಂತರವನ್ನು ನಿರ್ನಾಮ ಮಾಡಬಹುದು ಎಂದು ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.

ಸೋಮವಾರ ನಗರದ ಬನಶಂಕರಿಯಲ್ಲಿ ಸಾಮೂಹಿಕ ವಿವಾಹ ವೇದಿಕೆ ವತಿಯಿಂದ ಆಯೋಜಿಸಿದ್ದ 19 ನೆ ವರ್ಷದ ಸಾಮೂಹಿಕ ವಿವಾಹೋತ್ಸವ ಕಾರ್ಯಕ್ರಮದಲ್ಲಿ ನೂತನ ವಧು-ವರರಿಗೆ ಆರ್ಶಿವಾದ ಮಾಡಿ ಮಾತನಾಡಿದ ಅವರು, ಅಂತರ್ ಜಾತಿಯ ವಿವಾಹಗಳು ಹೆಚ್ಚಾದಂತೆ ಮರ್ಯಾದೆ ಹತ್ಯೆಗಳು ನಡೆಯುವುದು ಕಡಿಮೆಯಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಪ್ರೀತಿ ಮಾಡುವುದೇ ದೊಡ್ಡ ಅಪರಾಧವಾಗಿ ಬಿಟ್ಟಿದೆ. ಬೇರೆ ಧರ್ಮದ ಅಥವಾ ಜಾತಿಯವರು ಎಂದ ಕೂಡಲೇ ಸ್ವಂತ ಮಗ ಅಥವಾ ಮಗಳು ಎಂಬ ಕನಿಷ್ಠ ಜ್ಞಾನವಿಲ್ಲದೆ ಹತ್ಯೆ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಕಡೆಗಳಲ್ಲಿ ಒಂದು ಧರ್ಮದವರೊಂದಿಗೆ ಇನ್ನೊಂದು ಧರ್ಮದವರು ಹಾಗೂ ಜಾತಿಗಳ ಅಡ್ಡಗೋಡೆಗಳನ್ನು ಒಡೆದು ಹಾಕಿ ಮಾನವೀಯತೆಯನ್ನು ಬೆಳೆಸಬೇಕಿದೆ ಎಂದು ಆಶಿಸಿದರು.

ಶಾಸಕ ಆರ್.ಅಶೋಕ್ ಮಾತನಾಡಿ, ಜೀವನ ಎಂದರೆ ಕೇವಲ ಸುಖ ಮಾತ್ರವಲ್ಲ. ಕಷ್ಟವನ್ನು ಸುಖದ ರೀತಿಯಲ್ಲಿ ಸಮಾನವಾಗಿ ಹಂಚಿಕೊಳ್ಳಬೇಕು. ಆ ಮೂಲಕ ಜೀವನವನ್ನು ಸಮವಾಗಿ ನಿಭಾಯಿಸಬೇಕು. ಆರ್ಥಿಕ ಸಂಕಷ್ಟ ಎದುರಾದಾಗ ಭಯಪಡದೆ ಧೈರ್ಯದಿಂದ ಅದನ್ನು ಎದುರಿಸಬೇಕು. ಯಾವುದೇ ಕಾರಣಕ್ಕೂ ಹಿಂದಿನಿಂದ ಹೇಳಿದ ಮಾತುಗಳಿಗೆ ಕಿವಿಗೊಡಬಾರದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಮಾಜಿ ಮೇಯರ್ ಎಸ್.ಕೆ.ನಟರಾಜು, ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News