×
Ad

ಕನ್ನಡಪರ ಹೋರಾಟದಲ್ಲಿ ಸರಕಾರದ ಹಸ್ತಕ್ಷೇಪವಿಲ್ಲ: ದಿನೇಶ್‌ ಗುಂಡೂರಾವ್

Update: 2018-01-22 21:17 IST

ಬೆಂಗಳೂರು, ಜ.22: ಮಹಾದಾಯಿ ನದಿ ನೀರು ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟದಲ್ಲಿ ಸರಕಾರದ ಹಸ್ತಕ್ಷೇಪವಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪವು ಸತ್ಯಕ್ಕೆ ದೂರವಾದದ್ದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಮಹಾದಾಯಿ ವಿಚಾರದಲ್ಲಿ ರಾಜ್ಯದ ಬೆನ್ನಿಗೆ ನಿಲ್ಲಲಿಲ್ಲ ಎಂಬುದು ಸತ್ಯ. ಈ ವಿಚಾರವು ರಾಜ್ಯದ ಜನತೆಯಲ್ಲಿ ಬೇಸರ ತಂದಿದೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಿವೆ ಎಂದರು.

ಮಹಾದಾಯಿ ವಿಚಾರವನ್ನು ಮೊದಲು ರಾಜಕೀಯಕ್ಕಾಗಿ ಬಳಸಿಕೊಂಡವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ. ಭಗೀರಥನಂತೆ ಒಬ್ಬರೇ ಹೋಗಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಆದರೆ, ಏನೂ ಮಾಡಿಲ್ಲ. ಆದುದರಿಂದ, ರಾಜ್ಯದ ಜನ ದಂಗೆ ಎದ್ದಿದ್ದಾರೆ. ನಾಡು ಹಾಗೂ ನೀರಿನ ವಿಚಾರವಾಗಿರುವುದರಿಂದ ನಾವು ಬಂದ್‌ಗೆ ಬೆಂಬಲ ನೀಡುತ್ತೇವೆ ಎಂದರು.

ಪ್ರಧಾನಿ ಮಧ್ಯಪ್ರವೇಶ ಮಾಡಿ ಎಂದು ಆಗ್ರಹಿಸಿ ರೈತಪರ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಅದಕ್ಕೆ ಎಲ್ಲರೂ ಬೆಂಬಲ ನೀಡಬೇಕಿದೆ. ಬಂದ್‌ಗೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದೇವೆ. ಜ.26ರಂದು ಗಣರಾಜ್ಯೋತ್ಸವ ಇರುವುದರಿಂದ ಜ.25ಕ್ಕೆ ಬೇಕಾದರೆ ಬಂದ್ ಮಾಡುವಂತೆ ಮುಖ್ಯಮಂತ್ರಿ ಹೋರಾಟಗಾರರಿಗೆ ಹೇಳಿದ್ದರು ಎಂದು ಅವರು ತಿಳಿಸಿದರು.

ಜ.25ಕ್ಕೆ ಅಮಿತ್ ಶಾ, ಫೆ.5ಕ್ಕೆ ನರೇಂದ್ರಮೋದಿ ರಾಜ್ಯಕ್ಕೆ ಬರುವ ವಿಚಾರ ನಮಗೇನು ಗೊತ್ತಿದೆಯಾ? ಆದರೂ, ರಾಜ್ಯ ಸರಕಾರದ ಪ್ರಾಯೋಜಿತವಾಗಿ ಈ ಬಂದ್ ಮಾಡಲಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ದಿನೇಶ್‌ಗುಂಡೂರಾವ್ ಆಗ್ರಹಿಸಿದರು.

ಬೆಂಗಳೂರಿನ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಈ ಕ್ಷೇತ್ರದಿಂದ ಕಣಕ್ಕಿಳಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ಮುಂದೆ ಏನು ತೀರ್ಮಾನ ಕೈಗೊಳ್ಳುತ್ತದೆ ನೋಡೋಣ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News