ಬಾಹುಬಲಿಯ ಮಹಾ ಮಸ್ತಕಾಭಿಷೇಕಕ್ಕೆ ಸಕಲ ಸಿದ್ಧತೆ: ಎ.ಮಂಜು
ಬೆಂಗಳೂರು/ಶ್ರವಣಬೆಳಗೊಳ, ಜ.22: ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ಜರುಗುವ ಶ್ರವಣ ಬೆಳಗೊಳದ ಬಾಹುಬಲಿಯ ಮಹಾ ಮಸ್ತಕಾಭಿಷೇಕಕ್ಕೆ ಪೂರ್ವಭಾವಿ ಸಿದ್ಧತೆಗಳು ಭರದಿಂದ ನಡೆದಿದ್ದು, ಯಾತ್ರಾರ್ಥಿಗಳ ವಸತಿಗೆ ಸಂಬಂಧಿಸಿದಂತೆ 12 ಉಪ ನಗರಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ, ಪಶುಸಂಗೋಪನಾ ಸಚಿವ ಮತ್ತು ಮಹಾ ಮಸ್ತಾಭಿಷೇಕದ ಸ್ವಾಗತ ಸಮಿತಿಯ ಅಧ್ಯಕ್ಷ ಎ.ಮಂಜು ತಿಳಿಸಿದ್ದಾರೆ.
ಸೋಮವಾರ ಶ್ರವಣಬೆಳಗೊಳದಲ್ಲಿ ಮಹಾ ಮಸ್ತಕಾಭಿಷೇಕದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 12 ಉಪ ನಗರಗಳು ಸಕಲ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, 600 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಈ ಉಪನಗರಗಳನ್ನು ನಿರ್ಮಿಸಲಾಗಿದೆ ಎಂದರು.
ಈ ಉಪ ನಗರಗಳಲ್ಲಿ ಯಾತ್ರಾರ್ಥಿಗಳಿಗೆ ಅಗತ್ಯ ಶೌಚಾಲಯ, ಸ್ಥಾನಗೃಹ, ಆಸ್ಪತ್ರೆ, ಪೊಲೀಸ್ ಠಾಣೆ, ಕುಡಿಯುವ ನೀರಿನ ಕೇಂದ್ರ ಸೇರಿದಂತೆ ಊಟದ ಸಭಾಂಗಣ ನಿರ್ಮಿಸಿದ್ದು, ಯಾತ್ರಾರ್ಥಿಗಳಿಗೆ ಯಾವುದೇ ಕುಂದುಕೊರತೆ ಬಾರದಂತೆ ರೂಪುಗೊಂಡಿದೆ ಎಂದು ಮಂಜು ಹೇಳಿದರು.
ಶ್ರವಣಬೆಳಗೊಳ ಪಟ್ಟಣ ವ್ಯಾಪ್ತಿಗೆ ಹೊಂದಿಕೊಂಡಂತೆ ತ್ಯಾಗಿ ನಗರ, ಕಳಶ ನಗರ 1 ಮತ್ತು 2, ಪಂಚ ಕಲ್ಯಾಣ ನಗರ, ಯಾತ್ರಿ ನಗರ, ಸ್ವಯಂ ಸೇವಕರ ನಗರ ಹೀಗೆ ಎಲ್ಲಾ ಕ್ಷೇತ್ರದವರಿಗೂ ಒಳಗೊಂಡ ನಗರಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ನಗರಗಳು ಈ ತಿಂಗಳ 30ರ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ವಿಂದ್ಯಗಿರಿ ಬೆಟ್ಟದ ಮೇಲೆ ಬಾಹುಬಲಿ ಮೂರ್ತಿಯ ಮಹಾ ಮಸ್ತಕಾಭಿಷೇಕಕ್ಕೆ ಇದೇ ಮೊದಲ ಬಾರಿಗೆ ಜರ್ಮನ್ ತಂತ್ರಜ್ಞಾನ ಬಳಸಿ ಅಟ್ಟಣಿಗೆಯನ್ನು ನಿರ್ಮಿಸಲಾಗಿದೆ. ಸುಮಾರು 5,500 ಜನ ಕುಳಿತು ಬಾಹುಬಲಿ ಮೂರ್ತಿಯ ಅಭಿಷೇಕದ ದೃಶ್ಯವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ಈ ಅಟ್ಟಣಿ ನಿರ್ಮಾಣದ ಜೊತೆಗೆ ಮೂರು ನವೀನ ರೀತಿಯ ಲಿಫ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಮಟ್ಟದಲ್ಲಿ ನಡೆಸಲು ಸಿದ್ದತೆ ನಡೆಸಲಾಗಿದೆ. ಮಹಾಮಸ್ತಕಾಭಿಷೇಕದ ಕಾಮಗಾರಿಗಳಿಗಾಗಿ ರಾಜ್ಯ ಸರಕಾರ 175 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇದರ ಜೊತೆಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯಗಳಿಗೆ 89 ಕೋಟಿ ರೂ.ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಶ್ರವಣಬೆಳಗೊಳಕ್ಕೆ ಹತ್ತಿರವಿರುವ ಜನಿವಾರ ಕೆರೆಯಲ್ಲಿ ದೋಣಿ ವಿಹಾರ ಕೇಂದ್ರ ಅಭಿವೃದ್ಧಿಪಡಿಸಲಾಗಿದ್ದು, ಯಾತ್ರಾರ್ಥಿಗಳ ಸಾರಿಗೆ ಸಂಪರ್ಕಕ್ಕಾಗಿ 200 ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಜೊತೆಗೆ 23 ರೈಲುಗಳನ್ನು ಈ ಸಂದರ್ಭದಲ್ಲಿ ಓಡಿಸಲು ರೈಲ್ವೆ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಎ.ಮಂಜು ಹೇಳಿದರು.
ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಜೈನ್ ಮಠದ ಸಂಸ್ಕೃತ ಮತ್ತು ಪ್ರಾಕೃತ ಭಾಷಾ ವಿಶ್ವವಿದ್ಯಾನಿಲಯ ಆರಂಭಕ್ಕೆ ಚಾಲನೆ ನೀಡಲಾಗುವುದು. ದೇಶದಲ್ಲೇ ಮೊದಲ ಪ್ರಾಕೃತ ಭಾಷೆಯ ವಿಶ್ವವಿದ್ಯಾನಿಲಯ ಇದಾಗಿದ್ದು ಸುಮಾರು 35 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಮಹಾಮಸ್ತಕಾಭಿಷೇಕದ ಯಶ್ವಸಿಗಾಗಿ ಪ್ರಸಕ್ತ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.
ಮಹಾಮಸ್ತಕಾಭಿಷೇಕದ ಪರಂಪರೆಯಂತೆ ಸಂಸ್ಕೃತಿ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಯಲಿದೆ. ವಿಶ್ವಕ್ಕೆ ಶಾಂತಿ ಮತ್ತು ತ್ಯಾಗದ ಸಂದೇಶವನ್ನು ಸಾರಲು ಈ ಮಹಾಮಸ್ತಕಾಭಿಷೇಕವನ್ನು ನಡೆಸಲಾಗುತ್ತಿದೆ. ಅಲ್ಲದೆ, ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಸಂರಕ್ಷಣೆ ಜತೆ ಶಾಂತಿ, ಅಹಿಂಸೆ, ತ್ಯಾಗದ ಸಂದೇಶವನ್ನು ಜನರಿಗೆ ಸಾರುವ ಹೆಮ್ಮೆಯ ಕಾರ್ಯಕ್ರಮ ಇದಾಗಿದೆ ಎಂದು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಭಗವಾನ್ ಬಾಹುಬಲಿಯ ನಾಲ್ಕು ಸಂದೇಶಗಳಾದ ಅಹಿಂಸಾದಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ ಹಾಗೂ ಜ್ಞಾನದಿಂದ ಸಿದ್ಧಿ ಈ ಸಾರ್ವಕಾಲಿಕ ಸತ್ಯಗಳನ್ನು ಜಗತ್ತಿಗೆ ತಲುಪಿಸುವ ಮಹಾಮಸ್ತಕಾಭಿಷೇಕ ಇದಾಗಿದೆ. ಈ ಮಹಾಮಸ್ತಕಾಭಿಷೇಕ ಕ್ರಿ.ಶ 1081ರಲ್ಲಿ ಪ್ರಾರಂಭವಾಗಿದ್ದು, ಈಗ ನಡೆಯುತ್ತಿರುವುದು 88ನೆ ಮಹಾಮಸ್ತಕಾಭಿಷೇಕವಾಗಿದೆ ಎಂದು ಅವರು ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.