ಯುದ್ಧವಿಮಾನ ಚಲಾಯಿಸಲು ವಾಯುಪಡೆಯ ಪ್ರಥಮ ಮಹಿಳಾ ಪೈಲಟ್ ಸಜ್ಜು

Update: 2018-01-23 04:22 GMT

ಹೊಸದಿಲ್ಲಿ, ಜ. 23: ಇನ್ನು ಕೆಲವೇ ತಿಂಗಳಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ ಇಡಲು ಮಹಿಳೆಯರು ಸಜ್ಜಾಗಿದ್ದಾರೆ.

ಭಾರತದ ಸೂಪರ್‌ಸಾನಿಕ್ ಯುದ್ಧ ವಿಮಾನವನ್ನು ಮುನ್ನಡೆಸಲು ಸಜ್ಜಾಗಿರುವ ಅವನಿ ಚತುರ್ವೇದಿ, ಭಾವನಾ ಕಾಂತ್ ಹಾಗೂ ಮೋಹನಾ ಸಿಂಗ್ ಈ ಐತಿಹಾಸಿಕ ಸಾಧನೆಗೆ ಅಣಿಯಾಗಿರುವ ಮಹಿಳಾ ಪೈಲಟ್‌ಗಳು. ಭಾರತೀಯ ಯುದ್ಧವಿಮಾನಗಳನ್ನು ಮುನ್ನಡೆಸುವ ತರಬೇತಿ ಪಡೆಯುತ್ತಿರುವ ಮಹಿಳೆಯರು ಎಂಬ ಇತಿಹಾಸವನ್ನು ಇವರು ಈಗಾಗಲೇ ಸೃಷ್ಟಿಸಿದ್ದಾರೆ.

ಈಗ ಈ ಮಹಿಳಾ ಪೈಲಟ್‌ಗಳು ಸುಲಭವಾದ ಪಿಲಾಟಸ್ ಪಿಸಿ-7, ಟರ್ಬೋಪ್ರೋಪ್, ಕಿರಣ್ ಹಾಗೂ ಹಾವ್ಕ್ ಜೆಟ್ ಚಾಲನೆ ತರಬೇತಿಯನ್ನು ಪಡೆದಿದ್ದಾರೆ. ಇದೀಗ ಅವನಿ ಹಾಗೂ ಭಾವನಾ, ಅತ್ಯಾಧುನಿಕ ಹಾಗೂ ಕೌಶಲಯುಕ್ತ ಎಂಐಜಿ-21 ವಿಮಾನ ಚಾಲನೆಗೆ ಅಣಿಯಾಗುತ್ತಿದ್ದಾರೆ. 340 ಕಿಲೋಮೀಟರ್ ವೇಗದಲ್ಲಿ ಟೇಕಾಫ್ ಹಾಗೂ ಇಳಿಯುವ ಈ ವಿಮಾನಗಳನ್ನು ಚಲಾಯಿಸುವುದು ಸವಾಲಿನ ಕೆಲಸ.

ಎರಡು ಆಸನಗಳ ಎಂಐಜಿ-21 ವಿಮಾನಗಳ ಚಲಾವಣೆಯಲ್ಲಿ ಸೂರತ್‌ಗಢ ವಾಯುನೆಲೆಯಲ್ಲಿ ತರಬೇತಿ ಪಡೆದಿದ್ದು, ಭಾವನಾ ಕೂಡಾ ಅಂಬಾಲಾ ವಾಯುನೆಲೆಯಲ್ಲಿ ಈ ತರಬೇತಿ ಪಡೆಯಲಿದ್ದಾರೆ. ಮೋಹನಾ ಮಾತ್ರ ಹವಾಕ್ ಅತ್ಯಾಧುನಿಕ ಜೆಟ್ ತರಬೇತಿ ಪಡೆಯುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಎಂಐಜಿ-21 ವಿಮಾನಗಳ ಸಾಮಾನ್ಯ ನಿರ್ವಹಣೆಯ ಕೌಶಲವನ್ನು ಕ್ರೋಢೀಕರಿಸಿದ ಬಳಿಕ ಹಾರಾಟದ ಕೌಶಲ ಮತ್ತು ಮಾರ್ಪಾಡುಗಳ ಬಗ್ಗೆ ಪದವಿ ನೀಡಲಾಗುತ್ತದೆ. ಬಳಿಕ ವಾಯುಯುದ್ಧ ಮತ್ತು ವಾಯುಪ್ರದೇಶದಿಂದ ಭೂ ಪ್ರದೇಶಕ್ಕೆ ಮಾಡುವ ದಾಳಿಯ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News