ಮಗಳಿಗೆ ಹೆಚ್ಚು ಹಂಬಲಿಸುವವರು ಯಾರು ?

Update: 2018-01-23 04:42 GMT

ಹೊಸದಿಲ್ಲಿ, ಜ. 23: ಕುಟುಂಬದಲ್ಲಿ ಮಗಳ ಅಪೇಕ್ಷೆ ಹೆಚ್ಚು ಇರುವುದು ಯಾರಿಗೆ? ತಂದೆಗೋ ಅಥವಾ ತಾಯಿಗೋ? ಈ ಪ್ರಶ್ನೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಕುತೂಹಲಕರ ಉತ್ತರ ಸಿಕ್ಕಿದೆ.

15 ರಿಂದ 49 ವರ್ಷ ವಯಸ್ಸಿನ ಮಹಿಳೆಯರ ಪೈಕಿ ಶೇಕಡ 79 ಮಂದಿ ತಮ್ಮ ಕುಟುಂಬದಲ್ಲಿ ಕನಿಷ್ಠ ಒಂದು ಹೆಣ್ಣುಮಗುವಾದರೂ ಇರಬೇಕು ಎಂದು ಬಯಸಿದ್ದಾರೆ. ಅಂತೆಯೇ 15-54 ವರ್ಷ ವಯಸ್ಸಿನ ಪುರುಷರಲ್ಲಿ ಮಗಳಿಗಾಗಿ ಹಂಬಲಿಸುವವರ ಪ್ರಮಾಣ ಶೇಕಡ 78 ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಅಚ್ಚರಿಯ ವಿಷಯವೆಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಮರು, ಗ್ರಾಮೀಣ ಜನತೆ ಹೀಗೆ ಆರ್ಥಿಕವಾಗಿ ಹಿಂದುಳಿದವರು ಹೆಣ್ಣುಮಕ್ಕಳ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. 2005-06ನೆ ಸಾಲಿನ ಸಮೀಕ್ಷೆಯ ಪ್ರಕಾರ ಶೇಕಡ 74ರಷ್ಟು ಮಹಿಳೆಯರು ಹಾಗೂ ಶೇಕಡ 65ರಷ್ಟು ಪುರುಷರು, ಹೆಣ್ಣುಮಗು ಪಡೆಯುವ ಹಂಬಲ ವ್ಯಕ್ತಪಡಿಸಿದ್ದರು. ಇಷ್ಟಾಗಿಯೂ ಗಂಡುಮಗುವಿಗೆ ಹೆಚ್ಚಿನ ಆದ್ಯತೆಯ ಪ್ರವೃತ್ತಿ ಮುಂದುವರಿದಿದೆ.

ಶೇಕಡ 81ರಷ್ಟು ಗ್ರಾಮೀಣ ಮಹಿಳೆಯರು ಹೆಣ್ಣುಮಗುವಿಗೆ ಹಂಬಲಿಸಿದ್ದರೆ, ನಗರದ ಮಹಿಳೆಯರಲ್ಲಿ ಶೇಕಡ 75ರಷ್ಟು ಮಂದಿ ಮಾತ್ರ ಹೆಣ್ಣುಮಗು ಬೇಕು ಎಂಬ ಇಚ್ಛೆ ಹೊಂದಿದ್ದಾರೆ. ಅನಕ್ಷರಸ್ಥ ಹೆಣ್ಣುಮಕ್ಕಳಲ್ಲಿ ಈ ಪ್ರಮಾಣ ಇನ್ನೂ ಅಧಿಕ. ಶೇಕಡ 85ರಷ್ಟು ಅನಕ್ಷರಸ್ಥ ಮಹಿಳೆಯರು ಕನಿಷ್ಠ ಒಂದು ಹೆಣ್ಣುಮಗು ಬೇಕು ಎಂಬ ಅಭಿಪ್ರಾಯ ಹೊಂದಿರುವುದು ವ್ಯಕ್ತವಾಗಿದೆ. 12ನೇ ತರಗತಿ ಉತ್ತೀರ್ಣರಾದ ಮಹಿಳೆಯರ ಪೈಕಿ ಕೇವಲ 72 ಶೇಕಡ ಮಾತ್ರ ಈ ಅಭಿಪ್ರಾಯ ಹೊಂದಿದ್ದಾರೆ.

ಗ್ರಾಮೀಣ ಪುರುಷರಲ್ಲಿ ಶೇಕಡ 80 ಮಂದಿ ಹಾಗೂ ನಗರದಲ್ಲಿ ಶೇಕಡ 75ರಷ್ಟು ಪುರುಷರು ಹೆಣ್ಣುಮಗುವನ್ನು ಬಯಸಿದ್ದಾರೆ. ಹೆಣ್ಣುಮಗುವಿಗೆ ಹಂಬಲಿಸುವ ಅನಕ್ಷರಸ್ಥ ಪುರುಷರ ಪ್ರಮಾಣ ಶೇಕಡ 83ರಷ್ಟಿದ್ದರೆ, 12ನೆ ತರಗತಿ ಉತ್ತೀರ್ಣರಾದ ಪುರುಷರ ಪೈಕಿ ಶೇಕಡ 74ರಷ್ಟು ಮಂದಿ ಮಾತ್ರ ಹೆಣ್ಣುಮಗು ಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಮುಸ್ಲಿಮ್ ಮಹಿಳೆಯರಲ್ಲಿ ಶೇಕಡ 81, ಬೌದ್ಧರಲ್ಲಿ ಹಾಗೂ ಹಿಂದೂಗಳಲ್ಲಿ ಶೇಕಡ 79ರಷ್ಟು ಮಹಿಳೆಯರು ಹೆಣ್ಣುಮಗುವಿನ ಬಗ್ಗೆ ಒಲವು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News