ಹಾದಿಯಾಳಿಗೆ ಮಾತ್ರ ತನ್ನ ಆಯ್ಕೆಯ ಬಗ್ಗೆ ನಿರ್ಧರಿಸುವ ಹಕ್ಕಿದೆ: ಸುಪ್ರೀಂ ಕೋರ್ಟ್

Update: 2018-01-23 07:08 GMT

ಹೊಸದಿಲ್ಲಿ, ಜ.23: ಹಾದಿಯಾ-ಶಫಿನ್ ಜಹಾನ್ ವಿವಾಹ ಪ್ರಕರಣದ ಕಾನೂನಾತ್ಮಕ ವಿಚಾರಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ತನಿಖೆ ನಡೆಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್  ಹೇಳಿದೆ. 

"ಹಾದಿಯಾಳ ಆಯ್ಕೆಯ ಕಾನೂನುಬದ್ಧತೆಯನ್ನೂ ನಮಗೆ ಪ್ರಶ್ನಿಸುವ ಹಾಗಿಲ್ಲ. ಪ್ರಾಪ್ತ ವಯಸ್ಸಿನ ಮಹಿಳೆಯೊಬ್ಬಳನ್ನು ಅವಳ ಹೆತ್ತವರ ಜತೆ ವಾಸಿಸುವಂತೆ ಬಲವಂತ ಪಡಿಸುವ ಹಾಗಿಲ್ಲ. ತನ್ನ ಆಯ್ಕೆಗಳ ಬಗ್ಗೆ ನಿರ್ಧರಿಸುವ ಹಕ್ಕು ಹಾದಿಯಾಳಿಗೆ ಮಾತ್ರ ಇದೆ'' ಎಂದು ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.

ಕೇರಳ ಹೈಕೋರ್ಟ್ ತಮ್ಮ ವಿವಾಹವನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಹಾದಿಯಾಳ ಪತಿ ಶಫಿನ್ ಜಹಾನ್ ದಾಖಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿದೆ.

ಪ್ರಾಪ್ತ ವಯಸ್ಸಿನವರಾಗಿರುವ ಮಹಿಳೆ ಮತ್ತು ಪುರುಷನೊಬ್ಬನ ವಿವಾಹವನ್ನು ನ್ಯಾಯಾಲಯ ರದ್ದುಗೊಳಿಸಬಹುದೇ ಎಂಬ ವಿಚಾರದ ಕಾನೂನಾತ್ಮಕತೆಯ ಬಗ್ಗೆ ಮಾತ್ರ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ. ಎನ್‍ಐಎ ತನ್ನ ವರದಿ ಸಲ್ಲಿಸಿದ ನಂತರ ಹಾದಿಯಾಳಿಗೆ ಶಿಕ್ಷಣ ಮುಂದುವರಿಸಲು ನ್ಯಾಯಾಲಯ ಅನುಮತಿಸಬೇಕು. ಆಕೆ ಸುರಕ್ಷಿತಳಾಗಿದ್ದಾಳೆಂಬುದು ಸಂತೋಷ ಎಂದು ಹಾದಿಯಾಳ ತಂದೆಯ ಪರ ವಕೀಲರಾದ ಎ ರಘುನಾಥ್ ತಿಳಿಸಿದರು.

ಮುಂದಿನ ವಿಚಾರಣೆ ಫೆಬ್ರವರಿ 22ರಂದು ನಡೆಯಲಿದೆ. ಕಳೆದ ನವೆಂಬರ್ ತಿಂಗಳಲ್ಲಿ ನ್ಯಾಯಾಲಯವು ಹಾದಿಯಾ ತನ್ನ ಶಿಕ್ಷಣ ಮುಂದುವರಿಸುವ ಸಲುವಾಗಿ ಆಕೆಯನ್ನು ತಮಿಳುನಾಡಿನ ಸೇಲಂಗೆ ಕಳುಹಿಸಿತ್ತು. ಆಗ ವಿಚಾರಣೆ ವೇಳೆ ಹಾದಿಯಾ ತನಗೆ ತನ್ನ ಪತಿ ಜತೆ ಹೋಗಬೇಕಂಬ ಇಚ್ಛೆಯಿದೆ ಹಾಗೂ ಸ್ವಾತಂತ್ರ್ಯ ಬೇಕೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News