ಬಿಜೆಪಿ ಅಧಿಕಾರವಧಿಯಲ್ಲಿ ಗಗನಕ್ಕೇರಿದ ಇಂಧನ ದರ

Update: 2018-01-23 15:08 GMT

 ಹೊಸದಿಲ್ಲಿ,ಜ.23: 2014ರಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಇಂಧನ ದರಗಳು ಅತ್ಯಧಿಕ ಮಟ್ಟವನ್ನು ತಲುಪಿವೆ. ಡೀಸೆಲ್ ಪ್ರತಿ ಲೀಟರ್‌ಗೆ 63.20 ದರದೊಂದಿಗೆ ದಾಖಲೆ ಸೃಷ್ಟಿಸಿದ್ದು, ಅಬಕಾರಿ ಸುಂಕವನ್ನು ಕಡಿತಗೊಳಿಸುವಂತೆ ತೈಲ ಸಚಿವಾಲಯವು ವಿತ್ತ ಸಚಿವಾಲಯವನ್ನು ಕೋರಿದೆ.

ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ ದರ ಮಂಗಳವಾರ 72.38 ರೂ.ಆಗಿದ್ದು, ಇದು 2014 ಮಾರ್ಚ್ ಬಳಿಕ ಅತ್ಯಧಿಕವಾಗಿದೆ. ಡಿಸೆಂಬರ್ ಮಧ್ಯಭಾಗದಿಂದೀಚಿಗೆ ಪ್ರತಿ ಲೀ.ದರದಲ್ಲಿ 3.31 ರೂ.ಹೆಚ್ಚಳವಾಗಿದೆ.

ಮುಂಬೈನಲ್ಲಿ ಪ್ರತಿ ಲೀ.ಪೆಟ್ರೋಲ್ ದರ 80 ರೂ.ದಾಟಿದ್ದು, ಇದು ದೇಶದಲ್ಲಿಯೇ ಅತ್ಯಂತ ದುಬಾರಿ ದರವಾಗಿದೆ. ಡೀಸೆಲ್ ಪ್ರತಿ ಲೀಟರ್‌ಗೆ 67.30 ರೂ.ಗೆ ತಲುಪಿದ್ದು, ರಾಜ್ಯದಲ್ಲಿ ಹೆಚ್ಚಿನ ವ್ಯಾಟ್ ವಿಧಿಸಲಾಗುತ್ತಿದೆ.

ಡಿಸೆಂಬರ್ ಮಧ್ಯಭಾಗದಿಂದೀಚಿಗೆ ಪ್ರತಿ ಲೀ.ಡೀಸೆಲ್ ದರ 4.86 ರೂ.ಹೆಚ್ಚಾಗಿದೆ ಎಂದು ತೈಲ ಮಾರಾಟ ಕಂಪನಿಗಳು ತಿಳಿಸಿವೆ.

ಜಾಗತಿಕ ಕಚ್ಚಾತೈಲ ಬೆಲೆಗಳ ಏರಿಕೆಯಿಂದಾಗಿ ದೇಶಿಯ ಬೆಲೆಗಳು ಹೆಚ್ಚಳ ಗೊಂಡಿದ್ದು, ಮುಂದಿನ ವಾರ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಕಡಿತ ಗೊಳಿಸುವಂತೆ ತೈಲ ಸಚಿವಾಲಯವು ವಿತ್ತ ಸಚಿವಾಲಯವನ್ನು ಕೋರಿದೆ. ಕೇಂದ್ರ ಸರಕಾರವು ಪ್ರತಿ ಲೀ.ಪೆಟ್ರೋಲ್‌ಗೆ 19.48 ರೂ. ಮತ್ತು ಡೀಸೆಲ್‌ಗೆ 15.33 ರೂ.ಅಬಕಾರಿ ಸುಂಕವನ್ನು ವಿಧಿಸುತ್ತಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಮಂಗಳವಾರ ಬ್ರೆಂಟ್ ಮತ್ತು ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರಮೀಡಿಯೇಟ್ ಕಚ್ಚಾ ತೈಲಗಳ ಬೆಲೆ ಪ್ರತಿ ಬ್ಯಾರೆಲ್‌ಗೆ ಅನುಕ್ರಮವಾಗಿ 69.41 ಡಾ. ಮತ್ತು 63.99 ಡಾ.ಗೆ ಏರಿಕೆಯಾಗಿವೆ.

ಬಿಜೆಪಿ ಸರಕಾರವು 2014 ನವೆಂಬರ್-2016 ಜನವರಿ ಅವಧಿಯಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಇಳಿದಿದ್ದಾಗ ಬೊಕ್ಕಸಕ್ಕೆ ಆದಾಯವನ್ನು ಹೆಚ್ಚಿಸಿಕೊಳ್ಳಲು ಒಂಭತ್ತು ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಈ ಅವಧಿಯಲ್ಲಿ ಅದು ಪೆಟ್ರೋಲ್ ಮೇಲೆ ಪ್ರತಿ ಲೀ.ಗೆ ಒಟ್ಟು 11.77 ರೂ. ಮತ್ತು ಡೀಸೆಲ್ ಮೇಲೆ 13.47 ರೂ.ಗಳಷ್ಟು ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ 2014-15ರಲ್ಲಿ 99,000 ಕೋ.ರೂ.ಗಳಿದ್ದ ಅದರ ಅಬಕಾರಿ ಸುಂಕ ಆದಾಯ 2016-17ನೇ ಸಾಲಿಗೆ 2,42,000 ಕೋ.ರೂ.ಗೆ ಏರಿಕೆಯಾಗಿತ್ತು. ಆದರೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಒಂದು ಬಾರಿ ಮಾತ್ರ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ ಎರಡು ರೂ.ಕಡಿತಗೊಳಿಸಿತ್ತು. ಈ ಕಡಿತದಿಂದಾಗಿ ಸರಕಾರದ ವಾರ್ಷಿಕ ಆದಾಯ 26,000 ಕೋ.ರೂ.ಗಳಷ್ಟು ಮತ್ತು ಪ್ರಸಕ್ತ ಹಣಕಾಸು ವರ್ಷದ ಉಳಿದ ಭಾಗಕ್ಕೆ ಆದಾಯ 13,000 ಕೋ.ರೂ.ಗಳಷ್ಟು ಖೋತಾಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News